ಆಪರೇಷನ್​ ಕಮಲ ಆತಂಕ: ಕೈ ಸಚಿವರ ಸಭೆ ಕರೆದ ಡಿಸಿಎಂ ಪರಮೇಶ್ವರ್​

ಬೆಂಗಳೂರು: ಮೈತ್ರಿ ಸರ್ಕಾರ ಪತನಗೊಳಿಸಲು ಬಿಜೆಪಿ ಆಪರೇಷನ್​ ಕಮಲ ನಡೆಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್​ ಅವರು ಇಂದು ಕಾಂಗ್ರೆಸ್​ ಸಚಿವರ ತುರ್ತು ಸಭೆ ಕರೆದಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಉಪಾಹಾರ ಕೂಟದ ನೆಪದಲ್ಲಿ ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​, ಸಚಿವರಾದ ತುಕಾರಾಂ, ಪುಟ್ಟರಂಗಶೆಟ್ಟಿ, ಪರಮೇಶ್ವರ್​ ನಾಯ್ಕ್​, ಪ್ರಿಯಾಂಕ್​ ಖರ್ಗೆ ಸಭೆಗೆ ಆಗಮಿಸಿದ್ದಾರೆ.

ಕಾಂಗ್ರೆಸ್​ನ ಅಸಮಾಧಾನಿತ ಶಾಸಕರನ್ನು ಸಂಪರ್ಕಿಸಲು ಸಿದ್ದರಾಮಯ್ಯ, ಪರಮೇಶ್ವರ್​, ದಿನೇಶ್​ ಗುಂಡೂರಾವ್​ ಮತ್ತು ಸಚಿವ ಡಿ.ಕೆ. ಶಿವಕುಮಾರ್​ ಪ್ರಯತ್ನಿಸುತ್ತಿದ್ದಾರೆ. ಆದರೆ ಕೆಲ ಶಾಸಕರು ದೂರವಾಣಿ ಸಂಪರ್ಕಕ್ಕೂ ಸಿಗುತ್ತಿಲ್ಲ ಮತ್ತು ಬಿಜೆಪಿ ಸಂಪರ್ಕದಲ್ಲಿರುವವರ ನಿಖರ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ.