ಬೆಂಗಳೂರು: ಗಣಿ ಅಕ್ರಮದಲ್ಲಿ ಸಿಲುಕಿ ಶಾಸಕ ಸ್ಥಾನದಿಂದ ಅನರ್ಹರಾಗಿರುವ ಗಾಲಿ ಜನಾರ್ದನ ರೆಡ್ಡಿ ಸದ್ಯ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಮಧ್ಯೆಯೇ ಅವರ ಕುಟುಂಬದ ಕುಡಿ, ಪುತ್ರ ಕಿರೀಟಿ ಅಭಿನಯಿಸಿರುವ ಮೊದಲ ಸಿನಿಮಾ ‘ಜೂನಿಯರ್’ ರಿಲೀಸ್‌ಗೆ ಸಿದ್ಧವಾಗಿದೆ. ಈ ಮೂಲಕ ಗಾಲಿ ಕುಟುಂಬಕ್ಕೆ ಸಿಹಿ-ಕಹಿಯ ಅನುಭವ ಎಂಬಂತಾಗಿದೆ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ‘ಜೂನಿಯರ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡುತ್ತಿರುವ ವಿಚಾರ ಗೊತ್ತೇ ಇದೆ. ಬಿಗ್ ಬಜೆಟ್‌ನಲ್ಲಿ ತಯಾರಾಗಿರುವ ಈ ಸಿನಿಮಾಕ್ಕೆ 2022ರ ಮಾರ್ಚ್‌ನಲ್ಲಿ ಮುಹೂರ್ತ ನೆರವೇರಿಸಲಾಗಿತ್ತು. ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿ ಶುಭ ಹಾರೈಸಿದ್ದರು. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ತಯಾರಾಗುತ್ತಿರುವ ಈ ಚಿತ್ರಕ್ಕೆ ‘ಮಾಯಾಬಜಾರ್’ ಖ್ಯಾತಿಯ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಪೂರ್ಣವಾಗಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಇತ್ತೀಚೆಗೆ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು, ಇದೇ ಜುಲೈ 18ಕ್ಕೆ ‘ಜೂನಿಯರ್’ ತೆರೆ ಮೇಲೆ ಅಪ್ಪಳಿಸಲಿದೆ. ಹೈ ಬಜೆಟ್‌ನ ಈ ಸಿನಿಮಾದಲ್ಲಿ ಕನ್ನಡ ಸೇರಿ ಹಲವು ಪರಭಾಷಾ ತಾರೆಯರು ಅಭಿನಯಿಸಿದ್ದಾರೆ. ಕಿರೀಟಿಗೆ ಶ್ರೀಲೀಲಾ ಜೋಡಿಯಾಗಿದ್ದು, ರವಿಚಂದ್ರನ್, ಜೆನೀಲಿಯಾ ದೇಶ್ಮುಖ್ ಕಲಾಬಳಗದಲ್ಲಿದ್ದಾರೆ. ಇನ್ನು ಸಿನಿಮಾ ತಾಂತ್ರಿಕವಾಗಿ ಸಶಕ್ತವಾಗಿ ಮೂಡಿಬರುತ್ತಿದ್ದು, ದೇವಿಶ್ರೀ ಪ್ರಸಾದ್ ಸಂಗೀತ, ‘ಬಾಹುಬಲಿ’ ಖ್ಯಾತಿಯ ಕೆ. ಸೆಂಥಿಲ್ ಕುಮಾರ್ ಛಾಯಾಗ್ರಹಣ, ಪೀಟರ್ ಹೈನ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಬಿಡುಗಡೆಗೆ ಹೊಸ್ತಿಲಲ್ಲೇ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡುವ ನಿಟ್ಟಿನಲ್ಲಿ ಇದೇ ತಿಂಗಳ 19ರಂದು ಚಿತ್ರದ ಮೊದಲ ಹಾಡು ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.
