ಭದ್ರಕೋಟೆಯೊಳಗೆ ಅಭ್ಯರ್ಥಿಗಳ ಭವಿಷ್ಯ

ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ ಮತಯಂತ್ರಗಳು ಉಡುಪಿ ಡಿ ಮಸ್ಟರಿಂಗ್ ಕೇಂದ್ರ ಅಜ್ಜರಕಾಡು ಸೇಂಟ್ ಸಿಸಿಲಿ ಶಾಲೆಯ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿವೆ.

ಒಟ್ಟು 18 ಕೊಠಡಿಗಳಲ್ಲಿ ಮತಯಂತ್ರಗಳನ್ನು ಇರಿಸಲಾಗಿದ್ದು, ಮೊದಲ ಹಂತದ ಭದ್ರತೆ ಜವಾಬ್ದಾರಿಯನ್ನು ಕೇಂದ್ರಪಡೆಗಳಿಗೆ ವಹಿಸಲಾಗಿದೆ. ಮೇ 23ರವರೆಗೆ 24 ಗಂಟೆಗಳ ಕಾಲ ಕೇಂದ್ರ ಪಡೆ ಮತ್ತು ಪೊಲೀಸರು ಬಿಗು ಭದ್ರತೆ ಒದಗಿಸಲಿದ್ದಾರೆ.

ಕೇಂದ್ರ ಸಶಸ್ತ್ರ ಪೊಲೀಸ್ ಮೀಸಲು ಪಡೆ(ಸಿಆರ್‌ಪಿಎಫ್)ಯ ಒಂದು ತುಕಡಿ (34 ಯೋಧರು) ಶಸ್ತ್ರಸಜ್ಜಿತರಾಗಿ ಭದ್ರತೆಯಲ್ಲಿದ್ದಾರೆ. ಸ್ಟ್ರಾಂಗ್ ರೂಂ ಮುಂಭಾಗ, ಕೇಂದ್ರದ ವಿವಿಧ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ರಾಜ್ಯಸಶಸ್ತ್ರ ಮೀಸಲು ಪಡೆ 1 ತುಕಡಿ (34 ಮಂದಿ), 2 ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 20 ಪೊಲೀಸರು, ವಿಧ್ವಂಸಕ ಕೃತ ತಡೆ ಘಟಕ 2 ಕರ್ತವ್ಯದಲ್ಲಿವೆ. ಸ್ಟ್ರಾಂಗ್ ರೂಂನ ಎಲ್ಲ ಬಾಗಿಲುಗಳಿಗೆ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ. 1 ಡಿವೈಎಸ್‌ಪಿ, 1 ಪೊಲೀಸ್ ವೃತ್ತ ನಿರೀಕ್ಷಕ, 2 ಪೊಲೀಸ್ ಉಪ ನಿರೀಕ್ಷಕ, 69 ಮುಖ್ಯ ಪೇದೆ ಮತ್ತು ಪೇದೆಗಳು ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ರಾತ್ರಿಯಿಡೀ ಕೆಲಸ: ಮತಯಂತ್ರಗಳು ಶುಕ್ರವಾರದವರೆಗೂ ನಿರಂತರವಾಗಿ ಬರುತ್ತಿದ್ದು, ಸೇಂಟ್ ಸಿಸಿಲಿ ಶಾಲೆಯಲ್ಲಿ 300ರಷ್ಟು ಸಿಬ್ಬಂದಿ, ಅಧಿಕಾರಿಗಳು ರಾತ್ರಿ ನಿದ್ದೆ ಬಿಟ್ಟು ಕೆಲಸ ಮಾಡಿದ್ದಾರೆ. ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಎಡಿಸಿ ವಿದ್ಯಾಕುಮಾರಿ, ಎಸ್‌ಪಿ ನಿಶಾ ಜೇಮ್ಸ್ ಪರಿಶೀಲಿಸಿ, ಮಾರ್ಗದರ್ಶನ ನೀಡುತ್ತಿದ್ದರು. ಬೆಳಗ್ಗೆ ಸ್ಟ್ರಾಂಗ್ ರೂಂ ಒಂದರಲ್ಲಿ ಕ್ಷೇತ್ರದ ಚುನಾವಣಾ ವೀಕ್ಷಕ ಕೃಷ್ಣ ಕುನಾಲ್, ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಭದ್ರತೆ ಕುರಿತು ಸಮಾಲೋಚನೆ ನಡೆಸಿದರು. ಸ್ಟ್ರಾಂಗ್ ರೂಂ ಸೀಲಿಂಗ್ ಪ್ರಕ್ರಿಯೆ ಸಾಯಂಕಾಲ ಪೂರ್ಣಗೊಂಡಿತು.

ಕೇಂದ್ರದ ಚಲನವಲನ ಗಮನಿಸಲು 105 ಸಿಸಿಕ್ಯಾಮರಾ ಅಳವಡಿಸಲಾಗಿದೆ. ವಿದ್ಯುತ್ ಅವಘಡ ನಡೆಯದಂತೆ ಮತಯಂತ್ರಗಳ ಕೊಠಡಿಗಳ ವಿದ್ಯುತ್ ಸಂಪರ್ಕವನ್ನು ಮೆಸ್ಕಾಂ ನೇತೃತ್ವದಲ್ಲಿ ಕಡಿತಗೊಳಿಸಲಾಗಿದೆ. ಅಗ್ನಿಶಾಮಕದಳ, ಆಂಬುಲೆನ್ಸ್ ಸ್ಥಳದಲ್ಲಿದೆ.

ಜಿಪಿಎಸ್ ಟ್ರಾಕಿಂಗ್
ಗುರುವಾರ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಶುಕ್ರವಾರ ಬೆಳಗ್ಗೆ 5 ಗಂಟೆವರೆಗೂ ಬೈಂದೂರು ಹೊರತು ಪಡಿಸಿ ಉಡುಪಿ ಜಿಲ್ಲೆಗೆ ಸಂಬಂಧಿಸಿದ ಮತಯಂತ್ರಗಳು ಭದ್ರತೆಯಲ್ಲಿ ಸ್ಟ್ರಾಂಗ್ ರೂಂ ಸೇರಿದವು. ಚಿಕ್ಕಮಗಳೂರಿನ ಮತಯಂತ್ರಗಳು ಭಾರಿ ಭದ್ರತೆಯೊಂದಿಗೆ ಶುಕ್ರವಾರ ಮಧ್ಯಾಹ್ನ 12:45ಕ್ಕೆ ತಲುಪಿದವು. ಮತಯಂತ್ರ ಸಾಗಾಟದ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿತ್ತು. ಎರಡೂ ಜಿಲ್ಲೆಗಳ ಮತಯಂತ್ರ ಡಿ ಮಸ್ಟರಿಂಗ್ ಕೇಂದ್ರ ತಲುಪುವವರೆಗೆ ಶಾಲೆಯಲ್ಲಿ ತೆರೆಯಲಾಗಿದ್ದ ಜಿಪಿಎಸ್ ಟ್ರಾಕಿಂಗ್ ಕೊಠಡಿಯಲ್ಲಿ ಅಧಿಕಾರಿಗಳು ಮಾನಿಟರ್ ಮಾಡುತ್ತಿದ್ದರು.

ಉಡುಪಿ ಶೇ.1.42 ಮತದಾನ ಹೆಚ್ಚಳ
ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ.75.91 ಮತದಾನವಾಗಿದ್ದು, ಶೇ.1.42ರಷ್ಟು ಹೆಚ್ಚಳ ದಾಖಲಾಗಿದೆ.

2009 ಲೋಕಸಭಾ ಚುನಾವಣೆಯಲ್ಲಿ ಶೇ.61.38 ಮತದಾನವಾಗಿತ್ತು, ಬಳಿಕ 2012ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಶೇ.68.27 ಮತದಾನವಾಗಿತ್ತು. 2014ರ ಲೋಕಸಭೆ ಚುನಾವಣೆಯಲ್ಲಿ ಶೇ.74.49 ಮತದಾನ ಮೂಲಕ ನಿರೀಕ್ಷೆ ಮೀರಿ ಮತದಾರರು ಸ್ಪಂದಿಸಿದ್ದರು.

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ (ಶೇ.78.86), ಉಡುಪಿ ಜಿಲ್ಲೆ ಕಾರ್ಕಳ (ಶೇ.78.39) ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಧಿಕ ಮತದಾನವಾಗಿದೆ. ಕುಂದಾಪುರ ಶೇ.77.66, ಉಡುಪಿ ಶೇ.78.77, ಕಾಪು ಶೇ.77.89, ಮೂಡಿಗೆರೆ ಶೇ.74.79, ಚಿಕ್ಕಮಗಳೂರು ಶೇ.69.45, ತರಿಕೆರೆ ಶೇ.72.18 ಮತದಾನವಾಗಿದೆ. 2014 ಲೋಕಸಭೆ ಚುನಾವಣೆಯಲ್ಲಿ ಒಟ್ಟು ಮತದಾರರು 13,86,516ರಲ್ಲಿ 10,32,871 ಮತದಾರರು ಮತದಾನ ಮಾಡಿದ್ದರು. ಈ ಚುನಾವಣೆಯಲ್ಲಿ 15,13,231 ಒಟ್ಟು ಮತದಾರರಲ್ಲಿ 11,48,700 ಮಂದಿ ಮತ ಚಲಾಯಿಸಿದ್ದಾರೆ.

Leave a Reply

Your email address will not be published. Required fields are marked *