ಕಷ್ಟ ಪರಿಹಾರದ ಭವಿಷ್ಯ!

ಮುಂಡಗೋಡ: ಪಟ್ಟಣದ ಗಣೇಶ ನಗರದಲ್ಲಿ ಭಾನುವಾರ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು. ಸ್ತಬ್ಧಲೇ ಪರಾಕ್ ಎಂದು ಗೊರಪ್ಪಜ್ಜನಿಂದ ಕಾರ್ಣಿಕ ಹೊರಹೊಮ್ಮಿತು. ಕಾರ್ಣಿಕ ಕಂಬದ ಮೇಲೆ ಗೊರಪ್ಪಜ್ಜನು ಈ ರೀತಿಯಾಗಿ ಕಾರಣಿಕ ನುಡಿದಿದ್ದಾನೆ. ಸ್ತಬ್ದಲೇ ಪರಾಕ್ ಎಂದರೆ ಕಷ್ಟ ಪರಿಹಾರ ಎಂದರ್ಥ.
ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಬೆಳಗ್ಗೆ ಮೈಲಾರಲಿಂಗೇಶ್ವರ, ಗಂಗಿಮಾಳವ್ವ ದೇವಿ ಮತ್ತು ರೇಣುಕಾದೇವಿಯ ಮಹಾಪೂಜೆ, ಮಹಾಭಿಷೇಕ ಹಾಗೂ ಬಿಲ್ ಪೂಜೆ ಜರುಗಿತು. ನಂತರ ಮೈಲಾರಲಿಂಗೇಶ್ವರ ದೇವರ ಪಲ್ಲಕ್ಕಿ ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಬಳಿಕ ದೇವಸ್ಥಾನದ ಆವರಣದಲ್ಲಿ ದೋಣಿ ತುಂಬುವುದು, ಸರಪಳಿ, ಶಸ್ತ್ರ, ಶಿವದಾರ ಮತ್ತು ಆರತಿ ಪವಾಡಗಳು ಜರುಗಿದವು. ತಾಲೂಕಿನ ವಿವಿಧ ಹಳ್ಳಿ ಹಾಗೂ ಪಟ್ಟಣದ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.