ಮಂಡ್ಯ (ಸಂಚಿ ಹೊನ್ನಮ್ಮ, ತ್ರಿವೇಣಿ ವೇದಿಕೆ): ಯುವ ತಲೆಮಾರಿನ ಸಾಹಿತಿಗಳು ಕಾದಂಬರಿಗಳನ್ನು ಬರೆಯುತ್ತಿರುವುದು ಭವಿಷ್ಯದ ಸಾಹಿತ್ಯ ಕ್ಷೇತ್ರದ ಆತಂಕವನ್ನು ದೂರ ಮಾಡಿದೆ ಎಂದು ಖ್ಯಾತ ವಿಮರ್ಶಕ ವಿಕ್ರಂ ವಿಸಾಜಿ ಹೇಳಿದರು.
ಸಮ್ಮೇಳನದ ಅಂತಿಮ ದಿನವಾದ ಭಾನುವಾರ ಸಂಚಿ ಹೊನ್ನಮ್ಮ ಮತ್ತು ಕಾದಂಬರಿ ಸಾಮ್ರಾಜ್ಞೆ ತ್ರಿವೇಣಿ ವೇದಿಕೆಯಲ್ಲಿ ನಡೆದ ಹೊಸ ತಲೆಮಾರಿನ ಸಾಹಿತ್ಯ ಕುರಿತ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಹಿತ್ಯ ಈಗ ಕನ್ನಡಿಯಲ್ಲ, ಮಾಯ ಕನ್ನಡಿಯಾಗಿದೆ. ತಳಮಟ್ಟದಲ್ಲಿ ನಡೆಯುವ ತಳಮಳಗಳನ್ನೂ ಹೊಸ ತಲೆಮಾರಿನ ಬರಹಗಾರರು ಸಾಹಿತ್ಯ ರೂಪ ನೀಡಿ ಅದನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಭವಿಷ್ಯದ ಆತಂಕವನ್ನು ದೂರ ಮಾಡಿದ್ದಾರೆ ಎಂದರು.
ಹೊಸ ತಲೆಮಾರು ಯಾವುದೇ ಕಟ್ಟುಪಾಡುಗಳಿಗೆ ಒಳಗಾಗದೆ ಎಲ್ಲವನ್ನೂ ತಮ್ಮದೇ ದೃಷ್ಠಿಕೋನದಲ್ಲಿ, ನಿಷ್ಠುರವಾಗಿ ಹೇಳುವ ಕೆಲಸ ಮಾಡುತ್ತಿದ್ದಾರೆ. ಭಾಷೆ, ಸಂವೇದನೆ, ಅಭಿವ್ಯಕ್ತಿ, ವಸ್ತು ವಿಷಯಗಳ ಬಗ್ಗೆ ಎಚ್ಚರಿಕೆಯೂ ಇವರ ಬರವಣಿಗೆಯಲ್ಲಿ ಕಾಣಬಹುದಾಗಿದೆ. ಏಕಕಾಲಕ್ಕೆ ಅನೇಕ ದಿಕ್ಕುಗಳಲ್ಲಿ ಬರಹಗಳು ಕಂಡುಬರುತ್ತಿವೆ ಎಂದರು.
ಆಶಯ ನುಡಿಗಳನ್ನಾಡಿದ ನಿವೃತ್ತ ಪ್ರಾಧ್ಯಪಕ ಸಿ.ಕೆ.ಜಗದೀಶ್, ಹೊಸ ತಲೆಮಾರಿನ ಸಾಹಿತ್ಯಕ್ಕೆ ಬಹುಮುಖ ಪ್ರತಿಭೆಯುಳ್ಳವರು ಬರುತ್ತಿರುವುದು ಸಾಹಿತ್ಯ ಲೋಕಕ್ಕೆ ಭವಿಷ್ಯವಿದೆ ಎನ್ನುವ ಆಶಾವಾದವನ್ನು ಹುಟ್ಟುಹಾಕಿದೆ. ಹೋಟೆಲ್, ಸಾಫ್ಟ್‌ವೇರ್ ಉದ್ಯೋಗಿಗಳು, ಇಂಜಿನಿಯರ್, ಡಾಕ್ಟರ್‌ಗಳು ಸಹ ತಮ್ಮದೇ ಅನುಭವವನ್ನು ಅಕ್ಷರ ರೂಪಕ್ಕೆ ಇಳಿಸಿ, ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಇತ್ತೀಚಿನ ಸಾಹಿತ್ಯದ ವಸ್ತುವೈವಿಧ್ಯ ಕುರಿತಂತೆ ಡಾ.ರಮೇಶ್ ಎಸ್.ಕತ್ತಿ ವಿಷಯ ಮಂಡನೆ ಮಾಡಿದರು. ಸೋಮಶೇಖರ ಹಲಸಗಿ ನಿರ್ವಹಣೆ ಮಾಡಿದರೆ, ಡ್ಯಾನಿ ಪಿರೇರಾ ನಿರೂಪಣೆ ಮಾಡಿದರು. ಪ್ರೊ.ಬಿ.ಎನ್.ಕೃಷ್ಣಪ್ಪ ಸ್ವಾಗತಿಸಿದರು, ಉಮೇಶ ಚಂದ್ರ ವಂದನಾರ್ಪಣೆ ಮಾಡಿದರು.