ಸಂತ್ರಸ್ತರ ನೆರವಿಗೆ ನಿಧಿ ಸಂಗ್ರಹ

ಹಾನಗಲ್ಲ: ಕೇರಳ ಹಾಗೂ ರಾಜ್ಯದ ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ನೆರವಿಗಾಗಿ ನಾವೆಲ್ಲರೂ ಕೈಜೋಡಿಸುವ ಅಗತ್ಯವಿದೆ ಎಂದು ಮಾಜಿ ಸಚಿವ ಮನೋಹರ ತಹಶೀಲ್ದಾರ್ ಹೇಳಿದರು.

ಪಟ್ಟಣದಲ್ಲಿ ಸಂತ್ರಸ್ತರಿಗಾಗಿ ನಿಧಿ ಸಂಗ್ರಹಣೆಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸಕ್ತ ವರ್ಷ ಹೆಚ್ಚು ಮಳೆ ಸುರಿಯುತ್ತಿದ್ದು, ಹಲವು ರಾಜ್ಯಗಳಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ಭೂಕುಸಿತ, ಪ್ರವಾಹ ಪರಿಸ್ಥಿತಿಯಿಂದ ಜನತೆ ನಿರಾಶ್ರಿತರಾಗಿದ್ದಾರೆ. ಮನೆ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ನೆರವು ನೀಡಿ ಮಾನವೀಯತೆ ಮೆರೆಯಬೇಕಿದೆ. ಈಗಾಗಲೇ ಪ್ರಧಾನಮಂತ್ರಿ, ಮುಖ್ಯಮಂತ್ರಿ ವೈಮಾನಿಕ ಸಮೀಕ್ಷೆ ನಡೆಸಿ ಮಾಹಿತಿ ಪಡೆದುಕೊಂಡಿದ್ದು, ಪರಿಹಾರೋಪಾಯ ಕೈಗೊಂಡಿದ್ದಾರೆ. ಸರ್ಕಾರದೊಂದಿಗೆ ಪಕ್ಷಾತೀತವಾಗಿ ಸಾರ್ವಜನಿಕರೂ ಮನೆ-ಮನೆಗಳಿಗೆ ತೆರಳಿ ಹಣ, ಬಟ್ಟೆ, ಔಷಧ, ಆಹಾರ ಪದಾರ್ಥ ಸಂಗ್ರಹಿಸಿ ಕಳುಹಿಸುವ ವ್ಯವಸ್ಥೆ ಮಾಡಬೇಕಾಗಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ವಿುಕ ಸಂಘಟನೆ ಅಧ್ಯಕ್ಷ ನಿಯಾಜ ಶೇಖ ನೇತೃತ್ವದಲ್ಲಿ, ಕಾಂಗ್ರೆಸ್ ಪದಾಧಿಕಾರಿಗಳಾದ ಯಲ್ಲಪ್ಪ ನಿಂಬಣ್ಣನವರ, ರವಿ ಚಿಕ್ಕೇರಿ, ವಿಜಯಕುಮಾರ ದೊಡ್ಡಮನಿ, ಉಮೇಶ ದಾನಪ್ಪನವರ, ಕೆ.ಎಲ್.ದೇಶಪಾಂಡೆ, ರಜಾಕ ದೊಡ್ಡಮನಿ, ನಂದೀಶ ಗೋದಿ, ಶಿವು ತೊರವಂದ, ಬಸವರಾಜ ಡುಮ್ಮಣ್ಣನವರ, ರಮೇಶ ಹರಿಜನ, ಮಹಬೂಬಲಿ ಹುಡೇದ, ಜಾವೀದ ಯಲಿಗಾರ, ಖಂಡೋಜಿ ಭೋಸಲೆ, ಶಿವು ಭದ್ರಾವತಿ ಇತರರು ಪಾಲ್ಗೊಂಡಿದ್ದರು.