More

    ದೇಗುಲದ ಅತಿಥಿಗೃಹದಲ್ಲೇ ಮೋಜು-ಮಸ್ತಿ?

    ನಂಜನಗೂಡು: ಶ್ರೀಕಂಠೇಶ್ವರಸ್ವಾಮಿ ದೇವಾಲಯದ ವಿಐಪಿ ಅತಿಥಿಗೃಹದಲ್ಲಿ ಪ್ರಭಾವಿಗಳು ಕೊಠಡಿ ಬಾಡಿಗೆ ಪಡೆದು ಮೋಜು-ಮಸ್ತಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ವಿಐಪಿ ಅತಿಥಿಗೃಹ ಸಮುಚ್ಚಯದ ಕೊಠಡಿಯನ್ನು ಬುಧವಾರ ರಾತ್ರಿ ರಾಜಕೀಯ ಮುಖಂಡರ ಗುಂಪು ಪಾರ್ಟಿಗೆ ಬಳಕೆ ಮಾಡಿಕೊಂಡಿದೆ ಎಂದು ನಗರಸಭಾ ಸದಸ್ಯ ಕಪಿಲೇಶ್ ಆರೋಪಿಸಿದ್ದಾರೆ.

    ಈ ಕುರಿತು ಕಪಿಲೇಶ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಅಲ್ಲಿನ ಅವ್ಯವಸ್ಥೆಯನ್ನು ಬೆಳಕಿಗೆ ತರುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಸಾರ್ವಜನಿಕ ವಲಯದಿಂದಲೂ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಧಾರ್ಮಿಕ ಕ್ಷೇತ್ರದ ಆವರಣದಲ್ಲಿ ಮೋಜು-ಮಸ್ತಿಗೆ ಕೊಠಡಿ ದುರ್ಬಳಕೆ ಸಲ್ಲದು ಎಂದು ಕೆಲ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ವಿಜಯವಾಣಿಗೆ ಸ್ಪಷ್ಟೀಕರಣ ನೀಡಿರುವ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರಯ್ಯ, ಪಾರ್ಟಿಗಾಗಿ ದೇವಾಲಯದ ವಿಐಪಿ ಕೊಠಡಿ ದುರ್ಬಳಕೆ ಆಗಿದೆ ಎಂಬುದು ಸತ್ಯಕ್ಕೆ ದೂರ. ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಗೋವಿಂದರಾಜು ಕೊಠಡಿ ಬಾಡಿಗೆ ಪಡೆದು ಸಭೆ ನಡೆಸಿದ್ದಾರೆ. ಇದನ್ನೇ ಪಾರ್ಟಿ ಎಂಬುದಾಗಿ ತಪ್ಪಾಗಿ ಬಿಂಬಿಸಿ ವದಂತಿ ಹಬ್ಬಿಸಲಾಗುತ್ತಿದೆ. ದೇವಾಲಯದ ಹೆಸರಿಗೆ ಮಸಿ ಬಳಿಯುವ ಹುನ್ನಾರ ಇದಾಗಿದೆ ಎಂದು ಆರೋಪವನ್ನು ಅಲ್ಲಗೆಳೆದಿದ್ದಾರೆ.

    ಹಿಂದೆಯೂ ದುರ್ಬಳಕೆ: ಕಳೆದ ವರ್ಷ ಶಾಸಕ ಬಿ.ಹರ್ಷವರ್ಧನ್ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಪ್ರಗತಿ ಪರಿಶೀಲನೆ ವೇಳೆ ವಿಐಪಿ ಕಾಟೇಜ್‌ನಲ್ಲಿ ಗಾರ್ಡನ್ ನಿರ್ವಹಣೆ ಮಾಡುವ ಸಿಬ್ಬಂದಿ ಹೆಸರಲ್ಲಿ ಕೊಠಡಿಗಳನ್ನು ಕಾಯ್ದಿಸಿರಿ ದುರ್ಬಳಕೆಯಾಗುತ್ತಿದ್ದನ್ನು ಪತ್ತೆಹಚ್ಚಿ ಅಧಿಕಾರಿಗಳಿಗೆ ಶಾಸಕರು ಬಿಸಿ ಮುಟ್ಟಿಸಿದ್ದರು.

     ವಿಐಪಿ ಕಾಟೇಜ್‌ನಲ್ಲಿ ಪಾರ್ಟಿ ಮಾಡಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಚುನಾಯಿತ ಜನಪ್ರತಿನಿಧಿಯೊಬ್ಬರು ಕೊಠಡಿ ಬಾಡಿಗೆ ಕೇಳಿದರೆ ಆಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ನಿಯಮಾನುಸಾರ ಪೂರ್ವ ಮಾಹಿತಿ ಪಡೆದು ಕೊಠಡಿಯನ್ನು ಬಾಡಿಗೆ ನೀಡಲಾಗಿದೆ. ಆರೋಪದಲ್ಲಿ ಯಾವುದೇ ಹುರುಳಿಲ್ಲ.
    ಶಿವಕುಮಾರಯ್ಯ, ಇಒ, ಶ್ರೀಕಂಠೇಶ್ವರಸ್ವಾಮಿ ದೇವಾಲಯ

    ವಿಐಪಿ ಕಾಟೇಜ್‌ನಲ್ಲಿರುವ ಕೊಠಡಿಗಳನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಭಕ್ತ ವಲಯದಲ್ಲಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಬುಧವಾರ ರಾತ್ರಿ ಕೊಠಡಿದಲ್ಲಿ 10ಕ್ಕೂ ಹೆಚ್ಚು ಮುಖಂಡರು ಪಾರ್ಟಿಯಲ್ಲಿ ತೊಡಗಿದ್ದರು. ಈ ಬಗ್ಗೆ ತನಿಖೆ ಆಗಲಿ.
    ಕಪಿಲೇಶ್, ನಗರಸಭಾ ಸದಸ್ಯ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts