ರಸ್ತೆಗೆ ಹರಿಯುತ್ತಿದೆ ಚರಂಡಿ ನೀರು

ಕಡೂರು: ಪಟ್ಟಣದ 5ನೇ ವಾರ್ಡ್​ನಲ್ಲಿ ಚರಂಡಿ ಕಾಮಗಾರಿ ಅಪೂರ್ಣಗೊಂಡು ಅವ್ಯವಸ್ಥೆ ಉಂಟಾಗಿದ್ದರಿಂದ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಸೋಮಶೇಖರ್ ಮತ್ತು ಪುರಸಭೆ ಅಧಿಕಾರಿಗಳು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಗರೋತ್ಥಾನ ಯೋಜನೆಯಡಿ ವಾರ್ಡ್​ನ ಬನ್ನಿಮರದ ರಸ್ತೆಯಿಂದ ಮೂರು ತಿಂಗಳ ಹಿಂದೆ ಆರಂಭವಾದ ಚರಂಡಿ ಕಾಮಗಾರಿ ಕೆಲವೆಡೆ ಪೂರ್ತಿಯಾಗದ ಕಾರಣ ಕೊಳಚೆ ನೀರು ರಸ್ತೆಗೆ ಹರಿಯುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳು ದೂರಿದ್ದರಿಂದ ಮುಖ್ಯಾಧಿಕಾರಿ ಮಂಜಪ್ಪ ಅವರೊಂದಿಗೆ ಭೇಟಿ ನೀಡಿದ್ದರು.

ಚರಂಡಿ ಕಾಮಗಾರಿ ಅಪೂರ್ಣ ಆಗಿರುವುದರಿಂದ ಕೊಳಚೆ ರಸ್ತೆಗೆ ಹರಿದು ನಿವಾಸಿಗಳಿಗೆ, ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಸಾಕಷ್ಟು ಕಿರಿಕಿರಿಯಾಗುತ್ತಿದೆ. ಕೂಡಲೆ ಅವ್ಯವಸ್ಥೆ ಸರಿಪಡಿಸಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದರು.

ಕೊಳಚೆ ನೀರು ರಸ್ತೆಗೆ ಹರಿಯುತ್ತಿರುವುದನ್ನು ಗಮನಿಸಿದ ಎಂ.ಸೋಮಶೇಖರ್, ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು.

ಮುಖ್ಯಾಧಿಕಾರಿ ಮಂಜಪ್ಪ ಮಾತನಾಡಿ, ಸಂಬಂಧಿಸಿದ ಮೂಲ ಗುತ್ತಿಗೆದಾರರಿಗೆ ಮೂರ್ನಾಲ್ಕು ದಿನಗಳಲ್ಲಿ ಚರಂಡಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಕಾಮಗಾರಿ ಪೂರ್ಣಕ್ಕೆ ಸೂಚನೆ: ಬನ್ನಿಮರ ರಸ್ತೆಯಿಂದ ಮರವಂಜಿ ರಸ್ತೆವರೆಗೆ 20 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಹಾಗೂ 500 ಮೀಟರ್ ಚರಂಡಿ ನಿರ್ವಿುಸಬೇಕಿದೆ. ಆದರೆ ಬಾಕ್ಸ್ ಚರಂಡಿ ಅಪೂರ್ಣವಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಸೋಮಶೇಖರ್ ಹೇಳಿದರು.</