ನರೇಗಲ್ಲ: ನಿಡಗುಂದಿಕೊಪ್ಪದಲ್ಲಿ ಫೆ. 20ರಂದು ಅಭಿನವ ಚನ್ನಬಸವ ಸ್ವಾಮೀಜಿ ಉದ್ದೇಶಿಸಿರುವ ಗಜೇಂದ್ರಗಡ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಶಾಸಕ ಜಿ. ಎಸ್. ಪಾಟೀಲ ಹೇಳಿದರು.
ಸಮೀಪದ ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 15 ದಿನಗಳ ಹಿಂದೆ ಆಯೋಜಿಸಿದ್ದ ಜಿಲ್ಲಾ ಸಮ್ಮೇಳನ ಯಶಸ್ವಿಯಾಗಿದೆ. ಪೂಜ್ಯರ ಆಸೆಯಂತೆ ತಾಲೂಕು ಸಮ್ಮೇಳನ ನಡೆಸಲು ಜಿಲ್ಲಾ ಕಸಾಪ ಘಟಕ ಮತ್ತು ತಾಲೂಕು ಘಟಕಗಳು ಸಜ್ಜಾಗಿರುವುದು ವಿಶೇಷ ಆನಂದವನ್ನುಂಟು ಮಾಡಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಆಧ್ಯಾತ್ಮಿಕ ಜಾತ್ರೆಯೊಂದಿಗೆ ಅಕ್ಷರ ಜಾತ್ರೆ ನೆರವೇರಿಸಲು ಮುಂದಾಗಿರುವ ಶ್ರೀಗಳ ನಿರ್ಧಾರ ಸ್ವಾಗತಾರ್ಹ. ಜಾತ್ರೆಯನ್ನು ಈ ರೀತಿ ವಿಶೇಷ ವಿಧಾಯಕ ಕಾರ್ಯಕ್ರಮಗಳ ಮೂಲಕ ಆಚರಿಸಿದರೆ ಅದಕ್ಕೊಂದು ಔಚಿತ್ಯ ಬರುತ್ತದೆ. ಎಲ್ಲ ಸ್ವಾಮೀಜಿಗಳೂ ಇಂತಹ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಅಭಿನವ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ನಿವೃತ್ತ ಶಿಕ್ಷಕ ಅರುಭ ಕುಲಕರ್ಣಿ ಮಾತನಾಡಿದರು. ತಾಲೂಕಾಧ್ಯಕ್ಷ ಅಮರೇಶ ಗಾಣಿಗೇರ, ಎಂ.ವಿ. ವೀರಾಪೂರ, ವೀರಣ್ಣ ಶೆಟ್ಟರ, ವಿ.ಬಿ. ಸೋಮನಕಟ್ಟಿಮಠ, ಡಾ. ಕೆ.ಬಿ. ಧನ್ನೂರ, ಕಿಶೋರಬಾಬು ನಾಗರಕಟ್ಟೆ, ಶರಣಪ್ಪ ಬೆಟಗೇರಿ, ಎಸ್.ಎಸ್. ಪಸಾರದ, ಎಂ.ಎ. ಹಾದಿಮನಿ, ಮಂಜುಳಾ ರೇವಡಿ, ಅಂದಪ್ಪ ಬಿಚ್ಚೂರ, ಇತರರಿದ್ದರು. ಶಿಕ್ಷಕ ಡಿ.ಎಸ್. ಬಡಿಗೇರ ಕಾರ್ಯಕ್ರಮ ನಿರ್ವಹಿಸಿದರು.