ಕೋಲಾರ: ಅನುದಾನಿತ ಶಾಲೆಗಳ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಸದಸ್ಯರು ಶನಿವಾರ ನಗರದಲ್ಲಿ ಉಪ ತಹಸೀಲ್ದಾರ್ ಮರೀನಾ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಜಿ.ಮಂಜುನಾಥ್ ಮಾತನಾಡಿ, ಬಹು ವರ್ಷಗಳಿಂದ ಅನುದಾನಿತ ಶಾಲಾ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಗಳು ಮೀನಾಮೇಷ ಎಣಿಸುತ್ತಿವೆ. ಕೂಡಲೇ ಸಮಸ್ಯೆಗಳಿಗೆ ಸ್ಪಂದಿಸಿ ಬಗೆಹರಿಸಬೇಕು. ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇಮಕಾತಿ, ಪ್ರಾಧಿಕಾರದ ವಂತಿಗೆಯನ್ನು ಆಡಳಿತ ಮಂಡಳಿ ಬದಲಾಗಿ ಸರ್ಕಾರ ಭರಿಸಲು ಕ್ರಮವಹಿಸಬೇಕು. ಒಪಿಎಸ್ ಜಾರಿ ವಿಳಂಭವಾದಲ್ಲಿ ರಾಜ್ಯ ಸರ್ಕಾರಿ ನೌರರಿಗೆ ನೀಡುತ್ತಿರುವಂತೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು.
ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿ ವೇತನ, ನಿವೃತ್ತಿ ವೇತನ ಮತ್ತು ಇತರೆ ಸೌಲಭ್ಯಗಳ ನಿಯಂತ್ರಣ ವಿಧೇಯಕ 2014ಕ್ಕೆ ತಿದ್ದುಪಡಿ ತಂದು ಅಥವಾ ರದ್ದುಪಡಿಸಿ ಭವಿಷ್ಯಾವರ್ತಿಯಾಗಿ ಜಾರಿಗೆ ತರಬೇಕು. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ದಶಕಗಳಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ತಿಳಿಸಿದರು.
ಅನುದಾನಿತ ನೌಕರರಿಗೂ ಕೂಡ ಸರ್ಕಾರಿ ನೌಕರರಂತೆ ಜ್ಯೋತಿ ಸಂಜಿವಿನಿ ಯೋಜನೆಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಸರ್ಕಾರಿ ಶಾಲಾ&ಕಾಲೇಜುಗಳು ಮತ್ತು ಅನುದಾನಿತ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗಾಗಲಿ ಹಾಗೂ ನೌಕರರಿಗಾಗಲಿ ಯಾವುದೇ ತಾರತಮ್ಯ ನೀತಿ ಮಾಡಬಾರದು ಎಂದು ಕೋರಿದರು.
ಪದಾಧಿಕಾರಿಗಳಾದ ಕೃಷ್ಣೇಗೌಡ, ರಮೇಶ್, ಬೈಯಮ್ಮ, ಮುನಿವೆಂಕಟಸ್ವಾಮಿ, ಪ್ರಮೀಳಾ ನಾಗರಾಜ್ ರಾಜು, ರಾಮರೆಡ್ಡಿ ಹಾಜರಿದ್ದರು.