ಕೇಂದ್ರದ ಬೆಲೆ ಇಳಿಕೆ ಬೆನ್ನಲ್ಲೇ ಮತ್ತೆ ಏರಿಕೆ ಕಂಡ ಪೆಟ್ರೋಲ್‌, ಡೀಸೆಲ್‌

ನವದೆಹಲಿ: ಕಳೆದ ಒಂದೆರಡು ತಿಂಗಳಿನಿಂದಲೂ ನಿರಂತರ ಇಂಧನ ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಕೇಂದ್ರ ಸರ್ಕಾರ ಗುರುವಾರವಷ್ಟೇ ಪ್ರತಿ ಲೀ.ಗೆ 2.50 ರೂ. ಬೆಲೆ ಇಳಿಸಿ ತುಸು ನಿರಾಳತೆ ನೀಡಿತ್ತು. ಆದರೆ ಶನಿವಾರ ಮತ್ತೆ ತೈಲ ಬೆಲೆಯಲ್ಲಿ ಏರಿಕೆ ಕಂಡಿದ್ದು, ಗ್ರಾಹಕರಿಗೆ ಹೊಡೆತ ಬಿದ್ದಿದೆ.

ಲೀಟರ್‌ ಪೆಟ್ರೋಲ್‌ಗೆ 18 ಪೈಸೆ ಏರಿಕೆ ಕಂಡಿದ್ದು, ಲೀ. ಡೀಸೆಲ್‌ ಬೆಲೆ 29 ಪೈಸೆಗಳಷ್ಟು ಜಾಸ್ತಿಯಾಗಿದೆ.

ಬೆಲೆ ಏರಿಕೆಯಾದ ನಂತರ ಪ್ರತಿ ಲೀ. ಪೆಟ್ರೋಲ್‌ಗೆ 81.68 ರೂ.ಗಳಷ್ಟಿದ್ದರೆ, ಡೀಸೆಲ್‌ ಲೀಟರ್‌ಗೆ 73.24 ರೂ.ಗಳಿಗೆ ರಾಷ್ಟ್ರ ರಾಜಧಾನಿಯಲ್ಲಿ ಮಾರಾಟವಾಗುತ್ತಿದೆ.

ಮುಂಬೈನಲ್ಲಿಯೂ ಕೂಡ ಬೆಲೆ ಏರಿಕೆಯಾಗಿದ್ದು, ಲೀ ಪೆಟ್ರೋಲ್‌ 18 ಪೈಸೆ ಏರಿಕೆ ಕಂಡು 87.15 ರೂ.ಗಳಷ್ಟಿದ್ದರೆ, ಡೀಸೆಲ್‌ನಲ್ಲಿ 70 ಪೈಸೆ ಕಡಿಮೆಯಾಗಿ 76.75 ರೂ.ಗಳಿಗೆ ಮಾರಾಟವಾಗುತ್ತಿದೆ.

ಈ ಮಧ್ಯೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವನ್ನು ಟೀಕಿಸಿರುವ ಶಿವಸೇನೆಯು ಅತ್ಯಂತ ಕಡಿಮೆ ಬೆಲೆ ಇಳಿಕೆ ಮಾಡಿದೆ . ಕೇಂದ್ರದ ಬೆಲೆ ಕಡಿತವು ಐಸಿಯುನಲ್ಲಿರುವ ಗಂಭೀರ ರೋಗಿಗೆ ಮುಲಾಮು ಹಚ್ಚಿದಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾಗರಿಕರನ್ನು ತೊಂದರೆಗೀಡು ಮಾಡಿವೆ ಎಂದು ದೂರಿತ್ತು.

ಸೆಪ್ಟೆಂಬರ್‌ 4 ರಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಪ್ರತಿ ಲೀ. ಪೆಟ್ರೋಲ್‌ಗೆ 2.50 ರೂ. ಮತ್ತು ಡೀಸೆಲ್‌ಗೂ 2.50 ರೂ. ಕಡಿಮೆ ಮಾಡಿದ್ದರು. ರಾಜ್ಯ ಸರ್ಕಾರಗಳೂ ಕೂಡ 2.50 ರೂ. ಮಾರಾಟ ತೆರಿಗೆ ಅಥವಾ ವ್ಯಾಟ್ ಕಡಿತಗೊಳಿಸುವಂತೆ ಅವರು ಮನವಿ ಮಾಡಿದ್ದರು. (ಏಜೆನ್ಸೀಸ್)