ಸತತ ನಾಲ್ಕನೇ ದಿನವೂ ಪೆಟ್ರೋಲ್​, ಡಿಸೇಲ್​ ಬೆಲೆ ಏರಿಕೆ: ಬೆಂಗಳೂರಿನಲ್ಲೂ ಇಂಧನ ತುಟ್ಟಿ

ನವದೆಹಲಿ: ಕಳೆದ ಎರಡು ತಿಂಗಳ ಹಿಂದೆ ಸತತ ಏರಿಕೆ ಕಂಡು ದಾಖಲೆ ತಲುಪಿದ್ದ ಇಂಧನ ಬೆಲೆ ನಂತರದ ದಿನಗಳಲ್ಲಿ ಇಳಿಕೆ ಹಾದಿ ಕಂಡಿತ್ತು. ಆದರೆ, ಕಳೆದ ನಾಲ್ಕು ದಿನಗಳಿಂದ ಪುನಾ ಏರಿಕೆಯ ದಾರಿ ಹಿಡಿದಿದೆ. ಇಂದು ದೇಶದ ಬಹುತೇಕ ನಗರಗಳಲ್ಲಿ ಪೆಟ್ರೋಲ್​, ಡೀಸೆಲ್​​ ಬೆಲೆ ಏರಿಕೆಯಾಗಿದೆ.

ಸದ್ಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್​ ಪೆಟ್ರೋಲ್​ ಬೆಲೆ 70.95 ರೂ. ಇದೆ. ಇಂದು 23 ಪೈಸೆ ಏರಿದೆ. ಡೀಸೆಲ್​​ ಬೆಲೆ 65.45 ರೂ. ಇದ್ದು 29 ಪೈಸೆ ಏರಿದೆ.

ಮುಂಬೈನಲ್ಲಿ, ಲೀಟರ್​ ಪೆಟ್ರೋಲ್​ ಬೆಲೆ 76.58 ರೂ.ಗಳಿದ್ದು, 23 ಪೈಸೆ ಹೆಚ್ಚಳವಾಗಿದೆ. ಡೀಸೆಲ್​ ಬೆಲೆ 68.53 ರೂ.ಗಳಾಗಿದ್ದು, 31 ಪೈಸೆಯಷ್ಟು ಏರಿದೆ.

ಬೆಂಗಳೂರಿನಲ್ಲಿ ಎಷ್ಟು?

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್​ ಬೆಲೆ 73.29 ರೂ.ಗಳಾಗಿದ್ದು, 24 ಪೈಸೆ ಏರಿಕೆಯಾಗಿದೆ. ಡೀಸೆಲ್​ 67.60 ರೂ.ಗಳಿಗೆ ಮಾರಾಟವಾಗುತ್ತಿದೆ. 30 ಪೈಸೆ ಹೆಚ್ಚಳವಾಗಿದೆ.

ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 24 ಪೈಸೆ ಏರಿಕೆಯಾಗಿದ್ದು, ಪ್ರತಿ ಲೀಟರ್​ಗೆ 73.65 ರೂ.ಗಳಾಗಿದೆ. ಡೀಸೆಲ್​ 31 ಪೈಸೆ ಏರಿಕೆಯಾಗಿ ಪ್ರತಿ ಲೀಟರ್​ಗೆ 69.14 ರೂ ಆಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವುದು ಮತ್ತು ಡಾಲರ್​ ಎದುರು ಭಾರತದ ರೂಪಾಯಿ ತನ್ನ ಮೌಲ್ಯ ಕಳೆದುಕೊಳ್ಳುತ್ತಿರುವುದೇ ಪೆಟ್ರೋಲ್​, ಡೀಸೆಲ್​ ಬೆಲೆಯ ನಿರಂತರ ಏರಿಕೆಗೆ ಕಾರಣವಾಗಿದೆ.