ಪೆಟ್ರೋಲ್,ಡೀಸೆಲ್ ಬೆಲೆ 2-2.50 ರೂ. ಅಗ್ಗ?

ಬೆಂಗಳೂರು: ತೈಲಾಘಾತದಿಂದ ತತ್ತರಿಸುತ್ತಿರುವ ಜನತೆಯ ಭಾರ ಇಳಿಸುವತ್ತ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ, ಸಾಲ ಮನ್ನಾದ ಆರ್ಥಿಕ ಸವಾಲಿನ ನಡುವೆಯೇ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸುಂಕ ತಗ್ಗಿಸುವ ನಿರ್ಧಾರಕ್ಕೆ ಬಂದಿದೆ. ರಾಜಸ್ಥಾನ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳದ ಸರ್ಕಾರಗಳ ಮಾದರಿಯಲ್ಲಿ ರಾಜ್ಯದಲ್ಲೂ ಇಂಧನದ ಮೇಲಿನ ತೆರಿಗೆಯನ್ನು ಇಳಿಸುವ ಶುಭ ಸುದ್ದಿಯನ್ನು ಶೀಘ್ರದಲ್ಲೇ ಪ್ರಕಟಿಸಲಿದೆ. ಈ ನಿರ್ಧಾರ ಕೈಗೊಂಡಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕ್ರಮವಾಗಿ 2 ರೂ.ನಿಂದ 2.50 ರೂ. ಕಡಿಮೆಯಾಗುವ ಸಾಧ್ಯತೆ ಇದೆ. ತೆರಿಗೆ ಇಳಿಕೆ ಸಂಬಂಧ ಹಣಕಾಸು ಇಲಾಖೆಯೊಂದಿಗೆ ಚರ್ಚೆ ನಡೆಸಿರುವ ಸಿಎಂ ಕುಮಾರಸ್ವಾಮಿ, ಪ್ರಸ್ತಾವನೆ ಸಿದ್ಧಪಡಿಸಲು ಸೂಚನೆ ನೀಡಿದ್ದಾರೆಂದು ಉನ್ನತ ಮೂಲಗಳು ಖಚಿತಪಡಿಸಿವೆ. ಸರ್ಕಾರ ರಚನೆಯಾದ ನಂತರ ಮಂಡಿಸಿದ ಬಜೆಟ್​ನಲ್ಲಿ, ರೈತರ ಸಾಲಮನ್ನಾ ಉದ್ದೇಶದಿಂದ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕ್ರಮವಾಗಿ 1.12 ರೂ. ಹಾಗೂ 1.14 ರೂ. ಸೆಸ್ ವಿಧಿಸಿದ್ದರು.

ಆಗಲೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಈ ನಿರ್ಧಾರ ಇಂಧನ ಬೆಲೆ ದೇಶಾದ್ಯಂತ ಗಗನಕ್ಕೆ ಏರಿದ ಬಳಿಕ ಮತ್ತಷ್ಟು ಟೀಕೆಗೆ ಒಳಗಾಗಿತ್ತು. ಇಂಧನ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಭಾರತ್ ಬಂದ್​ಗೆ ಕರೆ ನೀಡಿದಾಗ ಕೇಂದ್ರ ಸರ್ಕಾರವನ್ನು ಟೀಕಿಸಿದ್ದ ಕುಮಾರಸ್ವಾಮಿಯವರನ್ನು ಸೆಸ್ ವಿಚಾರ ಹಿಂಬಾಲಿಸಿತ್ತು. ಕೇಂದ್ರ ಸರ್ಕಾರವನ್ನು ಟೀಕಿಸುವ ಮೊದಲು ನಿಮ್ಮ ಸೆಸ್ ಕಡಿಮೆ ಮಾಡಿ ಎಂಬ ಮಾತು ಕೇಳಿಬಂದಿತ್ತು. ಅತ್ತ ರಾಜಸ್ಥಾನ ಹಾಗೂ ಆಂಧ್ರಪ್ರದೇಶ ಸರ್ಕಾರಗಳು ಸೆಸ್ ಕಡಿಮೆ ಮಾಡಿದ್ದರಿಂದಾಗಿ ಒತ್ತಡಕ್ಕೆ ಒಳಗಾಗಿದ್ದ ಮೈತ್ರಿ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ಸಹ ಈ ಬಗ್ಗೆ ಚಿಂತನೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿತ್ತು. ಸೆಸ್ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದ ಸಿಎಂ ಎಚ್.ಡಿ. ಕುಮಾರಸ್ವಾಮಿ ಇದೀಗ ಅಭಿಪ್ರಾಯ ಬದಲಿಸಿದ್ದಾರೆ ಎನ್ನಲಾಗಿದೆ.

ಇಂದು ಪ್ರಸ್ತಾವನೆ ಸಲ್ಲಿಕೆ

ಸೋಮವಾರ ಪ್ರಸ್ತಾವನೆ ಮುಖ್ಯಮಂತ್ರಿಗೆ ಸಲ್ಲಿಕೆಯಾಗಲಿದ್ದು, ಮಂಗಳವಾರದ ಒಳಗೆ ಸರ್ಕಾರದ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ರಾಜ್ಯದಲ್ಲಿ ತೆರಿಗೆ ಸಂಗ್ರಹ ಉತ್ತಮ ರೀತಿಯಲ್ಲಿದ್ದು, ನಿರೀಕ್ಷೆಗಿಂತ ಹೆಚ್ಚಿದೆ. ಪ್ರಮುಖವಾಗಿ ಈ ಅವಧಿಯಲ್ಲಿ ಅಬಕಾರಿ ಸಂಗ್ರಹ ಶೇ.25ಕ್ಕಿಂತ ಹೆಚ್ಚಾಗಿದೆ. ಜತೆಗೆ ಮುಂದೆಯೂ ತೆರಿಗೆ, ರಾಜಸ್ವ ಸಂಗ್ರಹ ಗುರಿಮುಟ್ಟುವುದಾಗಿ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರೈತರ ಸಾಲ ಮನ್ನಾ ಬಾಬ್ತು ಮೊದಲ ಕಂತಿನ ಹಣವೂ ಬಿಡುಗಡೆ ಮಾಡಿದ್ದು, ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿ ಇಲ್ಲ. ಈ ಕಾರಣಕ್ಕೆ ಇಂಧನದ ಮೇಲಿನ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡಲು ಅವಕಾಶವಿದೆ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ರಾಜ್ಯದಲ್ಲಿ ತೈಲ ದರ (ಪ್ರತಿ ಲೀಟರ್​ಗೆ)

ಪೆಟ್ರೋಲ್ 84.59

ಡೀಸೆಲ್ 76.10 ರೂ.