ರೂ. 80ರ ಗಡಿ ದಾಟಿದ ಇಂಧನ ಬೆಲೆ, ಇಂದೂ ಕೂಡ ಬೆಲೆ ಏರಿಕೆ

ನವದೆಹಲಿ: ದಿನೇ ದಿನೆ ಇಂಧನ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಗ್ರಾಹಕರಿಗೆ ಇಂದೂ ಕೂಡ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ದಾಖಲೆಯ ಏರಿಕೆ ಕಂಡುಬಂದಿದ್ದು, ಪ್ರತಿ ಲೀ. ಪೆಟ್ರೋಲ್‌ ಇದೇ ಮೊದಲ ಬಾರಿಗೆ 80 ರೂ. ಗಡಿ ದಾಟಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವುದು ಮತ್ತು ಡಾಲರ್ಸ್‌ ಎದುರು ರೂಪಾಯಿ ಮೌಲ್ಯ ಕುಂಠಿತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗುತ್ತಿದೆ ಎನ್ನಲಾಗಿದ್ದು, ನವದೆಹಲಿಯಲ್ಲಿ ಲೀ. ಪೆಟ್ರೋಲ್‌ 80.50 ರೂ. ಮತ್ತು ಡೀಸೆಲ್‌ 72.61 ರೂ.ಗಳಿಗೆ ಮಾರಾಟವಾಗುತ್ತಿದೆ.

ಮುಂಬೈನಲ್ಲೂ ಕೂಡ ಬೆಲೆ ಏರಿಕೆಯಿಂದ ಹೈರಾಣಾಗುತ್ತಿದ್ದು ಪ್ರತಿ ಲೀ. ಪೆಟ್ರೋಲ್‌ಗೆ 87.89 ರೂ. ಮತ್ತು ಡೀಸೆಲ್‌ಗೆ 77.09 ರೂ.ಗಳಾಗಿದೆ.

ಇನ್ನು ದಿನೇ ದಿನೆ ಗಗನಕ್ಕೇರುತ್ತಿರುವ ಇಂಧನ ಬೆಲೆಯಿಂದಾಗಿ ಹಣದುಬ್ಬರವನ್ನು ಹೆಚ್ಚಿಸುವ ಸಾಧ್ಯತೆಯನ್ನು ನಿರೀಕ್ಷಿಸಲಾಗಿದ್ದು, ಪ್ರಾಥಮಿಕವಾಗಿ ಇಂಧನವನ್ನು ಕೃಷಿ ಉತ್ಪನ್ನಗಳು ಒಳಗೊಂಡಂತೆ ಹೆಚ್ಚಿನ ಸರಕು ಸಾಗಣೆಗೆ ಬಳಸಲಾಗುತ್ತಿದೆ. 15 ದಿನಗಳ ಸರಾಸರಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ಬೆಲೆ ಏರಿಕೆ ಮತ್ತು ರೂಪಾಯಿ ಮೌಲ್ಯ ಕುಸಿತದಿಂದಾಗಿ ದೇಶದಲ್ಲಿ ಇಂಧನ ಬೆಲೆ ಏರಿಕೆ ಉಂಟಾಗುತ್ತಿದೆ.

ಇನ್ನು ಈ ಕುರಿತು ಶನಿವಾರ ಪ್ರತಿಕ್ರಿಯಿಸಿದ್ದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌, ಭಾರತೀಯ ರೂಪಾಯಿ ಡಾಲರ್ಸ್‌ ಎದುರು ಕುಸಿಯುತ್ತಿರುವ ಹಿನ್ನೆಲೆ ಸೇರಿ ಇಂಧನ ಪೂರೈಕೆಯಲ್ಲಿ ಉಂಟಾಗುತ್ತಿರುವ ಅಡೆತಡೆಗಳಿಂದಾಗಿ ಬೆಲೆ ಏರಿಕೆಯಾಗುತ್ತಿದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)