More

    ಇಂಧನ ದರ ಏರಿಕೆ ರಾಜಕೀಯವಲ್ಲ: ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್

    ಮೈಸೂರು: ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿ 5 ರೂ. ಇಳಿಕೆ ಮಾಡಿದ್ದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 3 ರೂ. ಏರಿಕೆ ಮಾಡಲಾಗಿದೆ. ಹಾಗಾಗಿ ಬೆಲೆ ಏರಿಕೆ ರಾಜಕೀಯ ಪ್ರೇರಿತ ಅಲ್ಲ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.
    ಐದು ರಾಜ್ಯಗಳ ಚುನಾವಣೆ ವೇಳೆ ನಿರ್ಮಲಾ ಸೀತಾರಾಮನ್ ಅವರು ಮೂರು ರೂ. ಕಡಿಮೆ ಮಾಡಿದ್ದರು. ಆಯಾ ರಾಜ್ಯಗಳು ಕೂಡ ಕಡಿಮೆ ಮಾಡಿಕೊಳ್ಳಬಹುದು ಎಂದು ಹೇಳಿದ್ದರು. ಆಗ ಕೇಂದ್ರ ಸರ್ಕಾರವನ್ನು ಮೆಚ್ಚಿಸಲು ಬಸವರಾಜ ಬೊಮ್ಮಾಯಿ ಐದು ರೂ. ಕಡಿಮೆ ಮಾಡಿದ್ದರು. ಅವರ ನಿರ್ಧಾರದಿಂದ ಇಲ್ಲಿವರೆಗೆ 15,184 ಕೋಟಿ ರೂ. ನಷ್ಟ ಆಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ರಾಜ್ಯ ಸರ್ಕಾರಕ್ಕೆ 500 ಕೋಟಿ ರೂ. ಆದಾಯ ಬರುತ್ತದೆ. ಆದರೆ 3 ಸಾವಿರ ಕೋಟಿ ರೂ. ಅದಾಯ ಬರುತ್ತದೆ ಎಂದು ಬಿಜೆಪಿ ಬಿಂಬಿಸುತ್ತಿದೆ ಎಂದು ಟೀಕಿಸಿದರು.
    ಈ ಬೆಲೆ ಏರಿಕೆ ಯಾವುದೇ ರಾಜಕೀಯ ಪ್ರೇರಿತ ಅಲ್ಲ. ಅಶೋಕ್ ಅವರು ಹಿಟ್ ಆ್ಯಂಡ್ ರನ್ ಕೇಸ್ ರೀತಿ ಏನೇನೋ ಮಾತನಾಡುವುದು ಸರಿಯಲ್ಲ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ 22 ಬಾರಿ ಬೆಲೆ ಹೆಚ್ಚಳ ಮಾಡಿರುವುದನ್ನು ಮರೆಯಬಾರದು ಎಂದು ಕಿಡಿಕಾರಿದರು.
    ಅಶೋಕ್ ಅವರಿಗೆ ದಿನ ಬೆಳಗ್ಗೆ ಎದ್ದರೆ ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುವುದೇ ಕೆಲಸವಾಗಿದೆ. ಅವರು ವಿಪಕ್ಷ ನಾಯಕನ ಸ್ಥಾನಕ್ಕೆ ಅರ್ಹರಲ್ಲ. ಈ ಬಗ್ಗೆ ಬಿಜೆಪಿಯವರು ಬೇಕಿದ್ದರೆ ಸಂವಾದಕ್ಕೆ ಬನ್ನಿ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.
    ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ದಂಗೆ ಏಳಬೇಕು ಎನ್ನುತ್ತಿದ್ದಾರೆ. ಆದರೆ ಅವರು ಮುಖ್ಯಮಂತ್ರಿ ಆಗಿದ್ದಾಗ ವ್ಯಾಟ್ ಎಷ್ಟಿತ್ತು. ನಿಮಗೆ ವ್ಯಾಟ್‌ನ ಬಗ್ಗೆ ಮಾಹಿತಿ ಇಲ್ಲವಾ? ಪಕ್ಕದ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಿ ಎಂದು ಕುಟುಕಿದರು.
    ನಾವು ಅಧಿಕಾರಕ್ಕೆ ಬಂದ ನಂತರ ವಿದ್ಯುತ್ ದರವನ್ನು 1.10 ಪೈಸೆ ಕಡಿಮೆ ಮಾಡಿದ್ದೇವೆ. ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಲಿಕ್ಕೆ ನಿಮಗೇನು ಸಿಗುತ್ತಿಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ನೀವು ಮಾಡ್ತಿದೀರಾ ಎಂದು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸಮರ್ಥಿಸಿಕೊಂಡರು.
    ನೂತನ ಸಂಸದರು ಕೃತಜ್ಞತೆ ಸಭೆ ಮಾಡುವಾಗ ಎಲ್ಲ ಕಡೆ ಹೋಗಬೇಕು. ಆದರೆ ನಿಮಗೆ ಯಾರು ಮತ ಹಾಕಿದ್ದಾರೆ? ಯಾವ ಏರಿಯಾದಲ್ಲಿ ಮತ ಹಾಕಿದ್ದಾರೋ ಅಲ್ಲಿ ಹೋಗಿ ಕೈ ಮುಗಿಯೋ ಪ್ರಯತ್ನ ಮಾಡಬೇಡಿ. ಮೈಸೂರು-ಕೊಡಗು ಕ್ಷೇತ್ರದ ಎಂಟು ಕ್ಷೇತ್ರದ 21 ಲಕ್ಷ ಮತದಾರರಿಗೂ ನೀವು ಸಂಸದರು ಎನ್ನುವುದನ್ನು ಮರೆಯಬಾದರು. ಬಹಳ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟು ಜನ ನಿಮಗೆ ಮತ ಹಾಕಿದ್ದಾರೆ. ಎಲ್ಲ ಮತದಾರರನ್ನು ಭೇಟಿಯಾಗಿ ಎಂದು ಸಲಹೆ ನೀಡಿದರು.
    ನಾನು ಖಂಡಿತ ಸುಮ್ಮನೆ ಕೂರುವುದಿಲ್ಲ. ನಿಮ್ಮ ಅಂಕುಡೊಂಕುಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತೇನೆ. ನಿರಂತರ ಹೋರಾಟ ಕೂಡ ನಡೆಸುವೆ. ಕೇಂದ್ರ ಸರ್ಕಾರದ ಯೋಜನೆಗಳಿಗೆ ನಮ್ಮ ಬೆಂಬಲವಿದೆ. ಕೇವಲ ಫೋಟೋಗಳಿಗೆ ಪೋಸ್ ಕೊಡುವ ಕೆಲಸ ಮಾಡಬೇಡಿ ಎಂದರು.

    See also  ವ್ಯತಿರಿಕ್ತ ಪರಿಣಾಮ ಬೀರಿದೆ ಮೌಢ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts