ಬಣ್ಣಬಣ್ಣದ ಹಣ್ಣು, ತರಕಾರಿ

ಹಿಂದಿನ ಅಂಕಣದಲ್ಲಿ ಕೆಂಪು, ನೀಲಿ, ನೇರಳೆಬಣ್ಣದ ಹಣ್ಣು, ತರಕಾರಿಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಇಂದು ಇನ್ನಷ್ಟು ತರಹದ ಹಣ್ಣು, ತರಕಾರಿಗಳ ಕುರಿತು ಅರಿತುಕೊಳ್ಳೋಣ. ಬಿಳಿ ಬಣ್ಣದ ಹಣ್ಣು ಹಾಗೂ ತರಕಾರಿಗಳು ಫಾಲಿಫಿನಾಲ್ ಅಂಶಗಳಿಂದ ಆ ಬಣ್ಣವನ್ನು ಪಡೆದಿರುತ್ತವೆ. ಎಂಥೋಕ್ಸಾಂಥಿನ್ ಎಂಬ ಆಂಟಿ ಆಕ್ಸಿಡೆಂಟ್ ಇದರಲ್ಲಿದ್ದು, ಹೃದಯಸಂಬಂಧಿತ ಸಮಸ್ಯೆಗಳಿಂದ ದೂರವಿರಿಸಲು ಹಾಗೂ ಕ್ಯಾನ್ಸರ್ ಬರುವ ಸಂಭವವನ್ನು ಕಡಿಮೆ ಮಾಡಲು ಸಹಕಾರಿ. ಬೆಳ್ಳುಳ್ಳಿಯಂಥ ಬಿಳಿ ಬಣ್ಣದ ಪದಾರ್ಥಗಳು ಅಲಿಸಿನ್ ಎಂಬ ಅಂಶವನ್ನು ಹೊಂದಿದ್ದು ಅತ್ಯಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು, ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸಲು ಅನುಕೂಲಕಾರಿ. ಇವು ಹೆಚ್ಚಾಗಿ ಪೊಟ್ಯಾಷಿಯಂ, ವಿಟಮಿನ್ ಸಿ, ಫೋಲೇಟ್, ನಿಯಾಸಿನ್, ರೈಬೋಪ್ಲೇವಿನ್ ಹೊಂದಿರುತ್ತದೆ.

ಎಪ್ರಿಲ್ 2017ರಲ್ಲಿ ವರ್ಡ್ ಜರ್ನಲ್ ಆಫ್ ಗ್ಯಾಸ್ಟೋಎಂಟೆರಾಲೊಜಿ ಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಬಿಳಿ ಬಣ್ಣದ ತರಕಾರಿ ಹಾಗೂ ಹಣ್ಣುಗಳು ಕೊಲೆರೆಕ್ಟಲ್ ಕ್ಯಾನ್ಸರ್​ನಿಂದ ರಕ್ಷಿಸುತ್ತದೆ. ಅಂತೆಯೇ ಕಿತ್ತಲೆ ಬಣ್ಣ ಹಾಗೂ ಹಳದಿಬಣ್ಣದ ಹಣ್ಣು, ತರಕಾರಿಗಳು ಕೆರೊಟಿನೈಡ್ಸ್ ಹೊಂದಿರುತ್ತದೆ. ನಮ್ಮ ದೇಹದ ರಕ್ಷಣಾವ್ಯವಸ್ಥೆಯನ್ನು ಬಲಗೊಳಿಸುವ ಕೆಲಸವನ್ನು ಇವು ಮಾಡುತ್ತವೆ. ಕಿತ್ತಲೆಹಣ್ಣು, ಪಪ್ಪಾಯ, ಅನಾನಸ್, ಮೂಸಂಬಿ, ಸೀಬೆಹಣ್ಣು, ಹಳದಿ ದೊಡ್ಡಮೆಣಸು ಇತ್ಯಾದಿ ಹಳದಿ, ಕಿತ್ತಲೆಬಣ್ಣದ ಹಣ್ಣು, ತರಕಾರಿಗಳನ್ನು ಹೆಚ್ಚು ಸೇವಿಸುವ ವ್ಯವಸ್ಥೆ ಮಾಡಿಕೊಳ್ಳೋಣ.

ಹಸಿರುಬಣ್ಣದ ಹಣ್ಣು, ತರಕಾರಿಗಳೂ ಆರೋಗ್ಯಕ್ಕೆ ಉತ್ತಮ. ಇದರಲ್ಲಿನ ಕ್ಲೋರೋಫಿಲ್ ಇದರ ಹಸಿರು ಬಣ್ಣಕ್ಕೆ ಕಾರಣ. ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ಫೋಲೇಟ್ ಇತ್ಯಾದಿ ವಿಟಮಿನ್​ಗಳು, ಅನೇಕ ಆಂಟಿ ಆಕ್ಸಿಡೆಂಟ್​ಗಳು, ಖನಿಜಪದಾರ್ಥಗಳು ಎಲ್ಲವುಗಳನ್ನೂ ಹೊಂದಿರುವ ಪೌಷ್ಟಿಕಾಂಶಭರಿತ ಆರೋಗ್ಯದಾಯಿನಿ ಪದಾರ್ಥಗಳಾಗಿವೆ. ಹಸಿರು ಸೊಪ್ಪುಗಳು, ಕಿವಿಹಣ್ಣು, ದ್ರಾಕ್ಷಿಹಣ್ಣು, ಹಸಿರು ಕ್ಯಾಬೇಜ್, ಬೆಂಡೆಕಾಯಿ, ತೊಂಡೆಕಾಯಿ, ಬೀನ್ಸ್, ನವಿಲಕೋಸು, ಪಡವಲಕಾಯಿ, ದೊಡ್ಡಮೆಣಸು, ಹಾಗಲಕಾಯಿ ಇತ್ಯಾದಿಗಳನ್ನು ನಮ್ಮ ಆಹಾರಪದಾರ್ಥಗಳಲ್ಲಿ ಬಳಸೋಣ.