ಹಡಿಲು ಗದ್ದೆಯಲ್ಲಿ ಸಮೃದ್ಧ ಬೆಳೆ

< ಬಂಟ್ವಾಳ ತಾಲೂಕಿನ ಮಯ್ಯರ ಬೈಲಿನಲ್ಲಿ ಕೃಷಿ ಕ್ರಾಂತಿ * ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರಿಂದ ಸಾಧನೆ >

ಸಂದೀಪ್ ಸಾಲ್ಯಾನ್ ಬಂಟ್ವಾಳ

ಕಳೆದ ಹತ್ತು ವರ್ಷ ಹಡಿಲು ಬಿದ್ದಿದ್ದ ಗದ್ದೆ ಇತ್ತೀಚಿನ ಎರಡು ವರ್ಷಗಳಿಂದ ಹಸಿರಾಗಿ ನಳನಳಿಸುತ್ತಿದೆ. ಬಿಸಿಲಿನ ತಾಪಕ್ಕೆ ಗದ್ದೆಗಳೆಲ್ಲ ನೀರಿಲ್ಲದೆ ಬರಡಾಗಿದ್ದರೆ ಬಂಟ್ವಾಳ ತಾಲೂಕಿನ ಮಯ್ಯರ ಬೈಲಿನಲ್ಲಿರುವ ಮೂರುವರೆ ಎಕರೆ ಗದ್ದೆಯಲ್ಲಿ ಭತ್ತದ ತೆನೆ ಸಮೃದ್ಧವಾಗಿದ್ದು, ಕಟಾವಿಗೆ ಸಿದ್ಧಗೊಂಡಿದೆ. ಪ್ರಗತಿಬಂಧು ಸ್ವಸಹಾಯ ಗುಂಪಿನ ನಾಲ್ಕು ಮಂದಿ ಸದಸ್ಯರು ಈ ಕೃಷಿ ಕ್ರಾಂತಿಯ ಸಾಧಕರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ರೋಡ್ ವಲಯ ಪಂಜಿಕಲ್ಲು ಕಾರ್ಯಕ್ಷೇತ್ರದ ಆಚಾರಿಪಲ್ಕೆ ಒಕ್ಕೂಟದ ಕೇಳ್ದೋಡಿ (ಎ) ಪ್ರಗತಿಬಂಧು ಒಕ್ಕೂಟದ ಸದಸ್ಯರು ಭತ್ತ ಬೆಳೆಯುವ ಯೋಜನೆ ರೂಪಿಸಿದ್ದರು. ಅದರಂತೆ ಅಧ್ಯಕ್ಷ ರಾಜೇಶ್ ಗೌಡ, ಸದಸ್ಯರಾದ ಪದ್ಮನಾಭ ಪೂಜಾರಿ, ಬೂಬ ಮೂಲ್ಯ, ಮೋಹಿನಿ ಎಂಬುವರು ಬಿ.ಸಿ.ರೋಡಿನ ಮಯ್ಯರಬೈಲಿನಲ್ಲಿರುವ ಪುರುಷೋತ್ತಮ, ನಾಗೇಶ್ ನಾಳೆಹಿತ್ಲು ಮತ್ತು ವಾಸು ಕುಲಾಲ್ ಅವರ ಕೃಷಿ ಜಮೀನನ್ನು ಗೇಣಿಗೆ ಪಡೆದು ಭತ್ತ ಬೆಳೆಯುವ ವಿಚಾರ ಪ್ರಸ್ತಾಪಿಸಿದರು. ಅದರಂತೆ ವಲಯ ಮೇಲ್ವಿಚಾರಕ ರಮೇಶ್ ಎಸ್. ಮತ್ತು ಕೃಷಿ ಮೇಲ್ವಿಚಾರಕ ಮುರಳೀಧರ ಮಾರ್ಗದರ್ಶನದಲ್ಲಿ ಭತ್ತದ ಬೇಸಾಯ ಆರಂಭಗೊಂಡಿತು.

ಬಿತ್ತನೆ ಕಾರ್ಯ ನಡೆದು ಕೊಯ್ಲಿನವರೆಗೆ ಸುಮಾರು 100 ದಿನ ಅವಧಿಯಲ್ಲಿ ಪಂಜಿಕಲ್ಲಿನಿಂದ ಈ ನಾಲ್ವರೂ ಸದಸ್ಯರು ಪ್ರತಿನಿತ್ಯ ಆಗಮಿಸಿ, ಗದ್ದೆಯ ಕಾರ್ಯಗಳನ್ನು ನಡೆಸುತ್ತಿದ್ದರು. ಸಾಕಷ್ಟು ನೀರಿನ ಲಭ್ಯತೆಯಿಂದ ಕೃಷಿ ಉತ್ತಮ ಫಸಲು ನೀಡಲು ಸಾಧ್ಯವಾಯಿತು. ಕೃಷಿ ಕಾರ್ಯಕ್ಕೆ ಯಾಂತ್ರೀಕರಣ ಬಳಕೆ ಮಾಡಿಕೊಳ್ಳಲಾಯಿತು. ಈಗ ಸ್ವಸಹಾಯ ಗುಂಪಿನ ನಾಲ್ವರು ಸದಸ್ಯರ ಪರಿಶ್ರಮಕ್ಕೆ ತಕ್ಕ ಫಲ ಬಂದಿದ್ದು 50 ಕ್ವಿಂಟಾಲ್ ಭತ್ತ ಸಿಗುವ ನಿರೀಕ್ಷೆಯಿದೆ.

ಹಿಂದೆ ಬರಡಾಗಿತ್ತು ಗದ್ದೆ: ಹತ್ತು ವರ್ಷಗಳಿಂದ ಹುಲ್ಲು ತುಂಬಿ ಹಡಿಲು ಬಿದ್ದಿದ್ದ 5 ಎಕರೆ ವಿಸ್ತೀರ್ಣದ ಈ ಗದ್ದೆಯನ್ನು ಕಳೆದ ವರ್ಷ ಮಾಣಿಲ ಶ್ರೀ ಮಹಾಲಕ್ಷ್ಮೀ ಸೇವಾ ಸಮಿತಿಯ ಶ್ರೀಧಾಮ ಸೇವಾ ಪ್ರಕಲ್ಪದಡಿ ಕೃಷಿ ನಡೆಸಲಾಗಿತ್ತು. ಜಮೀನಿನ ಮಾಲೀಕರ ಒಪ್ಪಿಗೆ ಪಡೆದು ಗದ್ದೆಗೆ ಯಂತ್ರೋಪಕರಣಗಳು ಬರಲು ರಸ್ತೆ ನಿರ್ಮಿಸಿ, ಹುಲ್ಲು ಪೊದೆಗಳಿಂದ ತುಂಬಿ ಹೋಗಿದ್ದ ಗದ್ದೆಯನ್ನು ಸ್ವಚ್ಛಗೊಳಿಸಿ ಸುಮಾರು 5 ಎಕರೆ ವಿಸ್ತೀರ್ಣದ ಗದ್ದೆಯಲ್ಲಿ ಬೇಸಾಯ ಮಾಡಿ ಹಡೀಲು ಗದ್ದೆಯಲ್ಲಿ ಹಸಿರು ನಳನಳಿಸುವಂತೆ ಮಾಡಲಾಗಿತ್ತು. ವಿಜಯವಾಣಿ ದಿಗ್ವಿಜಯ ಮಾಧ್ಯಮ ಸಹಯೋಗ ನೀಡಿತ್ತು. ಗದ್ದೆಗಳು ಬರಡಾಗಿ ಉಳಿಯಬಾರದು, ಕೃಷಿ ಕಾರ್ಯ ನಡೆದು ಫಲವತ್ತವಾಗಿರಬೇಕು ಎನ್ನುವುದು ಶ್ರೀಧಾಮ ಸೇವಾ ಪ್ರಕಲ್ಪದ ಚಿಂತನೆಯಾಗಿತ್ತು. ಈಗ ಅದೇ ಮಾದರಿಯಲ್ಲಿ ಈ ವರ್ಷ ಪ್ರಗತಿ ಬಂಧು ಸ್ವಸಹಾಯ ಗುಂಪಿನ ಸದಸ್ಯರು ಬೇಸಾಯ ಮಾಡುವ ಮೂಲಕ ಕೃಷಿ ಸಾಧನೆ ಮಾಡಿದ್ದಾರೆ.

ಜಿಲ್ಲೆಯಲ್ಲಿ ಭತ್ತದ ಗದ್ದೆಗಳು ನಶಿಸುತ್ತಿದ್ದು, ಪ್ರಗತಿಬಂಧು ಸ್ವಸಹಾಯ ಗುಂಪಿನ ಸದಸ್ಯರು ಬೇಸಾಯ ಮಾಡಿ ಕೃಷಿ ಸಾಧನೆ ಮಾಡಿದ್ದಾರೆ. ಈ ಸದಸ್ಯರು ತಮ್ಮ ಪರಿಶ್ರಮದ ಮೂಲಕ ಇತರ ಸದಸ್ಯರಿಗೆ ಮಾದರಿಯಾಗಿದ್ದಾರೆ.
ರಮೇಶ್ ಎಸ್. ಮೇಲ್ವಿಚಾರಕ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ.ರೋಡು ವಲಯ

ಕೃಷಿ ಕಾರ್ಯಕ್ಕೆ ಸುಮಾರು 45 ಸಾವಿರ ರೂಪಾಯಿ ಖರ್ಚಾಗಿದೆ. ಬೆಳೆ ಕಟಾವಿಗೆ ಬಂದಿದ್ದು, ಶ್ರಮಕ್ಕೆ ತಕ್ಕ ಬೆಲೆ ದೊರಕಿರುವ ಸಂತಸ ಇದೆ.
ಮುರಳೀಧರ ಕೃಷಿ ಮೇಲ್ವಿಚಾರಕ