ಸಂಕೇಶ್ವರ: ಗಡಿಭಾಗದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನ ಮೀಸಲಿಡಬೇಕಾದ ಅನಿವಾರ್ಯತೆ ಇದೆ ಎಂದು ಜಿಪಂ ಮಾಜಿ ಸದಸ್ಯ ಪವನ ಕತ್ತಿ ಒತ್ತಾಯಿಸಿದ್ದಾರೆ.
ಪಟ್ಟಣದ ಹಿಟ್ನಿ (ಹೊಳೆ ಹಿಟ್ನಿ) ರಸ್ತೆಯಲ್ಲಿ ಬ್ರಿಡ್ಜ್ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರೈತರು ಹಾಗೂ ನಿವಾಸಿಗಳ ಸಮಸ್ಯೆ ಮನಗಂಡು ಶಾಸಕ ನಿಖಿಲ್ ಕತ್ತಿ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರ ಪ್ರಯತ್ನದಲ್ಲಿ ಜಿಪಂ ವಿಶೇಷ ಅನುದಾನದಡಿ ಎರಡು ಕಡೆ ಸೇರಿ ಒಟ್ಟು 20.75 ಲಕ್ಷ ರೂ.ಗಳ ವೆಚ್ಚದಲ್ಲಿ ಬಾಕ್ಸ್ ಕಲ್ವರ್ಟ್ ಬ್ರಿಡ್ಜ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದು, ಶೀಘ್ರ ರಸ್ತೆ ನಿರ್ಮಾಣ ಕಾಮಗಾರಿಯನ್ನೂ ಕೈಗೊಳ್ಳಲಾಗುವುದು ಎಂದರು.
ಸೋಲಾಪುರ ಗ್ರಾಮದಲ್ಲಿ 10 ಲಕ್ಷ ರೂ.ವೆಚ್ಚದಲ್ಲಿ ಕಲ್ಮೇಶ್ವರ ದೇವಸ್ಥಾನ, 10 ಲಕ್ಷ ರೂ.ವೆಚ್ಚದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ರಿಪೇರಿ, ರಾಶಿಂಗ ಗ್ರಾಮದಲ್ಲಿ 3 ಲಕ್ಷ ರೂ.ವೆಚ್ಚದಲ್ಲಿ ವ್ಯಾಯಾಮ ಶಾಲೆ ಕಾಮಗಾರಿಗೆ ಚಾಲನೆ ನೀಡಲಾಯಿತು.
ಹಿರಿಯ ಧುರೀಣ ಅಪ್ಪಾಸಾಹೇಬ ಶಿರಕೋಳಿ, ಶ್ರೀಕಾಂತ ಹತನೂರಿ, ಗಜಾನನ ಕ್ವಳ್ಳಿ, ಸದಸ್ಯರಾದ ಶಿವಾನಂದ ಮುಡಶಿ, ಅಜಿತ ಕರಜಗಿ, ಎಸ್.ಎ.ಪರ್ವತರಾವ, ಮುಖಂಡರಾದ ರೋಹನ ನೇಸರಿ, ಹರೂನ್ ಮುಲ್ಲಾ, ಶಶಿಧರ ಭೂಸಗೋಳ ಇದ್ದರು.