ಅಮೆರಿಕದಲ್ಲೇ ಕುಳಿತು ತಮ್ಮ ಮನೆಯ ಕಳ್ಳರನ್ನು ಪೊಲೀಸರಿಗೆ ಹಿಡಿದುಕೊಟ್ಟ ಭಾರಿ ಸ್ಮಾರ್ಟ್​ ಆದ ಮಾಲೀಕ!

ಬೆಂಗಳೂರು: ಅದೆಷ್ಟೋ ಬಾರಿ ಮನೆಯಲ್ಲಿ ಮಲಗಿದ್ದರೂ, ನಮ್ಮೂರಲ್ಲೇ ಇದ್ದರೂ ನಮ್ಮ ಮನೆಯ ಕಳ್ಳತನವನ್ನು ತಡೆಯಲು ಸಾಧ್ಯವಾಗುವುದಿಲ್ಲ. ಆದರೆ, ಇಲ್ಲೊಬ್ಬ ಸ್ಮಾರ್ಟ್​ ವ್ಯಕ್ತಿ ಅಮೆರಿಕದಲ್ಲಿದ್ದರೂ ಬೆಂಗಳೂರಿನಲ್ಲಿರುವ ತಮ್ಮ ಮನೆ ಕಳ್ಳತನವಾಗುತ್ತಿರುವುದನ್ನು ಪತ್ತೆ ಮಾಡಿ, ನೆರೆಹೊರೆಯವರನ್ನು ಎಚ್ಚರಿಸುವ ಜತೆಗೆ ಪೊಲೀಸರು ಸ್ಥಳಕ್ಕೆ ಬರುವಂತೆ ಮಾಡಿ, ಕಳ್ಳರನ್ನು ಹಿಡಿದುಕೊಟ್ಟಿದ್ದಾರೆ!

ಅರೆ, ಇದಾವುದೋ ಸಿನಿಮಾದ ಸಿಂಗಲ್​ ಲೈನ್​ ಸ್ಟೋರಿ ಎಂದು ಭಾವಿಸಿದಿರಾ? ಖಂಡಿತಾ ಇಲ್ಲ ಸ್ವಾಮಿ. ಇದು ವಾಸ್ತವವಾಗಿ ನಡೆದಿರುವ ಘಟನೆ.

ಅದು ಶುಕ್ರವಾರ ಮುಂಜಾನೆ 3.25ರ ಸಮಯ. ನಾಗಾವರದ ಮಾನ್ಯತಾ ಟೆಕ್​ ಪಾರ್ಕ್​ ರಸ್ತೆ ನಿರ್ಮಾನುಷವಾಗಿತ್ತು. ಈ ಸಂದರ್ಭವನ್ನು ಬಳಸಿಕೊಂಡು 30ರ ಆಸುಪಾಸಿನಲ್ಲಿದ್ದ ರಾಜಕುಮಾರ್​ ಮತ್ತು ದಿಲೀಪ್​ ಎಂಬ ಇಬ್ಬರು ಬೀಗ ಹಾಕಿದ್ದ ಮನೆಗೆ ಮಾಳಿಗೆಯಿಂದ ಕನ್ನ ಹಾಕಿ ನುಗ್ಗಿದ್ದರು. ಇದಾಗಿ ಕೆಲವೇ ಕ್ಷಣಗಳಲ್ಲಿ ಅಮೆರಿಕದಲ್ಲಿದ್ದ ಆ ಮನೆಯ ಮಾಲೀಕ ಪಾರ್ಥಸಾರಥಿ ಎಂಬುವರ ಸ್ಮಾರ್ಟ್​ಫೋನ್​ ನಿರಂತರವಾಗಿ ಬಡಿದುಕೊಳ್ಳಲಾರಂಭಿಸಿತ್ತು! ಮನೆಯಲ್ಲಿ ಅಳವಡಿಸಿದ್ದ ಮೋಷನ್​ ಸೆನ್ಸರ್​ಗಳು ಯಾರೂ ಇಲ್ಲದ ಮನೆಯಲ್ಲಿ ಅಪರಿಚಿತರ ಚಲನವಲನದ ಸುಳಿವನ್ನು ಪತ್ತೆ ಮಾಡಿ, ಈ ಬಗ್ಗೆ ಅವರ ಮೊಬೈಲ್​ಗೆ ನಿರಂತರವಾಗಿ ಮಾಹಿತಿ ರವಾನಿಸುತ್ತಿದ್ದವು.

ಅದೇಕೇ ಹೀಗೆ ಎಂದು ನೋಡಿದಾಗ, ಬೆಂಗಳೂರಿನಲ್ಲಿರುವ ತಮ್ಮ ಮನೆಗೆ ಯಾರೋ ನುಗ್ಗಿರುವ ಮಾಹಿತಿ ದೊರೆಯಿತು. ತಕ್ಷಣವೇ ಅವರು ತಮ್ಮ ಮನೆಯ ಸಿಸಿ ಕ್ಯಾಮರಾವನ್ನು ರಿಮೋಟ್ ಆಗಿ ಆಕ್ಸೆಸ್​ ಮಾಡಿದಾಗ ಇಬ್ಬರು ವ್ಯಕ್ತಿಗಳು ಮನೆಯೊಳಗೆ ಪ್ರವೇಶಿಸಿ, ಕಳ್ಳತನಕ್ಕೆ ಇಳಿದಿರುವುದು ಪತ್ತೆಯಾಗಿತ್ತು.

ತಕ್ಷಣವೇ ತಮ್ಮ ಮನೆಯ ನೆರೆಹೊರೆಯವರೊಂದಿಗೆ ರಚಿಸಿಕೊಂಡಿದ್ದ ವಾಟ್ಸ್​ಆ್ಯಪ್​ ಗ್ರೂಪ್​ಗೆ ಈ ಮಾಹಿತಿಯನ್ನು ರವಾನಿಸಿದ ಪಾರ್ಥಸಾರಥಿ, ಸಹಾಯ ಯಾಚಿಸಿದ್ದಾರೆ. ವಾಟ್ಸ್​ಆ್ಯಪ್​ ಸಂದೇಶದಿಂದ ಎಚ್ಚರಗೊಂಡ ಒಬ್ಬರು ಪೊಲೀಸರಿಗೆ ಕರೆ ಮಾಡಿ, ವಿಷಯ ತಿಳಿಸಿದ್ದಾರೆ. ಎಂಟು ಪೊಲೀಸರಿದ್ದ ಹೊಯ್ಸಳ ತಂಡ ತಕ್ಷಣವೇ ಸ್ಥಳಕ್ಕೆ ಧಾವಿಸಿತ್ತು.

ಪಾರ್ಥಸಾರಥಿ ಅವರ ವಾಟ್ಸ್​ಆ್ಯಪ್​ ಸಂದೇಶ ನೋಡುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ರವಾನಿಸಿದೆ. ಬಳಿಕ ಕಳ್ಳರು ಇನ್ನೂ ಮನೆಯೊಳಗೆ ಇದ್ದಾರೆ ಎಂಬುದು ಗೊತ್ತಿದ್ದರಿಂದ, ಯಾವುದೇ ಕಾರಣಕ್ಕೂ ಸೈರನ್​ ಬಳಸದಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದೆ. ಅದರಂತೆ ಸ್ಥಳಕ್ಕೆ ಬಂದ ಅವರು, ಮನೆಯ ಎಲ್ಲ ಬಾಗಿಲುಗಳನ್ನು ಪರಿಶೀಲಿಸಿ, ಕಾರ್ಯಾಚರಣೆಗೆ ಸಜ್ಜಾಗುತ್ತಿದ್ದಂತೆ ದಿಲೀಪ್​ ಎಂಬಾತ ಮನೆಹೊಕ್ಕಿದ್ದ ಮಾಳಿಗೆಯ ಮಾರ್ಗದಲ್ಲೇ ಮನೆಯಿಂದ ಹೊರಬಂದಿದ್ದ. ಆದರೆ, ಪೊಲೀಸರು ಮನೆ ಸುತ್ತುವರಿದಿರುವುದನ್ನು ಕಂಡು ಗಾಬರಿಯಾದರೂ, ತಪ್ಪಿಸಿಕೊಳ್ಳಲು ಮುಂದಾದ. ಕೈಯಲ್ಲಿ ಕಬ್ಬಿಣದ ರಾಡ್​ ಹಿಡಿದಿದ್ದ ಆತ ಅದನ್ನು ಬೀಸುತ್ತಾ ಓಡಲಾರಂಭಿಸಿದ. ಸಾರ್ವಜನಿಕರು ಮತ್ತು ಕೆಲವರ ಸಾಕುನಾಯಿಗಳು ಅಂದಾಜು 1 ಕಿ.ಮೀ. ಬೆನ್ನಟ್ಟಿದರೂ ಆತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಎಂದು ಹೆಸರು ಹೇಳಲಿಚ್ಛಿಸದ ಪಾರ್ಥಸಾರಥಿ ನೆರೆಮನೆಯವರು ಹೇಳಿದ್ದಾರೆ.

ಹೆಚ್ಚುವರಿ ಬೀಗ ಬಳಸಿ ಮನೆಯೊಳಗೆ ಪ್ರವೇಶಿಸಿದ ಪೊಲೀಸರು ರಾಜಕುಮಾರ್​ಗಾಗಿ ಹುಡುಕಾಡಲಾರಂಭಿಸಿದರು. ಕುರ್ಚಿಯೊಂದರ ಕೆಳಗೆ ಅವತಿಟ್ಟುಕೊಂಡಿದ್ದ ಆತ ಪೊಲೀಸರ ಕೈಗೆ ಸಿಕ್ಕಿಬಿದ್ದ. ಇಷ್ಟೆಲ್ಲ ಘಟನೆಗಳು ಕೇವಲ 1 ಗಂಟೆ ಅವಧಿಯಲ್ಲಿ ನಡೆಯಿತು ಎಂದು ಹೇಳಿದರು.

ಮೊದಲ ಪ್ರಯತ್ನದಲ್ಲೇ ಸಿಕ್ಕಿಬಿದ್ದ
ರಾಜಕುಮಾರ್​ ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದಿದ್ದ. ಆತನಿಗೆ ದಿಲೀಪ್​ನ ಪರಿಚಯವಾಗಿತ್ತು. ಆತನೊಂದಿಗೆ ಮನೆಗಳ್ಳತನ ಮಾಡಲು ಮುಂದಾಗಿದ್ದ. ಆದರೆ ಮೊದಲ ಪ್ರಯತ್ನದಲ್ಲೇ ಸಿಕ್ಕಿಬಿದ್ದಿದ್ದಾನೆ.

ಮುನ್ನೆಚ್ಚರಿಕೆ ಕ್ರಮ ತಂದ ಜಯ
ಪಾರ್ಥಸಾರಥಿ ಅವರು ಕಳೆದ ಬಾರಿ ಸಿಂಗಾಪುರಕ್ಕೆ ಹೋಗಿದ್ದಾಗಲೂ ಅವರ ಮನೆಯಲ್ಲಿ ಕಳ್ಳತನವಾಗಿತ್ತು. ಆದರೆ, ಆಗ ಅವರು ಅಷ್ಟು ಸ್ಮಾರ್ಟ್​ ಆಗಿರಲಿಲ್ಲ. ಹಾಗಾಗಿ ಅವರು ತಮ್ಮ ಸಿಂಗಾಪುರ ಪ್ರವಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿ ಬೆಂಗಳೂರಿಗೆ ಮರಳಬೇಕಾಗಿ ಬಂದಿತ್ತು.

ನಂತರ ಎಚ್ಚೆತ್ತುಕೊಂಡ ಅವರು ತಮ್ಮ ಮನೆಯಲ್ಲಿ ಮೋಷನ್​ ಸೆನ್ಸರ್​ಗಳು, ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದರು. ಇದರಿಂದ ಈ ಬಾರಿ ಅವರು ಸಪ್ತ ಸಾಗರದಾಚೆ ಇರುವ ಅಮೆರಿಕದಲ್ಲಿದ್ದರು. ಅಲ್ಲಿಯೇ ಕುಳಿತು, ತಮ್ಮ ಮನೆಯ ಕಳ್ಳತನವನ್ನು ತಪ್ಪಿಸುವಲ್ಲಿ ಯಶಸ್ವಿಯಾದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *