ನವದೆಹಲಿ: ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜಿಡಿಪಿಯ ಪ್ರತಿಶತ 10ರಷ್ಟನ್ನು ಅಂದರೆ 20 ಲಕ್ಷ ಕೋಟಿ ರೂಪಾಯಿ ವಿಶೇಷ ಆರ್ಥಿಕ ಪ್ಯಾಕೇಜ್ನ್ನು ಕೊವಿಡ್-19ರ ಬಿಕ್ಕಟ್ಟಿನ ನಿರ್ವಹಣೆಗಾಗಿ ಘೋಷಣೆ ಮಾಡಿದ್ದಾರೆ.
ಆತ್ಮ ನಿರ್ಭರ ಭಾರತ ಅಭಿಯಾನಕ್ಕಾಗಿ ಈ ವಿಶೇಷ ಪ್ಯಾಕೇಜ್ನ್ನು ಕೇಂದ್ರ ಸರ್ಕಾರ ಘೋಷಣೆ ಮಾಡುತ್ತಿದೆ. ಇದರಿಂದಾಗಿ ಖಂಡಿತ ಆರ್ಥಿಕತೆಯ ಶಾಖೆಗಳಾದ ಬೇಡಿಕೆ, ಪೂರೈಕೆ ಮತ್ತು ಉತ್ಪಾದನಾ ಕ್ಷೇತ್ರಗಳು ಉತ್ತೇಜನಗೊಳ್ಳುತ್ತವೆ. ಸ್ವಾವಲಂಬನೆ ಸಾಧಿಸಲು ಜಮೀನು, ಕಾರ್ಮಿಕರು, ದ್ರವ್ಯತೆ, ಕಾನೂನುಗಳನ್ನು ಕೇಂದ್ರೀಕರಿಸಿ ಈ ಪ್ಯಾಕೇಜ್ ಘೋಷಣೆ ಮಾಡಲಾಗಿದೆ.
ಈ ಆರ್ಥಿಕ ಪ್ಯಾಕೇಜ್ ನಿಂದ ಖಂಡಿತ ಗೃಹ ಕೈಗಾರಿಕೆಗಳು, ಸಣ್ಣ, ಮಧ್ಯಮ ಉದ್ಯಮಗಳು, ಅದನ್ನು ನಂಬಿಕೊಂಡು ಬದುಕುತ್ತಿರುವ ಕೋಟ್ಯಂತರ ಜನರಿಗೆ ಸಹಾಯವಾಗಲಿದೆ. ಅಷ್ಟೇ ಅಲ್ಲ, ರೈತರು, ಮಧ್ಯಮ ವರ್ಗದವರಿಗೂ ಅನುಕೂಲ ಆಗಲಿದೆ ಎಂದು ನರೇಂದ್ರ ಮೋದಿಯವರು ತಿಳಿಸಿದರು.
ಇದನ್ನೂ ಓದಿ: ಸಿದ್ಧವಾಗಿರಿ… ಹೊಸ ನಿಯಮಗಳೊಂದಿಗೆ ಜಾರಿಯಾಗಲಿದೆ ಲಾಕ್ಡೌನ್ 4.0: ಪ್ರಧಾನಿ ಮೋದಿ
ಕರೊನಾ ಸಂಕಷ್ಟದ ಸಮಯ ನಮಗೆ ಸ್ಥಳೀಯ ವಸ್ತುಗಳ ಪ್ರಾಮುಖ್ಯತೆಯನ್ನು ತಿಳಿಸಿದೆ. ಇವತ್ತಿನ ಜಾಗತಿಕ ಬ್ರ್ಯಾಂಡ್ಗಳು ಒಂದು ಕಾಲದಲ್ಲಿ ಸ್ಥಳೀಯವೇ ಆಗಿದ್ದವು. ಆಗ ಜನರು ಅದಕ್ಕೆ ಹೆಚ್ಚು ಬೆಂಬಲ ಕೊಟ್ಟು, ಹೆಚ್ಚೆಚ್ಚು ಬೇಡಿಕೆ ಇಟ್ಟ ಬಳಿಕ ಅವು ಜಾಗತಿಕ ಮಟ್ಟದ ಬ್ರ್ಯಾಂಡ್ಗಳಾಗಿ ಬದಲಾದವರು. ನಾವು ಭಾರತೀಯರು ಈ ಕ್ಷಣದಿಂದ ಸ್ಥಳೀಯ ಉತ್ಪಾದನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ನಮ್ಮ ಉತ್ಪನ್ನಗಳಿಗೆ ಮೊದಲ ಆದ್ಯತೆ ನೀಡಬೇಕು. ಅದನ್ನು ಹೆಮ್ಮೆಯಿಂದ ಬಳಸಬೇಕು ಎಂದು ಹೇಳಿದರು.
ಸ್ವಾವಲಂಬಿ ಭಾರತಕ್ಕೆ ಪ್ರಧಾನಿ ಮೋದಿಯವರು ಹೆಸರಿಸಿದ ಪಂಚ ಆಧಾರ ಸ್ತಂಭಗಳು ಇವು..
- ಆರ್ಥಿಕತೆ- ಸಾಮರ್ಥ್ಯ ಮತ್ತು ಪರಿಮಾಣದ ಜಿಗಿತ
- ಮೂಲ ಸೌಕರ್ಯ ಹಾಗೂ ಆಧುನಿಕತೆಯ ಗುರುತು
- ವ್ಯವಸ್ಥೆ- ತಂತ್ರಜ್ಞಾನದ ಸಾರಥ್ಯದಲ್ಲಿ 21ನೇ ಶತಮಾನದ ಕನಸು ಸಾಕಾರ
- ಜನಸಂಖ್ಯೆ- ದೇಶದ ವೈವಿಧ್ಯಪೂರ್ಣ ಶಕ್ತಿ
- ಬೇಡಿಕೆ, ಪೂರೈಕೆ- ಬೌದ್ಧಿಕ ಶಕ್ತಿ ಕ್ಷಮತೆ ಸದ್ಬಳಕೆ (ಏಜೆನ್ಸೀಸ್)
ಇದನ್ನೂ ಓದಿ: ಕರೊನಾ ಬಿಕ್ಕಟ್ಟು ನಿರ್ವಹಣೆಗಾಗಿ 20 ಲಕ್ಷ ಕೋಟಿ ರೂ.ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ ಪ್ರಧಾನಿ ಮೋದಿ