ದೇವದುರ್ಗ: ಬಸವಾದಿ ಶರಣರು ಸಮಾಜವನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಹಲವು ವಚನಗಳನ್ನು ರಚಿಸಿದ್ದಾರೆ. ದೇವರ ದಾಸಿಮಯ್ಯ ಅವರ ವಚನಗಳನ್ನು ಯುವ ಜನತೆಗೆ ಕಸಾಪ ತಲುಪಿಸುವ ಕೆಲಸ ಮಾಡಬೇಕು ಎಂದು ದತ್ತಿದಾನಿ ವಿಶ್ವನಾಥ ಕೊಂಗಿ ಹೇಳಿದರು.
ಪಟ್ಟಣದ ಕಸಾಪ ಕಚೇರಿಯಲ್ಲಿ ಆಯೋಜಿಸಿದ್ದ ದತ್ತಿದಾನಿಗಳಿಗೆ ಸನ್ಮಾನ ಹಾಗೂ ದೇವರ ದಾಸಿಮಯ್ಯ ಅವರ ವಚನ ಸಾಹಿತ್ಯ ಕುರಿತು ದತ್ತಿಗಾಗಿ 25ಸಾವಿರ ರೂ. ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.
ಶರಣರು, ದಾಸರು, ಸಂತರು ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡಿದ್ದಾರೆ. ಅವರು ತೋರಿದ ಸನ್ಮಾರ್ಗದಲ್ಲಿ ಎಲ್ಲರೂ ಮುನ್ನಡೆದರೆ ಆದರ್ಶ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಕನ್ನಡ ಸಾಹಿತ್ಯ ಪರಿಷತ್ ಯುವಜನತೆಯತ್ತ ಸಾಹಿತ್ಯ ಕೃಷಿ ಕೊಂಡೊಯ್ಯುತ್ತಿರುವುದು ಉತ್ತಮ ಕೆಲಸ. ವಚನ, ದಾಸ ಸಾಹಿತ್ಯದ ಬಗ್ಗೆ ಹೆಚ್ಚೆಚ್ಚು ಗೋಷ್ಠಿ ನಡೆಯಬೇಕು. ದತ್ತಿದಾನಿಗಳಿಂದ ಕಸಾಪಗೆ ಶಕ್ತಿ ಬಂದಿದ್ದು ವಿಚಾರ ಪ್ರಚಾರ ಮಾಡುತ್ತಿದೆ ಎಂದರು. ಸಾವಿತ್ರಮ್ಮ ಶರಬಣ್ಣ ಕೊಂಗಿ ಸ್ಮರಣಾರ್ಥ ದೇವರ ದಾಸಿಮಯ್ಯರ ದತ್ತಿಗಾಗಿ 25ಸಾವಿರ ರೂ. ಚೆಕ್‌ಅನ್ನು ನೀಡಲಾಯಿತು.
ಪ್ರಮುಖರಾದ ಮಲ್ಲೇಶ, ಪ್ರಕಾಶ ನೀಲಿ, ಬಸವರಾಜ ಅಕ್ಕರಕಿ, ಶಿವಾಜ, ಲಕ್ಷ್ಮಿಕಾಂತ ದಾಸರ, ಭೋಜಪ್ಪ ಮಿಣಜಿಗಿ, ನಾಗರಾಜ ಅಕ್ಕಿಕಲ್, ಆಕಾಶ ಇತರರಿದ್ದರು.