ನಿಮ್ಮ ಪತ್ನಿ ಕೋಪವನ್ನೆಲ್ಲ ನನ್ನ ಮೇಲೆ ತೀರಿಸಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಶಾಂತಿ ನೆಲೆಸಿರಬೇಕಲ್ಲವೇ ಎಂದು ಕಿಲಾಡಿಯ ಕಾಲೆಳೆದ ಪ್ರಧಾನಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಜತೆಗೆ ರಾಜಕೀಯಕ್ಕೆ ಹೊರತಾದ, ತಮ್ಮ ವೈಯಕ್ತಿಕ ಜೀವನದ ಕೆಲ ಸಂಗತಿಗಳನ್ನು ಹಂಚಿಕೊಂಡರು. ಸಂದರ್ಶನ ಚುರುಕಾಗಿ ಸಾಗಿರುವಂತೆ ಅಕ್ಷಯ್​ಕುಮಾರ್ ಪತ್ನಿ ಟ್ವಿಂಕಲ್​ ಖನ್ನಾ ಅವರ ಹೆಸರನ್ನೂ ಪ್ರಸ್ತಾಪಿಸಿದ್ದಾರೆ.

ಮೋದಿಯವರು ತಮ್ಮ ಕುರಿತು ಆಡಿರುವ ಮಾತಿಗೆ ಟ್ವಿಂಕಲ್​ ಖನ್ನಾ ಟ್ವೀಟ್​ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಮಾತಿನ ಮಧ್ಯೆ ನರೇಂದ್ರ ಮೋದಿಯವರು, ನಾನು ನಿಮ್ಮನ್ನು ಹಾಗೂ ನಿಮ್ಮ ಪತ್ನಿಯನ್ನೂ ಟ್ವಿಟರ್​ನಲ್ಲಿ ಫಾಲೋ ಮಾಡುತ್ತೇನೆ. ಟ್ವಿಂಕಲ್​ ಅವರು ನನ್ನನ್ನು ಗುರಿಯಾಗಿಸಿಕೊಂಡು ಮಾಡುವ ಟ್ವೀಟ್​ಗಳನ್ನೂ ಓದುತ್ತೇನೆ ಎಂದು ಹೇಳಿದ್ದಾರೆ. ಆದರೆ ಅಷ್ಟಕ್ಕೆ ಸುಮ್ಮನಿರದ ಪ್ರಧಾನಿ ಮೋದಿ, ಟ್ವಿಂಕಲ್​ ಖನ್ನಾ ತಮ್ಮ ಸಿಟ್ಟನ್ನೆಲ್ಲ ನನ್ನ ಬಗ್ಗೆ ಟ್ವೀಟ್​ ಮಾಡಿಯೇ ತೀರಿಸಿಕೊಳ್ಳುತ್ತಾರೆ. ಹಾಗಾಗಿ ನೀವು ಆರಾಮವಾಗಿ ಇರಬಹುದುಲ್ಲವೇ? ನಿಮ್ಮ ಕೌಟುಂಬಿಕ ಜೀವನ ಬಹುಶ್ಯಃ ಶಾಂತಿಯುತವಾಗಿರಬೇಕಲ್ಲವೇ ಎಂದು ಹಾಸ್ಯಭರಿತವಾಗಿ ಅಕ್ಷಯ್​ ಕುಮಾರ್​ ಅವರನ್ನು ಪ್ರಶ್ನಿಸಿದ್ದಾರೆ.

ಮೋದಿಯವರ ಈ ಮಾತುಗಳಿಗೆ ಟ್ವಿಂಕಲ್​ ಖನ್ನಾ ಕೂಡಲೇ ಪ್ರತಿಕ್ರಿಯಿಸಿದ್ದು, ನಾನು ಇದನ್ನು ಧನಾತ್ಮಕವಾಗಿ ಪರಿಗಣಿಸುತ್ತೇನೆ. ನನ್ನ ಇರುವಿಕೆ ಬಗ್ಗೆ ಪ್ರಧಾನಿಯವರಿಗೆ ಗೊತ್ತು ಎಂಬುದಷ್ಟೇ ಖುಷಿಕೊಡುವ ವಿಚಾರವಲ್ಲ, ಅವರು ನನ್ನ ಬರಹಗಳನ್ನಜು ಓದುತ್ತಾರೆ, ನಾನೇನು ಹೇಳುತ್ತಿದ್ದೇನೆ ಎಂಬುದರ ಬಗ್ಗೆ ಅವರಿಗೆ ಅರಿವು ಇದೆ ಎಂದು ಹೇಳಿದ್ದಾರೆ.

ಟ್ವಿಂಕಲ್​ ಖನ್ನಾ ಹಲವು ಪುಸ್ತಕಗಳನ್ನೂ ಬರೆದಿದ್ದಾರೆ. ಅಲ್ಲದೆ ಹಾಸ್ಯಭರಿತವಾಗಿಯೇ ಟಾಂಗ್​ ಕೊಡುವ ಟ್ವೀಟ್​ಗಳನ್ನು ಮಾಡುವುದರಲ್ಲಿ ಹೆಸರು ಮಾಡಿದವರು.