ಪ್ಲಾಸ್ಟಿಕ್ ಸರ್ಜರಿಗೆ ಮುಂದಾಗಿದ್ದ ನೀರವ್!

ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ 14 ಸಾವಿರ ಕೋಟಿ ರೂ. ವಂಚಿಸಿ ಕಳೆದ 15 ತಿಂಗಳಿನಿಂದ ತಲೆಮರೆಸಿ ಕೊಂಡಿದ್ದ ಉದ್ಯಮಿ ನೀರವ್ ಮೋದಿ ಬುಧವಾರ ಲಂಡನ್​ನಲ್ಲಿ ಬಂಧನಕ್ಕೊಳಗಾಗುವ ಮುನ್ನ ಕಾನೂನಿಂದ ತಪ್ಪಿಸಿಕೊಳ್ಳಲು ಹಲವು ಯತ್ನಗಳನ್ನು ನಡೆಸಿದ್ದರು ಎಂಬುದು ಬೆಳಕಿಗೆ ಬಂದಿದೆ.

ಆಸ್ಟ್ರೇಲಿಯಾದ ಪೂರ್ವ ಭಾಗಕ್ಕೆ 1,750 ಕಿಮೀ ದೂರದಲ್ಲಿರುವ ಸಣ್ಣ ದ್ವೀಪರಾಷ್ಟ್ರ ವನಾಟುದ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಿದ್ದರು. ಸಿಂಗಾಪುರದಲ್ಲಿ ಶಾಶ್ವತ ನಿವಾಸಕ್ಕೆ ಮನವಿ ಮಾಡಿದ್ದ. ಬೇರೆ ರಾಷ್ಟ್ರದಲ್ಲಿ ಸುರಕ್ಷಿತ ನಿವಾಸಕ್ಕೆ ವ್ಯವಸ್ಥೆ ಮಾಡಬೇಕೆಂದು ಕೋರಿ ಬ್ರಿಟನ್​ನ ಪ್ರಖ್ಯಾತ ಕಾನೂನು ಸಂಸ್ಥೆಯೊಂದಕ್ಕೆ ಭೇಟಿ ನೀಡಿದ್ದರು. ತನ್ನ ಗುರುತನ್ನು ಮರೆಮಾಚುವ ಉದ್ದೇಶದಿಂದ ಪ್ಲಾಸ್ಟಿಕ್ ಸರ್ಜರಿ ಮಾಡಿಕೊಳ್ಳುವ ಬಗ್ಗೆಯೂ ಚಿಂತನೆ ನಡೆಸಿದ್ದ ಎನ್ನಲಾಗಿದೆ. ಆದರೆ ಪ್ರಯತ್ನಗಳು ಸಾಕಾರವಾಗುವ ಮೊದಲೇ ಲಂಡನ್ ಪೊಲೀಸರ ಅತಿಥಿಯಾಗಿದ್ದಾರೆ.

ಭಾರತೀಯ ತನಿಖಾ ಸಂಸ್ಥೆಗಳು ನೀರವ್ ಚಟುವಟಿಕೆ ಮೇಲೆ ನಿಗಾ ಇರಿಸಿದ್ದವು. ಆತ ಇತ್ತೀಚೆಗೆ ಯುರೋಪ್ ಮತ್ತು ಯುಎಇಗೆ ತೆರಳಿ ಹಣಕಾಸು ವರ್ಗಾವಣೆ ಮತ್ತು ಸಭೆ ನಡೆದಿದ್ದ ಬಗ್ಗೆ ಮಾಹಿತಿ ಕಲೆ ಹಾಕಿತ್ತು ಎನ್ನಲಾಗಿದೆ.

ಸ್ಪೆಷಲ್ ಸೆಲ್: ನೀರವ್ ಮೋದಿ ಪ್ರಕರಣದ ಮುಂದಿನ ವಿಚಾರಣೆ ಮಾ.29ಕ್ಕೆ ಇರಲಿದ್ದು, ಅಲ್ಲಿಯವರೆಗೆ ಆತ ವಾಂಡ್ಸ್​ವರ್ತ್​ನ ಹರ್ ಮೆಜೆಸ್ಟೀಸ್ ಪ್ರಿಸನ್(ಎಚ್​ಎಂಪಿ) ನಲ್ಲಿ ಇರಲಿದ್ದಾರೆ. ಲಂಡನ್​ನ ಅತಿಹೆಚ್ಚು ಕೈದಿಗಳನ್ನು ಹೊಂದಿರುವ ಜೈಲು ಎನ್ನುವ ಕುಖ್ಯಾತಿ ಇದರದ್ದು. ಇಲ್ಲಿ ವಿಶೇಷ ಸೆಲ್ ವ್ಯವಸ್ಥೆ ಮಾಡಲಾಗಿದೆಯಾದರೂ ಜೈಲಿನಲ್ಲಿ ಕೈದಿಗಳ ಸಂಖ್ಯೆ ಹೆಚ್ಚಿರುವು ದರಿಂದ ಇನ್ನೊಬ್ಬ ಕೈದಿ ಜತೆ ಸೆಲ್ ಹಂಚಿ ಕೊಳ್ಳುವುದು ಅನಿವಾರ್ಯವಾಗಿದೆ. ಮೂಲಗಳ ಪ್ರಕಾರ ನೀರವ್ ಜತೆ ದಾವೂದ್​ನ ಆಪ್ತ, ಪಾಕಿಸ್ತಾನ ಮೂಲದ ಜಾಬಿರ್ ಮೋತಿ ಇರಲಿದ್ದಾನೆ. ಈತನನ್ನು ಅಮೆರಿಕಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

ಮೂರು ಪಾಸ್​ಪೋರ್ಟ್

ನೀರವ್ ಮೋದಿ ವಿಚಾರಣೆ ಸಂದರ್ಭದಲ್ಲಿ ಮೂರು ಪಾಸ್​ಪೋರ್ಟ್​ಗಳು ಮತ್ತು ಹಲವು ರೆಸಿಡೆನ್ಸಿ ಕಾರ್ಡ್ ಗಳಿರುವುದು ಪತ್ತೆಯಾಗಿದೆ. ಒಂದು ಪಾಸ್​ಪೋರ್ಟ್ ಮೆಟ್ರೋಪಾಲಿಟನ್ ಪೊಲೀಸರ ವಶದಲ್ಲಿದ್ದರೆ, ಇನ್ನೊಂದು ಅವಧಿ ಮೀರಿದ ಪಾಸ್​ಪೋರ್ಟ್ ಬ್ರಿಟನ್​ನ ಗೃಹ ಕಚೇರಿಯಲ್ಲಿ ಮತ್ತು ಮೂರನೇ ಪಾಸ್​ಪೋರ್ಟ್ ಬ್ರಿಟನ್​ನ ಡ್ರೖೆವಿಂಗ್ ಮತ್ತು ವೆಹಿಕಲ್ ಲೈಸೆನ್ಸಿಂಗ್ ಅಥಾರಿಟಿ ಬಳಿಯಲ್ಲಿದೆ. ಹಲವು ರೆಸಿಡೆನ್ಸಿ ಕಾರ್ಡ್​ಗಳ ಕಾಲಾವಧಿ ಮುಗಿದಿದೆ. ಯುಎಇ, ಸಿಂಗಾಪುರ ಮತ್ತು ಹಾಂಕಾಂಗ್​ನ ರೆಸಿಡೆನ್ಸಿ ಕಾರ್ಡ್ ನೀರವ್ ಬಳಿ ಪತ್ತೆಯಾಗಿದೆ.