More

    ಜೀವ ಮಣ್ಣಿಗೆ ಜೀವನ ಕೃಷಿಗೆ

    ಬೆಂಗಳೂರು: ಹಳ್ಳಿ ಹಾಗೂ ಕೃಷಿಯನ್ನೇ ಪ್ರಧಾನವಾಗಿಟ್ಟುಕೊಂಡು ಈ ಹಿಂದೆ ಅನೇಕ ಸಿನಿಮಾಗಳು ಮೂಡಿಬಂದಿವೆಯಾದರೂ, ‘ರಾಜೀವ’ ಅವುಗಳೆಲ್ಲದ್ದಕ್ಕಿಂತ ಸ್ವಲ್ಪ ವಿಭಿನ್ನ ಎನಿಸಿಕೊಳ್ಳುತ್ತದೆ. ಏಕೆಂದರೆ ಇಲ್ಲಿ ಹಳ್ಳಿಯ ಅಭಿವೃದ್ಧಿ, ಯುವಪೀಳಿಗೆ ಮತ್ತೆ ಕೃಷಿಯತ್ತ ಮರಳಬೇಕು ಎಂಬ ಕುರಿತು ಹೇಳುತ್ತಲೇ ಪ್ರಸಕ್ತ ರಾಜಕೀಯ ಪರಿಸ್ಥಿತಿ ಮೇಲೂ ಬೆಳಕು ಚೆಲ್ಲಲಾಗಿದೆ. ರಾಜಕೀಯ ಹಾಗೂ ದುರಾಸೆ ಹೇಗೆ ಸಮಾಜ ಹಾಗೂ ಸಂಬಂಧಗಳನ್ನು ಕೆಡಿಸುತ್ತದೆ ಎಂಬುದನ್ನೂ ತೋರಿಸಲಾಗಿದೆ.

    ಆ ನಿಟ್ಟಿನಲ್ಲಿ ರಾಜೀವ ಇಲ್ಲಿ ರಾರಾಜಿಸುತ್ತಾನೆ. ರಾಜೀವ (ಮಯೂರ್ ಪಟೇಲ್) ಒಬ್ಬ ವಿದ್ಯಾವಂತ. ತಂದೆಯ ಆಸೆಯಂತೆ ಹಳ್ಳಿಗೆ ಮರಳಿ ಕೃಷಿಕನಾಗಿ, ಬರದಂತಹ ಸಮಸ್ಯೆ ನಡುವೆಯೂ ಬೆಳೆ ಬೆಳೆಯುವ ವಿಭಿನ್ನ ಪ್ರಯೋಗಗಳ ಮೂಲಕ ಉಳಿದ ರೈತರಷ್ಟೇ ಅಲ್ಲದೆ ಇಡೀ ಹಳ್ಳಿಯ ಜತೆಗೆ ಸರ್ಕಾರದ ಗಮನವನ್ನೂ ಸೆಳೆಯುತ್ತಾನೆ. ಆ ಸಾಮಾಜಿಕ ಕಳಕಳಿ, ಕೃಷಿಪ್ರೀತಿಯಿಂದ ಆತ ನಿವಾರಿಸಿದ ಸಮಸ್ಯೆ, ಕೈಗೊಂಡ ಪರಿಹಾರ-ಅಭಿವೃದ್ಧಿಗೆ ಮಾರುಹೋಗಿ ಖುದ್ದು ಮುಖ್ಯಮಂತ್ರಿಯೇ ಅವರ ಹಳ್ಳಿಗೆ ಆಗಮಿಸುತ್ತಾರೆ. ಮಾತ್ರವಲ್ಲ ಆತನ ಮೂವರು ಸೋದರರಲ್ಲಿ ಒಬ್ಬನಿಗೆ ಚುನಾವಣೆಗೆ ನಿಲ್ಲಲು ಟಿಕೆಟ್, ಇನ್ನೊಬ್ಬನನ್ನು ಆ ಊರಿನ ಜಿಲ್ಲಾಧಿಕಾರಿ, ಮತ್ತೊಬ್ಬನಿಗೆ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಆಗಿ ನೇಮಿಸುತ್ತಾರೆ. ಚುನಾವಣೆಗೆ ನಿಂತ ಸೋದರ ಶಾಸಕನಾದ ಮೇಲೆ ರಾಜಕೀಯ ಹೇಗೆ ಆತನ ದಾರಿ ತಪ್ಪಿಸುತ್ತದೆ, ಬಂಡವಾಳ ಶಾಹಿಗಳು ಅವನನ್ನು ಹೇಗೆ ಬಳಸಿಕೊಳ್ಳುತ್ತಾರೆ, ಅತಿಯಾಸೆ ಹಾಗೂ ರಾಜಕೀಯ ಹೇಗೆ ಅಣ್ಣ-ತಮ್ಮಂದಿರ ಮಧ್ಯೆ ಮನಸ್ತಾಪ ಉಂಟುಮಾಡಿಸುತ್ತದೆ ಎಂಬುದನ್ನು ನಿರ್ದೇಶಕ ಫ್ಲೈಯಿಂಗ್ ಕಿಂಗ್ ಮಂಜು ಪರದೆ ಮೇಲೆ ಅಚ್ಚುಕಟ್ಟಾಗಿ ತೋರಿಸಲು ಪ್ರಯತ್ನಿಸಿದ್ದಾರೆ.

    ಎಲ್ಲ ಸಮಸ್ಯೆಗಳನ್ನು ರಾಜೀವ ಹೇಗೆ ಎದುರಿಸುತ್ತಾನೆ, ಸಹೋದರರು ಮತ್ತೆ ಬದಲಾಗುತ್ತಾರಾ? ಎಂಬುದನ್ನೆಲ್ಲ ಪರದೆ ಮೇಲೇ ನೋಡಬೇಕು. ಇಲ್ಲಿ ಪ್ರೀತಿ-ಪ್ರೇಮದ ಕಥಾನಕ ಇದ್ದರೂ ಅದೇ ಪ್ರಧಾನವಾಗಿ ಇರದ್ದರಿಂದ ಹೀರೋಯಿನ್ ಅಕ್ಷತಾ ಪಾತ್ರಕ್ಕೆ ಅಂತ ಸ್ಕೋಪ್ ಇಲ್ಲ. ರಾಜೀವನಾಗಿ ಮಯೂರ್ ಕೆಲವು ವರ್ಷಗಳ ಬಳಿಕ ಕಂಬ್ಯಾಕ್ ಮಾಡಿದ್ದು, ಎರಡು ಶೇಡ್​ನಲ್ಲಿ ಕಾಣಿಸಿಕೊಳ್ಳುತ್ತಾರೆ. ಚಾರ್ವಿುಂಗ್ ಆಗಿಯೇ ಕಾಣಿಸಿಕೊಂಡರೂ ಕೆಲವು ದೃಶ್ಯಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕಾಣಿಸಿಕೊಳ್ಳಲು ಅವಕಾಶವಿತ್ತು. ಅವರ ತಂದೆ ಮದನ್ ಪಟೇಲ್ ಇಲ್ಲಿ ಮುಖ್ಯಮಂತ್ರಿ ಆಗಿ ಕಾಣಿಸಿಕೊಳ್ಳುವ ಮೂಲಕ ಪರದೆ ಮೇಲೂ ಖಾದಿ ಖದರ್ ತೋರಿದ್ದಾರೆ. ಕೆಲವೊಂದು ಹಾಡುಗಳು ಅಗತ್ಯವಿರಲಿಲ್ಲ. ರ್ತಾಕವಾಗಿ ಇನ್ನು ಕೆಲವು ಅಂಶಗಳು ಅಸಹಜ ಎನಿಸಿದರೂ ಒಟ್ಟಾರೆ ಉದ್ದೇಶ ಹಿತವೆನಿಸುತ್ತದೆ. ‘ಜೀವ ಮಣ್ಣಿಗೆ, ಜೀವನ ಕೃಷಿಗೆ’ ಎನ್ನುವ ‘ರಾಜೀವ’ ಒಂದಷ್ಟು ವಾಸ್ತವಾಂಶಗಳ ಮೇಲೆ ಬೆಳಕು ಚೆಲ್ಲುವುದರಿಂದ ಮನಮುಟ್ಟುತ್ತಾನೆ.

    ಚಿತ್ರ: ರಾಜೀವ ನಿರ್ದೇಶನ: ಫ್ಲೈಯಿಂಗ್ ಕಿಂಗ್ ಮಂಜು ನಿರ್ವಣ: ಕೆ.ಕಿರಣ್, ಬಿ.ಎಂ.ರಮೇಶ್ ಪಾತ್ರವರ್ಗ: ಮಯೂರ್ ಪಟೇಲ್, ಅಕ್ಷತಾ ಶ್ರೀಧರ್ ಶಾಸ್ತ್ರಿ, ಶಂಕರ್ ಅಶ್ವತ್ಥ್, ಮದನ್ ಪಟೇಲ್ ಮತ್ತಿತರರು.

    ರವಿಕಾಂತ ಕುಂದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts