ಕೆಎಲ್‌ಇಯಿಂದ ಹೋಟೆಲ್ ಮ್ಯಾನೇಜಮೆಂಟ್ ತರಬೇತಿ

ಚಿಕ್ಕೋಡಿ: ಕೆಎಲ್‌ಇ ಸಂಸ್ಥೆಯ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ವಿಶ್ವವಿದ್ಯಾಲಯ) ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಹೋಟೆಲ್ ನಿರ್ವಹಣೆ ಮತ್ತು ಅಡುಗೆ ತಂತ್ರಜ್ಞಾನ ಸಂಸ್ಥೆ ಆರಂಭಿಸಲಿದೆ ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದ್ದಾರೆ.

ಇಲ್ಲಿನ ಕೆಎಲ್‌ಇ ಆಸ್ಪತ್ರೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ,ಕೆಎಲ್‌ಇ ಸಂಸ್ಥೆಯು ಹೊಸ ಚಿಂತನೆಯೊಂದಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದೆ.ಉತ್ತರ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಹೋಟೆಲ್ ನಿರ್ವಹಣೆ ಮತ್ತು ಅಡುಗೆ ತಂತ್ರಜ್ಞಾನ ಸಂಸ್ಥೆಯನ್ನು ಬೆಳಗಾವಿಯಲ್ಲಿ ಆರಂಭಿಸಲಾಗುತ್ತಿದೆ ಎಂದರು. ಮೂರು ವರ್ಷ ಅವಧಿಯ ಈ ತರಬೇತಿ ಪಡೆಯಲು ಪಿಯುಸಿ ಶಿಕ್ಷಣ ಸಾಕು. ಪ್ರತಿಶತ ಅಂಕ ಇಂತಿಷ್ಟೇ ಇರಬೇಕು ಎಂಬ ಮಿತಿ ಇಲ್ಲ ಎಂದು ಹೇಳಿದರು. ಈ ಹೊಸ ಕೋರ್ಸ್‌ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

25 ರಂದು ಕೆ.ಎಲ್.ಇ 9ನೇ ಘಟಿಕೋತ್ಸವ

ಕೆಎಲ್‌ಇ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವ ಏಪ್ರಿಲ್ 25ರಂದು ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಸಭಾಗೃಹದಲ್ಲಿ ನಡೆಯಲಿದೆ ಎಂದು ಡಾ.ಪ್ರಭಾಕರ ಕೋರೆ ತಿಳಿಸಿದರು.

ಘಟಿಕೋತ್ಸವ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ರಾಜ್ಯಪಾಲ ವಜೂಭಾಯ್ ವಾಲಾ ಪಾಲ್ಗೊಳ್ಳಲಿದ್ದಾರೆ. ಪ್ರಸಕ್ತ ಸಾಲಿನಲ್ಲಿ 900 ವಿದ್ಯಾರ್ಥಿಗಳು ಕೆ ಎಲ್ ಇ ಸಂಸ್ಥೆಯಿಂದ ಪದವಿ ಪಡೆದು ಹೊರ ಹೋಗುತ್ತಿದ್ದು ಅದರಲ್ಲಿ 24 ವಿದ್ಯಾರ್ಥಿಗಳಿಗೆ ಚಿನ್ನದ ಪದಕ,10 ವಿದ್ಯಾರ್ಥಿಗಳಿಗೆ ಪಿ.ಹೆಚ್.ಡಿ., 10 ವಿದ್ಯಾರ್ಥಿಗಳಿಗೆ ಸೂಪರ್ ಸ್ಪೇಷಾಲಿಟಿ ಪದವಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕೆಎಲ್‌ಇ ನಿರ್ದೇಶಕ ಮಹಾಂತೇಶ ಕವಟಗಿಮಠ ಹಾಗೂ ಸಿಎಲ್‌ಇ ಸಂಸ್ಥೆಯ ಕಾರ್ಯದರ್ಶಿ ಜಗದೀಶ ಕವಟಗಿಮಠ ಇದ್ದರು.