ಸಂಡೂರು: ಬಿ.ಎಸ್.ಯಡಿಯೂರಪ್ಪ ಸೈಕಲ್ ಹಾಗೂ ಸೀರೆ ಕೊಟ್ಟಿದ್ದರೆ ಕಾಂಗ್ರೆಸ್ ಪಂಚ ಗ್ಯಾರಂಟಿ ಯೋಜನೆ ನೀಡಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿದರು.

ತೋರಣಗಲ್‌ನಲ್ಲಿ ಬಹಿರಂಗ ಸಭೆಯಲ್ಲಿ ಮಂಗಳವಾರ ಸಂಜೆ ಮಾತನಾಡಿದರು. ಬಿಜೆಪಿ ನಾಯಕರು ಸುಳ್ಳು ಹೇಳಲು ಬರುತ್ತಿದ್ದು, ಅವರಿಂದ ಹಣ ಪಡೆದು ಕಾಂಗ್ರೆಸ ಅಭ್ಯರ್ಥಿ ಅನ್ನಪೂರ್ಣ ತುಕಾರಾಮ್‌ಗೆ ಮತ ಹಾಕಿ ಎಂದು ಕೋರಿದರು. ಸಂಸದ ಈ.ತುಕಾರಾಮ್ ಹಫ್ತಾ ವಸೂಲು ಮಾಡಿದ್ದಾರಾ, ಯಾರ ಮೇಲಾದರೂ ದೌರ್ಜನ್ಯ ಮಾಡಿದ್ದಾರಾ, ಪೊಲೀಸ್ ಕೇಸ್ ಹಾಕಿಸಿದ್ದಾರಾ ಎಂದು ಪ್ರಶ್ನಿಸಿದ ಡಿಸಿಎಂ ಯಾವುದೂ ಮಾಡಿಲ್ಲ ಎಂಬ ಕಾರಣಕ್ಕೆ ನೀವು ನಾಲ್ಕು ಬಾರಿ ಶಾಸಕರಾಗಿ ಆಯ್ಕೆ ಮಾಡಿದ್ದೀರಿ. ಇದೀಗ ಸಂಸದರನ್ನಾಗಿಯೂ ಆಯ್ಕೆ ಮಾಡಿದ್ದೀರಿ. ಬಿಜೆಪಿ ನಾಯಕರು ಹಫ್ತಾ ವಸೂಲಿಯೊಂದಿಗೆ ಅಕ್ರಮ ಗಣಿಗಾರಿಕೆ ಮಾಡಿದ್ದಾರೆ ಎಂದು ದೂರಿದರು.
ಸಚಿವ ಸಂತೋಷ್ ಲಾಡ್ ಮಾತನಾಡಿ, 10 ವರ್ಷದ ಆಡಳಿತಾವಧಿಯಲ್ಲಿ ಬಿಜೆಪಿ ನಾಯಕರು ಏನು ಮಾಡಿದ್ದಾರೆ ತೋರಿಸಲಿ. ಶ್ರೀರಾಮುಲು ಸಚಿವರಾಗಿದ್ದರು, ಕರುಣಾಕರ ರೆಡ್ಡಿ, ಪಕ್ಕೀರಪ್ಪ, ಶಾಂತಾ ಸಂಸದರಾಗಿದ್ದರು. ಸತೀಶ್ ಎಂಎಲ್ಸಿಯಾಗಿದ್ದು ಕ್ಷೇತ್ರಕ್ಕೆ ಅವರ ಕೊಡುಗೆ ಏನು ತೋರಿಸಲಿ ಎಂದು ಸವಾಲು ಹಾಕಿದರು. ನಮ್ಮ ಅಣ್ಣ ಅನಿಲ್ ಲಾಡ್ ಕೂಡ ನಮ್ಮನ್ನು ಬೈಯುತ್ತಿದ್ದಾರೆ. ದೇವರು ಅವರಿಗೆ ಒಳ್ಳೆದು ಮಾಡಲಿ ಎಂದರು.
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾರೆಡ್ಡಿ, ಸಚಿವರಾದ ಎನ್.ಎಸ್.ಬೋಸರಾಜು, ಶಿವರಾಜ ತಂಗಡಗಿ, ಸಂಸದರಾದ ಈ.ತುಕಾರಾಮ್, ಕುಮಾರನಾಯಕ, ಶಾಸಕ ಬಿ.ನಾಗೇಂದ್ರ, ಮಾಜಿ ಎಂಎಲ್ಸಿ ಕೆಎಸ್‌ಎಲ್ ಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ, ಅಭ್ಯರ್ಥಿ ಅನ್ನಪೂರ್ಣ ತುಕಾರಾಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಏಕಾಂಬ್ರಪ್ಪ, ಗ್ರಾಪಂ ಅಧ್ಯಕ್ಷ ಅಳ್ಳಾಪುರ ವಿರೇಶಪ್ಪ, ಪ್ರಮುಖರಾದ ನೂರ್ ಅಹ್ಮದ್, ಜಿ.ಗುರುಪಾದಪ್ಪ, ಟಿ.ಎಂ.ಮಹೇಶ್, ಮೂಲೆಮನೆ ತಿಪ್ಪೇಸ್ವಾಮಿ ಇತರರಿದ್ದರು.