More

    ಶಿಶು ಆರೈಕೆಯಿಂದ ಪದಕ ವೇದಿಕೆಗೆ; ಜಿನು ಗೋಗಯ್​ ಸಾಧನೆ

    ಗುವಾಹಟಿ: ಖೇಲೋ ಇಂಡಿಯಾ ಗೇಮ್ಸ್​ ನಲ್ಲಿ ಗೆದ್ದ ಕಂಚಿನ ಪದಕವನ್ನು ಕುತ್ತಿಗೆಯಲ್ಲಿ ಧರಿಸುವ ವೇಳೆ ಅಸ್ಸಾಂನ ಯುವ ತಾರೆ ಜಿನು ಗೋಗಯ್, ಒಂದು ಕ್ಷಣ ಮೂರು ತಿಂಗಳ ಹಿಂದೆ ಇದ್ದ ತಮ್ಮ ಜೀವನವನ್ನು ನೆನೆಸಿಕೊಂಡರು. ಆಕೆಯ ಪಾಲಿಗೆ ಈ ಮೂರು ತಿಂಗಳಲ್ಲಿಯೇ ಅದೃಷ್ಟದ ಬಾಗಿಲು ತೆರೆದಿದೆ. ಶಿಶು ಆರೈಕೆ ಮಾಡುವವಳಾಗಿದ್ದ ಜಿನು ಈಗ ಪದಕ ವಿಜೇತ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ.

    ಸೆಪ್ಟೆಂಬರ್ ವೇಳೆ, ಬಿಮಾ ಬೋರಾ ಎನ್ನುವವರ 10 ತಿಂಗಳ ಮಗುವಿನ ಆರೈಕೆಯ ಕೆಲಸವನ್ನು ಜಿನು ಮಾಡುತ್ತಿದ್ದರು. ಬಿಮಾ ಬೋರಾ ಪ್ರತಿ ಸಂಜೆ ಲಾನ್ ಬೌಲಿಂಗ್ ಅಭ್ಯಾಸ ಮಾಡುವ ವೇಳೆ ಮಗುವನ್ನು ಕರೆದುಕೊಂಡು ಹೋಗುತ್ತಿದ್ದ ಕಾರಣ ಅವರೊಂದಿಗೆ ಜಿನು ಕೂಡ ತೆರಳುತ್ತಿದ್ದರು. ‘ಅವರು ಆಡುವುದನ್ನು ನಾನು ಪ್ರತಿ ದಿನ ನೋಡುತ್ತಿದ್ದೆ. ಒಮ್ಮೆ ಸಂಕೋಚದಲ್ಲಿಯೇ ಅವರಲ್ಲಿ ನನಗೆ ಈ ಆಟವನ್ನು ಹೇಳಿ ಕೊಡುತ್ತೀರಾ ಎಂದು ಕೇಳಿದ್ದೆ’ ಎಂದು ಹೇಳಿದರು. ಅದಾದ ಮೂರು ತಿಂಗಳ ಬಳಿಕ ಖೇಲೋ ಇಂಡಿಯಾ ಯೂತ್ ಗೇಮ್ಸ್​ನಲ್ಲಿ, ಜಿನು ತಮ್ಮ ಜತೆಗಾರ್ತಿ ಕರಿನಾ ಪೊಟೊವಾರಿ ಜತೆ 21 ವಯೋಮಿತಿಯ ಲಾನ್ ಬೌಲ್ ಗ್ರೀನ್​ನ ಪೇರ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಇನ್ನು ಜಿನುಗೆ ಆಟ ಹೇಳಿಕೊಟ್ಟ ಬಿಮಾ ಬೋರಾ ಕೂಡ ತಾವೇ ಪದಕ ಗೆದ್ದ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ. ‘ನನಗೆ ಮಗಳು ಹುಟ್ಟಿದ ಬಳಿಕ, ಜಿನುರನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದೆ. ನನ್ನ ಪ್ರತಿದಿನದ ಮನೆ ಕೆಲಸಕ್ಕೆ ಆಕೆ ಸಹಾಯ ಮಾಡುತ್ತಿದ್ದಳು. ನಾನು ಇಲ್ಲದಿದ್ದಾಗ ಮಗುವನ್ನು ನೋಡಿಕೊಳ್ಳುತ್ತಿದ್ದಳು’ ಎಂದಿದ್ದಾರೆ.

    ತಂದೆಯ ಕ್ಯಾನ್ಸರ್ ಹಾಗೂ ಅದಕ್ಕೆ ತಗುಲುವ ವೆಚ್ಚದ ಕಾರಣದಿಂದಾಗಿ 10ನೇ ತರಗತಿಗೆ ಶಾಲೆಯನ್ನು ತೊರೆದ ಜಿನು, ಪದಕವನ್ನು ತನ್ನ ತಂದೆಗೆ ಅರ್ಪಿಸಿದ್ದಾರೆ. -ಪಿಟಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts