ಕಲೆಯಿಂದ ಮನುಷ್ಯ ಜಾತ್ಯತೀತ: ಜಯಂತಿ ಕಾಯ್ಕಿಣಿ

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಕಲೆಯಲ್ಲಿ ಮನುಷ್ಯ ಜಾತ್ಯತೀತನಾಗುತ್ತಾನೆ, ಅನಾಮಿಕನಾಗುತ್ತಾನೆ. ಜಾತಿ, ಧರ್ಮ, ಮತವೆಂದು ರಾಜಕಾರಣಿಗಳು ಸಮಾಜ ಹಾಳು ಮಾಡುತ್ತಿರುವಾಗ ಅದಕ್ಕೆಲ್ಲ ಕಡಿವಾಣ ಹಾಕಿ, ಸಮಾಜವನ್ನು ಮಾನವೀಯತೆ ನೆಲೆಯಲ್ಲಿ ನೋಡುವುದು ಕಲಾವಿರಿಗೆ ಮಾತ್ರ ಸಾಧ್ಯ.

-ಹೀಗೆ ಸಾಹಿತಿ ಕಲಾವಿದರ ಬಗ್ಗೆ ಬಿಚ್ಚುಮನಸ್ಸಿನ ಅಭಿಪ್ರಾಯ ವ್ಯಕ್ತಪಡಿಸಿದವರು ಸಾಹಿತಿ ಜಯಂತ ಕಾಯ್ಕಿಣಿ.

ಕುಂದಾಪುರ ಕಾರ್ಟೂನ್ ಬಳಗದವರ ಆಶ್ರಯದಲ್ಲಿ ಇಲ್ಲಿನ ಪದವಿಪೂರ್ವ ಕಾಲೇಜು ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ನಾಲ್ಕು ದಿನ ನಡೆಯುವ ಕಾರ್ಟೂನ್ ಹಬ್ಬವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಲೇಖಕರು ಮುಂಬೈಯಲ್ಲಿ ಕನ್ನಡದ ಆವರಣ ಕಟ್ಟಿದ್ದು, ಸತೀಶ್ ಆಚಾರ್ಯ ಕೂಡ ಮುಂಬೈಯಿಂದ ಬಂದು ಕುಂದಾಪುರದಲ್ಲಿ ಗೆರೆಗಳ ಮೂಲಕ ನಗಿಸುವ, ತಿದ್ದುವ ಕೆಲಸ ಮಾಡುತ್ತಿದ್ದಾರೆ ಎಂದರು.

ಫೋಟೋ ಪತ್ರಕರ್ತ ಯಜ್ಞ ಮಂಗಳೂರು, ಪತ್ರಕರ್ತರಾದ ಶ್ರೀನಿವಾಸ ಜೋಕಟ್ಟೆ, ದಯಾಸಾಗರ್ ಚೌಟ, ಯು.ಕೆ.ಕುಮಾರನಾಥ್ ಮಾತನಾಡಿದರು. ಕ್ರೀಡಾ ಫೋಟೋ ಪತ್ರಕರ್ತ ಸುರೇಶ್ ಕೆ.ಕರ್ಕೇರ ಅವರನ್ನು ಸನ್ಮಾನಿಸಲಾಯಿತು. ಕುಂದಾಪುರ ಪ್ರಕಾಶ್ ಶೇಟ್, ಜಯಂತ ಕಾಯ್ಕಿಣಿ ಅವರಿಗೆ ಸಂಗೀತ ನಮನ ಸಲ್ಲಿಸಿದರು.
ಕಾರ್ಟೂನ್ ಹಬ್ಬ ಆಯೋಜಕ ಸತೀಶ್ ಆಚಾರ್ಯ ಸ್ವಾಗತಿಸಿ, ಹವ್ಯಾಸಿ ಕಾರ್ಟೂನಿಸ್ಟ್ ರಾಮಕೃಷ್ಣ ಹೇರ್ಳೆ ನಿರೂಪಿಸಿದರು. ಗಿರಿಧರ ಕಾರ್ಕಳ ಅತಿಥಿಗಳನ್ನು ಪರಿಚಯಿಸಿದರು.

ಗಿರಿಧರ ಕಾರ್ಕಳ, ಅವಿನಾಶ್ ಕಾಮತ್, ಸೋಮಶೇಖರ ಪಡುಕೆರೆ, ಶೇಖರ ಅಜೆಕಾರು, ಧನಂಜಯ ಗುರುಪುರ, ಕೇಶವ ಸಸಿಹಿತ್ಲು, ಸತೀಶ್ ಆಚಾರ್ಯ ಹಾಗೂ ಇನ್ನಿತರ ಕಲಾವಿದರ ಜತೆ ಅನೌಪಚಾರಿಕ ಸಮ್ಮಿಲನ ನಡೆಯಿತು.

ಗೆರೆಗಳ ಮೂಲಕ ಚಾಟಿ ಬೀಸುವ ರಾವ್ ಬೈಲ್: ದೊಡ್ಡ ದೊಡ್ಡ ಸ್ಥಾನಕ್ಕೆ ಏರಿದವರು ಅನಾಮಿಕರಾಗಿದ್ದವರು. ಅಧ್ಯಾತ್ಮ ಕೂಡ ಅನಾಮಿಕತೆ ಹೇಳುತ್ತಿದೆ. ಅನಾಮಿಕರಾಗಿದ್ದು ಎತ್ತರಕ್ಕೆ ಏರಿದವರಲ್ಲಿ ರಾವ್ ಬೈಲ್ ಒಬ್ಬರು. ನಾನು ಸರಳವಾಗಿ ಬದುಕುತ್ತೇನೆ ಎಂಬುದು ಅಧ್ಯಾತ್ಮವಾಗಿದ್ದು, ಹಾಗೆ ಬದುಕಿದರು. ಗೆರೆಗಳ ಮೂಲಕ ಚಾಟಿ ಬೀಸುವ, ಸಂದೇಶ ನೀಡುವ, ತಿದ್ದುವ ಕೆಲಸ ಮಾಡುವುದರಲ್ಲಿ ರಾವ್ ಬೈಲ್ ಮೊದಲಿಗರು ಎಂದು ಜಯಂತ್ ಕಾಯ್ಕಿಣಿ ಬಣ್ಣಿಸಿದರು.