ಬೆಳಗಾವಿ: ಸ್ನೇಹಿತನ ಮೇಲಿನ ಸೇಡಿಗೆ ದೇಶದ್ರೋಹದ ಪೋಸ್ಟ್

ಬೆಳಗಾವಿ :  ತನ್ನ ಆರ್ಥಿಕ ಅಡಚಣೆಗೆ ಗೆಳೆಯ ಹಣ ಸಹಾಯ ಮಾಡಲಿಲ್ಲ ಎಂಬ ಕಾರಣಕ್ಕೆ ದ್ವೇಷ ಸಾಧಿಸಿ ಆತನ ಫೇಸ್‌ಬುಕ್ ಖಾತೆಯಿಂದ ಪಾಕಿಸ್ತಾನಕ್ಕೆ ಜೈಕಾರ ಹಾಕುವ ಮೂಲಕ ದೇಶದ್ರೋಹದ ಚಟುವಟಿಕೆಗೆ ಮುಂದಾದ ಆರೋಪಿಯನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ ರೆಡ್ಡಿ ಈ ಬಗ್ಗೆ ಸೋಮವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ವೈಯಕ್ತಿಯ ದ್ವೇಷವಿಟ್ಟುಕೊಂಡು ರಾಮದುರ್ಗದ ಶಫಿ ಬೆಣ್ಣಿ ಅವರ ಫೇಸ್‌ಬುಕ್ ಖಾತೆಗೆ ಆತನ ಸ್ನೇಹಿತ, ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ ನಾಗರಾಜ ಮಾಳಿ ದೇಶದ್ರೋಹದ ಪೋಸ್ಟ್ ಮಾಡಿದ್ದು ವಿಚಾರಣೆ ವೇಳೆ ಬಯಲಾಗಿದೆ. ಈ ಬಗ್ಗೆ ಸ್ವತಃ ಮಹ್ಮದ್‌ಶಫಿ ಬೆಣ್ಣಿ ಮಾರ್ಚ್ 1ರಂದು ರಾಮದುರ್ಗ ಠಾಣೆಯಲ್ಲಿ ದೂರು ದಾಖಲಿಸಿದ್ದರು. 124ಎ, 153ಎ ಮತ್ತು 153ಬಿ ಸೆಕ್ಷನ್ ಅಡಿ ದೇಶದ್ರೋಹ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು, ಇದೀಗ ಸದ್ಯ 66ಸಿ ಹಾಗೂ 66 ಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮತ್ತೊಂದು ಐಟಿ ಪ್ರಕರಣವನ್ನು ಈತನ ಮೇಲೆ ದಾಖಲಿಸಲಾಗುವುದು ಎಂದು ತಿಳಿಸಿದರು.

ಬಂಧಿತ ಆರೋಪಿ ನಾಗರಾಜ ಹಾಗೂ ಶಫಿ ಒಳ್ಳೆಯ ಸ್ನೇಹಿತರಾಗಿದ್ದರು. ಆರ್ಥಿಕವಾಗಿ ಹಿಂದುಳಿದಿದ್ದ ಆರೋಪಿ ನಾಗರಾಜನು ಶಫಿ ಬಳಿ ಸಹಾಯ ಮಾಡುವಂತೆ ಕೇಳಿದ್ದಾನೆ. ಕೆಲವು ಬಾರಿ ಸಹಾಯ ಮಾಡಿದ ಶಫಿ ನಂತರ ಕಡೆಗಣಿಸಿದ ಹಿನ್ನೆಲೆಯಲ್ಲಿ ಶಫಿ ಫೇಸ್‌ಬುಕ್ ಪಾಸ್‌ವರ್ಡ್ ತಿಳಿದಿದ್ದ ನಾಗರಾಜ್ ದೇಶದ್ರೋಹ ಪೋಸ್ಟ್ ಹಾಕಿದ್ದಾನೆ ಎಂದರು.

ಏಳೆಂಟು ವರ್ಷಗಳಿಂದ ಉತ್ತಮ ಸಂಬಂಧವಿದ್ದ ಸಂದರ್ಭದಲ್ಲಿ ನಾಗರಾಜನೇ ತನ್ನ ನೆಟ್ ಸೆಂಟರ್‌ನಲ್ಲಿ ಗೆಳೆಯ ಶಫಿಗೆ ಫೇಸ್‌ಬುಕ್ ಅಕೌಂಟ್ ಮಾಡಿಕೊಟ್ಟಿದ್ದ. ಇದೀಗ ಅದನ್ನೇ ದುರ್ಬಳಕೆ ಮಾಡಿಕೊಂಡು ಗೆಳೆಯನ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಪ್ರಕರಣದ ತನಿಖೆ ನಡೆಸಿದ ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಹಿಂದೆ ಬಂಧಿಸಿದ್ದ ಮಹ್ಮದ್‌ಶಫಿ ಬೆಣ್ಣಿ ವಿರುದ್ಧ ಆರೋಪ ಪತ್ತೆಯಾಗದ ಹಿನ್ನೆಲೆಯಲ್ಲಿ ಆತನ ಹೇಳಿಕೆ ಪಡೆದುಕೊಂಡು ಬಿಡುಗಡೆ ಮಾಡಲಾಗಿದೆ. ಸಾಮಾಜಿಕ ಜಾಲತಾಣ ಬಳಸುವರು ಸತ್ಯಾಸತ್ಯತೆ ಅರಿತು ವಿಷಯಗಳನ್ನು ಪೋಸ್ಟ್ ಮಾಡಬೇಕು. ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ವಿವಾದಾತ್ಮಕವಾಗಿ ಮೆಸೇಜ್ ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.