ಸಲಿಂಗಿ ಗೆಳೆಯನಿಗೆ ಬ್ಲ್ಯಾಕ್​ಮೇಲ್​ ಮಾಡಿದ ಆಪ್​ ನಾಯಕನಿಗೆ ಏನಾಯ್ತು ಗೊತ್ತಾ?

ನವದೆಹಲಿ: ವಾರದ ಹಿಂದೆ ಕಾರಿನಲ್ಲಿ ಮೃತಪಟ್ಟಿದ್ದ ಆಪ್​ ನಾಯಕನನ್ನು ತನ್ನ ಸಲಿಂಗಿ ಗೆಳೆಯನೇ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ ಮೂಲದ 44 ವರ್ಷದ ಆಮ್​ ಆದ್ಮಿ ಪಕ್ಷದ ನಾಯಕ ನವೀನ್​ ದಾಸ್​ ಅ.5ರಂದು ಗಾಝಿಯಾಬಾದ್​ನಲ್ಲಿ ತನ್ನ ಎಸ್​ಯುವಿ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದ. ಈ ಕುರಿತು ತನಿಖೆ ನಡೆದ ನಂತರ, ನವೀನ್​ನನ್ನು ಅಪಹರಿಸಿ ಕಾರಿನಲ್ಲಿ ಸಜೀವ ದಹನ ಮಾಡಲಾಗಿದೆ ಎಂಬುದು ತಿಳಿದು ಬಂದಿದೆ. ನವೀನ್​ ದಾಸ್​ ಸಾವಿನ ಬಗ್ಗೆ ಕುಟುಂಬಸ್ಥರು ಎಫ್​ಐಆರ್​ ದಾಖಲಿಸಿದ ನಂತರ ತನಿಖೆ ನಡೆಸಿದ ಪೊಲೀಸರು ತಯ್ಯಬ್​ ಖುರೇಶಿ, ಆತನ ಸೋದರ ತಲೀಬ್​ ಖುರೇಶಿ ಮತ್ತು ಸ್ನೇಹಿತ ಸಮರ್​ ಖಾನ್​ ಎಂಬವರನ್ನು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಝಿಯಾಬಾದ್​ ಪೊಲೀಸರು ಮೂವರನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಜತೆ ಮೃತ ನವೀನ್​ ಸಲಿಂಗಿ ಸಂಬಂಧ ಹೊಂದಿದ್ದರು ಎಂಬುದು ತಿಳಿದುಬಂದಿದೆ.

ಪ್ರಕರಣ ಕುರಿತು ವಿವರಿಸಿರುವ ಎಸ್​ಎಸ್​ಪಿ ವೈಭವ್​ ಕೃಷ್ಣ, “ಮೃತ ನವೀನ್​ ಮತ್ತು ಪ್ರಮುಖ ಆರೋಪಿ ತಯ್ಯಬ್ ಸಲಿಂಗಕಾಮಿ ಸಂಬಂಧ ಹೊಂದಿದ್ದರು. ಬಾಡಿಗೆ ಮನೆಯಲ್ಲಿ ತನ್ನ ಜತೆಯೇ ಇರಬೇಕು, ಇಲ್ಲವಾದರೆ ನಮ್ಮಿಬ್ಬರ ವಿಡಿಯೋ ವೈರಲ್​ ಮಾಡುತ್ತೇನೆ ಎಂದು ನವೀನ್​ ಆರೋಪಿಗೆ ಬ್ಲ್ಯಾಕ್​ಮೇಲ್ ಮಾಡಿದ್ದಾನೆ. ನವೀನ್​ ಮಾಡಿದ ಬ್ಲ್ಯಾಕ್​ಮೇಲ್​ಗೆ ಹೆದರಿದ ಆರೋಪಿ ತನ್ನ ಸೋದರ ಮತ್ತು ಗೆಳೆಯನೊಂದಿಗೆ ಸೇರಿ, ತಂಪು ಪಾನೀಯದಲ್ಲಿ ನಿದ್ದೆ ಮಾತ್ರೆಗಳನ್ನು ಸೇರಿಸಿ, ಹಲ್ವಾ ನೀಡಿ, ಪೆಟ್ರೋಲ್​ ಸುರಿದು ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ. ಇದಕ್ಕೂ ಮುಂಚೆ ಆರೋಪಿಗಳು ಆತನ ಎಟಿಎಂನಿಂದ 7.85 ಲಕ್ಷ ರೂ. ದೋಚಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.

ನನ್ನ ಸೋದರನಿಗೆ ಯಾವುದೇ ಸಲಿಂಗ ಸಂಬಂಧ ಇರಲಿಲ್ಲ. ಆರೋಪಿ ತನಿಖೆಯ ದಿಕ್ಕು ತಪ್ಪಿಸಲು ಈ ರೀತಿ ಹೇಳುತ್ತಿದ್ದಾನೆ. ಅವನ ಬಳಿ ಈ ಕುರಿತು ಯಾವುದಾದರೂ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ನನ್ನ ಸೋದರ ಆಧ್ಯಾತ್ಮ ವ್ಯಕ್ತಿ. ತನ್ನ ಹೆಚ್ಚು ಸಮಯವನ್ನು ಪಕ್ಷದ ಕೆಲಸಗಳಿಗೆ ಮೀಸಲಿಟ್ಟಿದ್ದ ಎಂದು ಮೃತ ದಾಸ್​ನ ಸೋದರ ಮನೋಜ್​ ಕುಮಾರ್ ವಿರುದ್ಧ ಮಾಡಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ. (ಏಜೆನ್ಸೀಸ್​)