ಮುಂಡಗೋಡ: ಮಳೆಗಾಲ ಆರಂಭವಾಗಿ ತಿಂಗಳು ಕಳೆಯುತ್ತ ಬಂದರೂ ತಾಲೂಕಿನ ಕೆಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚರಂಡಿಗಳ ಸ್ವಚ್ಛತಾ ಕಾರ್ಯಕೈಗೊಳ್ಳದಿರುವುದರಿಂದ ಚರಂಡಿಯಲ್ಲಿ ಹರಿಯಬೇಕಿದ್ದ ಮಳೆ ನೀರು ರಸ್ತೆ ಮೇಲೆ ಹರಿಯುವಂತಾಗಿದೆ.
ತಾಲೂಕಿನಲ್ಲಿ 16 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಕ್ಕೂ ಅಧಿಕ ಹಳ್ಳಿಗಳಿವೆ. ಆದರೆ, ಬಹುತೇಕ ಗ್ರಾಮ ಪಂಚಾಯಿತಿಯವರು ಕೆಲ ಹಳ್ಳಿಗಳಲ್ಲಿ ಮಾತ್ರ ಚರಂಡಿ ಸ್ವಚ್ಛತೆ ಮಾಡಿಸಿ ಉಳಿದ ಹಳ್ಳಿಗಳಲ್ಲಿ ಹಾಗೆ ಬಿಟ್ಟಿದ್ದಾರೆ. ಚರಂಡಿಗಳು ತ್ಯಾಜ್ಯದಿಂದ ತುಂಬಿಕೊ ಂಡಿವೆ. ಇದರಿಂದ ಚರಂಡಿಯಲ್ಲಿ ಹರಿದು ಹೋಗುತ್ತಿದ್ದ ಮಳೆ ನೀರು ಅಲ್ಲಲ್ಲಿ ಸಂಗ್ರಹವಾಗಿ ರಸ್ತೆಯ ಮೇಲೆ ಹರಿಯುವುದು ಕಂಡು ಬರುತ್ತಿದೆ.
ಖಾತ್ರಿ ಯೋಜನೆಯಡಿ: ಈ ಹಿಂದೆ ಗ್ರಾಮ ಪಂಚಾಯಿತಿಯವರು ಉದ್ಯೋಗ ಖಾತ್ರಿ ಯೋಜನೆ, 14 ಅಥವಾ 15ನೇ ಹಣಕಾಸು ಯೋಜನೆಯಡಿ ಕೂಲಿ ಕಾರ್ವಿುಕರಿಂದ ಬಹುತೇಕ ಗ್ರಾಮಗಳಲ್ಲಿರುವ ಚರಂಡಿಗಳನ್ನು ಸ್ವಚ್ಛತೆ ಮಾಡಿಸುತ್ತಿದ್ದರು. ಆದರೆ, ಇತ್ತೀಚೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ಚರಂಡಿ ಸ್ವಚ್ಛತೆಗೆ ಅವಕಾಶವಿಲ್ಲ. 14ನೇ ಹಣಕಾಸು ಅನುದಾನವಿಲ್ಲದಾಗಿದೆ. ಇದರಿಂದ 15ನೇ ಹಣಕಾಸಿನಲ್ಲಿ ಮಾತ್ರ ಚರಂಡಿ ಸ್ವಚ್ಛತೆ ಮಾಡುವ ಅನಿವಾರ್ಯತೆ ಎದುರಾಗಿದೆ ಎಂಬ ಮಾತು ಪಂಚಾಯಿತಿಯವರದಾಗಿದೆ.
ಹೆಚ್ಚುತ್ತಿರುವ ಡೆಂಘೆ
ತಾಲೂಕಿನಲ್ಲಿ ಎರಡು ತಿಂಗಳಿಂದ ಜ್ವರ ಬಾಧೆ ಹೆಚ್ಚಾಗುತ್ತ ಸಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಿಂತ ಖಾಸಗಿ ಆಸ್ಪತ್ರೆಗಳಲ್ಲಿ ಜ್ವರದಿಂದ ಬಳಲುತ್ತಿರುವ ರೋಗಿಗಳು ತುಂಬಿ ತುಳುಕುತ್ತಿದ್ದಾರೆ. ಡೆಂಘೆ ಪ್ರಕರಣಗಳು ಹೆಚ್ಚುತ್ತಿವೆ. ಹತ್ತಾರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣರಾಗುತ್ತಿರುವ ಕಾರಣ ಅಂಕಿ-ಸಂಖ್ಯೆಗಳು ಸಮರ್ಪಕವಾಗಿ ಸಿಗದಂತಾಗಿದೆ. ಸರ್ಕಾರಿ ಆರೋಗ್ಯ ಕೇಂದ್ರದವರು ಗ್ರಾಮ ಪಂಚಾಯಿತಿಗಳಿಗೆ ಪತ್ರ ಬರೆದು ಸಾಂಕ್ರಾಮಿಕ ರೋಗಗಳು ಹರಡದಂತೆ ಚರಂಡಿ ಸ್ವಚ್ಛತೆ ಹಾಗೂ ಮಳೆಯ ನೀರು ಮನೆಗಳ ಅಕ್ಕಪಕ್ಕ ಸಂಗ್ರಹವಾಗದಂತೆ ಮುಂಜಾಗ್ರತೆ ವಹಿಸಲು ಸಾರ್ವಜನಿಕರಿಗೆ ಸೂಚಿಸಲು ಪತ್ರವನ್ನೂ ಬರೆಯಲಾಗಿದೆ.
ಈ ಕುರಿತು ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಆಡಳಿತ ಸಮಿತಿಯವರು ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವ ಯಾವ ಭಾಗಗಳಲ್ಲಿ ಚರಂಡಿಗಳು ಹೂಳು ತುಂಬಿಕೊಂಡಿವೆ ಎಂಬುದನ್ನು ಗಮನಿಸಿ ಸ್ವಚ್ಛತೆ ಕ್ರಮ ವಹಿಸುವುದು ಅವಶ್ಯವಿದೆ.
ತಾಲೂಕಿನ ಬಹುತೇಕ ಪಂಚಾಯಿತಿ ವ್ಯಾಪ್ತಿಗಳಲ್ಲಿ ಚರಂಡಿ ಸ್ವಚ್ಛತೆ ಹಾಗೂ ಕುಡಿಯುವ ನೀರು ಪರಿಶೀಲನೆ ಮಾಡಿಸಿ, ನೀರಿನ ಟ್ಯಾಂಕ್ಗಳ ಸ್ವಚ್ಛತೆ ಮಾಡಿಸಲಾಗಿದೆ. ಕೆಲವು ಗ್ರಾಮಗಳಲ್ಲಿ ಇನ್ನೂ ಚರಂಡಿ ಸ್ವಚ್ಛತೆ ಕಾರ್ಯ ನಡೆಯುತ್ತಿದೆ. ಮತ್ತೆ ಕೆಲವೆಡೆ ಅನುದಾನದ ಕೊರತೆಯಿಂದ ಸ್ವಚ್ಛತೆ ವಿಳಂಬವಾಗಿದೆ. ಈ ಕುರಿತು ಸೂಕ್ತ ಕ್ರಮ ವಹಿಸಲಾಗುವುದು.
| ವೈ.ಟಿ. ದಾಸನಕೊಪ್ಪ, ತಾಪಂ ಇಒ