ಪ್ರಧಾನಿ ಮೋದಿ ವೆಬ್​ಸೈಟ್​ನ ದತ್ತಾಂಶ ಸುರಕ್ಷಿತವಲ್ಲ ಎಂದ ಫ್ರೆಂಚ್ ಹ್ಯಾಕರ್​

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವೆಬ್​ಸೈಟ್​ನಲ್ಲಿರುವ ದತ್ತಾಂಶ ಸುರಕ್ಷಿತಲ್ಲ, ಅನಾಮಿಕ ಇಂಟರ್​ನೆಟ್​ ಬಳಕೆದಾರನೊಬ್ಬ ಈಗಾಗಲೇ ವೆಬ್​ಸೈಟ್​ನಲ್ಲಿರುವ ದಾಖಲೆಗಳನ್ನು ಪರಿಶೀಲಿಸಿದ್ದಾನೆ ಎಂದು ಫ್ರಾನ್ಸ್​ನ ಸೈಬರ್​ ಭದ್ರತಾ ತಜ್ಞ ಮತ್ತು ಎಥಿಕಲ್ ಹ್ಯಾಕರ್​ ತಿಳಿಸಿದ್ದಾನೆ.

ಟ್ವಿಟರ್​ನಲ್ಲಿ ತಮ್ಮ ಆಧಾರ್​ ಸಂಖ್ಯೆ ಪ್ರಕಟಿಸಿದ್ದ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌)ದ ಅಧ್ಯಕ್ಷ ಆರ್‌. ಎಸ್‌. ಶರ್ಮಾ ಸವಾಲನ್ನು ಸ್ವೀಕರಿಸಿ ಅವರ ವೈಯಕ್ತಿಕ ಮಾಹಿತಿಗಳನ್ನು ಫ್ರಾನ್ಸ್​ನ ಹ್ಯಾಕರ್​ ಎಲಿಯಟ್​ ಆಲ್ಡರ್​ಸನ್​ ಬಹಿರಂಗಗೊಳಿಸಿದ್ದ.

ಅಲ್ಡರ್​ಸನ್​ ಈಗ ನರೇಂದ್ರ ಮೋದಿ ಅವರ ವೆಬ್​ಸೈಟ್​ನಲ್ಲಿ ಭದ್ರತಾ ಲೋಪಗಳಿರುವುದನ್ನು ಪತ್ತೆ ಹಚ್ಚಿದ್ದು, ‘ಹಾಯ್​ ನರೇಂದ್ರ ಮೋದಿ, ನಿಮ್ಮ ವೆಬ್​ಸೈಟ್​ನಲ್ಲಿ ಭದ್ರತಾ ಲೋಪಗಳಿರುವುದು ಕಂಡುಬಂದಿದೆ. ಅನಾಮಧೇಯ ವ್ಯಕ್ತಿಯೊಬ್ಬ ನನ್ನ ಹೆಸರನ್ನು ಒಳಗೊಂಡಿರುವ ಟೆಕ್ಟ್ಸ್​ ಫೈಲ್​ ಅನ್ನು ವೆಬ್​ಸೈಟ್​ಗೆ ಅಪ್​ಲೋಡ್​ ಮಾಡಿದ್ದ. ಆತ ನಿಮ್ಮ ವೆಬ್​ಸೈಟ್​ನಲ್ಲಿರುವ ದತ್ತಾಂಶದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದಾನೆ. ಭದ್ರತಾ ಲೋಪವನ್ನು ಸರಿಪಡಿಸಲು ನೀವು ನನ್ನನ್ನು ಖಾಸಗಿಯಾಗಿ ಸಂಪರ್ಕಿಸಿ’ ಎಂದು ಟ್ವೀಟ್​ ಮಾಡಿದ್ದಾನೆ.

ಮೋದಿ ಅವರ ವೆಬ್​ಸೈಟ್​ನ ಭದ್ರತಾ ತಡೆಗೋಡೆಯನ್ನು ಭೇದಿಸಿದ ವ್ಯಕ್ತಿಗೆ ವೆಬ್​ಸೈಟ್​ನಲ್ಲಿರುವ ಎಲ್ಲಾ ದತ್ತಾಂಶವನ್ನು ಪರಿಶೀಲಿಸುವ ಮತ್ತು ಅದನ್ನು ಬದಲಿಸುವ ಅಧಿಕಾರ ಸಿಗುತ್ತದೆ. ವೆಬ್​ನ ಬಳಕೆದಾರರ ಸಂಪೂರ್ಣ ವಿವರವನ್ನು ಪರಿಶೀಲಿಸಬಹುದು, ಜತೆಗೆ ವೆಬ್​ಸೈಟ್​ ಅನ್ನು ಹ್ಯಾಕ್​ ಮಾಡುವ ಸಾಧ್ಯತೆಯೂ ಇರುತ್ತದೆ ಎಂದು ಆಲ್ಡರ್​ಸನ್​ ತಿಳಿಸಿದ್ದಾರೆ. (ಏಜೆನ್ಸೀಸ್​)