ಹುಣಸೂರು: ಹಿಂದೆ ಮುಂದೆ ಯಾರೂ ಇಲ್ಲದ, ತನ್ನವರಾರು ಎಂದು ತಿಳಿಯದ, ಬದುಕು ಎಂದರೇನು ಎಂದು ಅರಿಯದ, ಹಾದಿಬೀದಿಗಳಲ್ಲಿ ಬಿದ್ದು ಇಹಲೋಕ ತ್ಯಜಿಸಿದವರ ಅಂತ್ಯಸಂಸ್ಕಾರ ನಡೆಸಿ ಮುಕ್ತಿ ನೀಡುವ ಬಿ.ಎಸ್.ಮಂಜುನಾಥ್ ಅವರ ಕಾರ್ಯ ನಿಜಕ್ಕೂ ಮೆಚ್ಚುವಂತಹದ್ದು.
ಗೌತಮ ಬುದ್ಧನ ಮಾನವೀಯತೆಯ ಸಾರವನ್ನು ಪಾಲನೆ ಮಾಡುತ್ತಿರುವ ಸಂತ ಈ ಮಂಜುನಾಥ. ತಾಲೂಕಿನ ಬಿಳಿಕೆರೆ ಹೋಬಳಿ ಕೇಂದ್ರದಲ್ಲಿ 20 ವರ್ಷಗಳಿಂದ ಜೀವನೋಪಾಯಕ್ಕಾಗಿ ಆಟೋ ಚಾಲಕನಾಗಿರುವ ಬಿ.ಎಸ್.ಮಂಜುನಾಥ್ ಅನಾಥ ಶವಗಳಿಗೆ ಭೂಮಿಯ ಭವಬಂಧನಗಳಿಂದ ಬಿಡುಗಡೆ ನೀಡುವ ಆಪತ್ಬಾಂಧವ.
ಎರಡು ದಶಕಗಳಿಂದ 300ಕ್ಕೂ ಹೆಚ್ಚು ಅನಾಥಶವಗಳಿಗೆ ಈತ ಮುಕ್ತಿ ನೀಡಿದ್ದಾನೆ. ಕೆರೆಗೆ ಹಾರಿ ಜೀವ ಕಳದುಕೊಂಡವರು, ನೇಣಿಗೆ ಶರಣಾದವರನ್ನು ತನ್ನ ಸ್ವಂತ ಹಣದಿಂದ ಅಂತ್ಯಸಂಸ್ಕಾರ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಅಲ್ಪಸ್ವಲ್ಪ ಸಾಧನೆ ಮಾಡಿದ್ದರೆ ನಾನೇ ಸಾಧಕನೆಂದು ಬೀಗುವ ಪ್ರಚಾರ ಗಿಟ್ಟಿಸಿಕೊಳ್ಳುವ ಜನರ ನಡುವೆ ಎಲೆಮರೆಯ ಕಾಯಿಯಂತೆ ಸದ್ದುಗದ್ದಲವಿಲ್ಲದೆ, ಪ್ರತಿಫಲಾಪೇಕ್ಷೆ ಇಲ್ಲದೆ ಆತ್ಮತೃಪ್ತಿಗಾಗಿ ನಿಸ್ವಾರ್ಥ ಸೇವೆಗೈಯುತ್ತಿರುವ ಮಂಜುನಾಥ್ ಭಿನ್ನವಾಗಿ ನಿಲ್ಲುತ್ತಾರೆ.
ಸರ್ಕಾರಿ ಹುದ್ದೆಯಲ್ಲೂ ಮೋಸ: ಬಿಎ ಪದವೀಧರ, ಜಿಡಿಸಿ ಡಿಪ್ಲೊಮಾ ಹೋಲ್ಡರ್, ಟೈಪಿಂಗ್, ಕನ್ನಡ ಮತ್ತು ಇಂಗ್ಲೀಷ್ ಶಾರ್ಟ್‌ಹ್ಯಾಂಡ್ ಸೀನಿಯರ್ ಗ್ರೇಡ್ ಪಡೆದಿರುವ ಮಂಜುನಾಥ್ ಶೋಷಿತ ಸಮಾಜದಿಂದ ಬಂದ ಯುವಕ. ಶೈಕ್ಷಣಿಕ ಅರ್ಹತೆ ಇದ್ದರೂ ಸರ್ಕಾರಿ ಉದ್ಯೋಗ ಸಿಗಲಿಲ್ಲ. ಬಿಎಂಟಿಸಿ ಬಸ್ ಕಂಡಕ್ಟರ್ ಉದ್ಯೋಗ ಸಿಕ್ಕಾಗ ಇವರ ಉದ್ಯೋಗ ಕಾರಣಾಂತರಗಳಿಂದ ಬೇರೊಬ್ಬರ ಪಾಲಾಗುತ್ತದೆ. ಪೊಲೀಸ್ ಹುದ್ದೆಯ ಕಥೆಯೂ ಇದೆ ಆಯಿತು.
ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಬ್ಯಾಂಕ್ ಹುದ್ದೆ ಕೂಡ ಅನ್ಯರ ಪಾಲಾಯಿತು.ನಂತರ ನ್ಯಾಯಾಲಯದಲ್ಲಿ ಡಿ ಗ್ರೂಪ್ ನೌಕರ ಹುದ್ದೆಗೆ ಆಯ್ಕೆಯಾದಾಗ ಇವರು ಉದ್ಯೋಗಕ್ಕೆ ಹೋಗಲು ಮನಸು ಮಾಡದೆ ಆಟೋ ಚಾಲನಾ ವೃತ್ತಿಯನ್ನು ಆಯ್ದುಕೊಂಡರು. ಪತ್ನಿ ಶೋಭಾ, ಪುತ್ರ ಎಂ.ಆದಿತ್ಯ(ಎಸ್‌ಎಸ್‌ಎಲ್‌ಸಿ) ಮತ್ತು ಪುತ್ರಿ ಎಂ.ಅನನ್ಯ(ಬಿಎಸ್ಸಿ ನರ್ಸಿಂಗ್)ರೊಂದಿಗಿನ ತುಂಬು ಕುಟುಂಬ ಇವರದ್ದು.
ಅಣ್ಣನೇ ಸ್ಫೂರ್ತಿ: 90ರ ದಶಕದಲ್ಲಿ ಮಂಜುನಾಥ್ ಪ್ರೌಢಶಾಲೆ ವ್ಯಾಸಂಗ ಮಾಡುತ್ತಿದ್ದ ವೇಳೆ ಸಹೋದರ ಶಿವನಂಜು ಆರೋಗ್ಯ ಇಲಾಖೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾಗಿದ್ದರು. ಜಿಲ್ಲಾ ಆರೋಗ್ಯ ಮೇಲ್ವಿಚಾರಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ.
ಸಹೋದರ ಉದ್ಯೋಗದಲ್ಲಿದ್ದಾಗ ಈ ವ್ಯಾಪ್ತಿಯಲ್ಲಿ ಅನಾಥಶವಗಳು, ಕೆರೆಯಲ್ಲಿ ಸಿಕ್ಕ ದೇಹಗಳಿಗೆ ಅದೇ ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಮಂಜುನಾಥ್‌ನನ್ನು ಜತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಆವಾಗಲೇ ಹೆಣವನ್ನು ಕೊಯ್ಯುವುದನ್ನು ಗಮನಿಸಿದ ಮಂಜುನಾಥ್‌ಗೆ ಒಂದು ರೀತಿಯ ಧೈರ್ಯ ಬಂತು. ನಂತರದ ದಿನಗಳಲ್ಲಿ ಅದನ್ನು ಕರ್ತವ್ಯವಾಗಿ ರೂಢಿಸಿಕೊಂಡ ಮಂಜುನಾಥ್ ಇದೀಗ 300ಕ್ಕೂ ಹೆಚ್ಚು ಅನಾಥ ಶವಗಳಿಗೆ ಮುಕ್ತಿ ಕೊಟ್ಟಿದ್ದಾರೆ.
ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಮೃತಪಟ್ಟ ಅನಾಥರನ್ನು ಮಂಜುನಾಥ್ ಅಂತ್ಯಸಂಸ್ಕಾರ ಮಾಡಿದ್ದರು. ತನ್ನ ಜತೆ ಯಾರೂ ಬರದಿದ್ದರೆ ತಾವೇ ತಮ್ಮ ಆಟೋದಲ್ಲಿ ದೇಹವನ್ನು ಹಾಕಿಕೊಂಡು ಸ್ಮಶಾನಕ್ಕೊಯ್ದು, ಮಣ್ಣು ಮಾಡಿಯೋ, ಹಣತೆತ್ತು ಸೌದೆ ತಂದು ಸುಟ್ಟುಹಾಕುವ ಕೆಲಸ ಮಾಡಿದ್ದರು. ಇದಕ್ಕಾಗಿ ಹಣ ಖರ್ಚಾಯಿತು ಎನ್ನುವ ಆಲೋಚನೆ ಮಾತ್ರ ಅವರ ಮನದಲ್ಲಿ ಸುಳಿಯುತ್ತಿರಲಿಲ್ಲ. ಆಶ್ಚರ್ಯವೆಂದರೆ ಅವರ ಕೈಹಿಡಿದ ಧರ್ಮಪತ್ನಿ ಶೋಭಾ ಕೂಡ ಮಂಜುನಾಥ್‌ರ ಈ ಕಾರ್ಯಕ್ಕೆ ತಡೆಯೊಡ್ಡಿಲ್ಲ. ಇನ್ನೂ ವಿಶೇಷವೆಂದರೆ ಮಂಜುನಾಥ್ ಅವರ ಅನುಪಸ್ಥಿತಿಯಲ್ಲಿ ಅವರ ಪುತ್ರ ಆದಿತ್ಯ ಇತ್ತೀಚೆಗೆ ಒಂದೆರಡು ದೇಹಗಳಿಗೆ ಮುಕ್ತಿ ನೀಡುವ ಮೂಲಕ ಅಪ್ಪನ ಹಾದಿ ತುಳಿದಿದ್ದಾರೆ.
ಮಾನವೀಯ ಸ್ಪಂದನೆ: ಬಿಳಿಕೆರೆ ಠಾಣೆ ಸೇರಿದಂತೆ ಹುಣಸೂರು ತಾಲೂಕಿನಾದ್ಯಂತ ಪೊಲೀಸ್ ಇಲಾಖೆಗೆ ಮಂಜುನಾಥ್ ಆಪತ್ಬಾಂಧವ. ನೀರಿನಲ್ಲಿ ಬಿದ್ದ ದೇಹ ಯಾವ ಸ್ಥಿತಿಯಲ್ಲಾದರೂ ಇರಲಿ, ಅಪಘಾತಕ್ಕೊಳಗಾದ ದೇಹ ಹೇಗಾದರೂ ಇರಲಿ, ಕಣ್ಣುಮುಚ್ಚಿಕೊಂಡು ಎತ್ತಿಹಾಕಿಕೊಳ್ಳುವ ಪರಿ ನೋಡಿದಾಗ ಈ ಮನುಷ್ಯನಲ್ಲಿರುವ ಮಾನವೀಯ ಸ್ಪಂದನೆಗೆ ಒಂದು ಸಲಾಂ ನೀಡಲೇಬೇಕೆನಿಸುತ್ತದೆ.
ದಲಿತ ಸಂಘಟನೆಗಳಿಂದ ಸನ್ಮಾನ: ಮಂಜುನಾಥ್ ಈ ರೀತಿಯಾಗಿ ಸದ್ದುಗದ್ದಲವಿಲ್ಲದೆ ಸೇವೆ ನಡೆಸುತ್ತಿರುವುದನ್ನು ಮೊದಲು ಗುರುತಿಸಿದವರು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಮತ್ತವರ ತಂಡ. ಕಳೆದ ತಿಂಗಳು ನಡೆದ ಬುದ್ಧಪೂರ್ಣಿಮೆ ದಿನದಂದು ಸಮಿತಿ ವತಿಯಿಂದ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಜೀವನ ನಿರ್ವಹಣೆಗಾಗಿ ಇರುವ ಆಟೋ ದುರಸ್ತಿಗಾಗಿ ಶಾಸಕ ಜಿ.ಡಿ.ಹರೀಶ್‌ಗೌಡ ಆರ್ಥಿಕ ನೆರವು ನೀಡುವುದಾಗಿ ಕೂಡ ಭರವಸೆ ನೀಡಿದ್ದಾರೆ.
ನನ್ನ ಜೀವದ ಕೊನೆಯುಸಿರು ಇರುವವರೆಗೂ ಈ ಸೇವೆಯನ್ನು ಮುಂದುವರಿಸುತ್ತೇನೆ. ಎಲ್ಲರೂ ಅನಾಥರೇ. ನಿಜವಾಗಿ ಅನಾಥರಾದವರೂ ಈ ಹಿಂದೆ ಹೇಗೆ ಬದುಕಿದ್ದರೋ ಯಾರಿಗೆ ಗೊತ್ತು. ಅವರಿಗೂ ಶಾಂತಿ ಸಿಗಲಿ ಎನ್ನುವುದೇ ನನ್ನ ಅಭಿಲಾಷೆ. ಇದಕ್ಕಾಗಿ ಖರ್ಚಾಗುವ ಹಣದ ಕುರಿತು ಚಿಂತಿಸುವುದಿಲ್ಲ. ಸರ್ಕಾರ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮವಹಿಸಬೇಕು.
ಬಿ.ಎಸ್.ಮಂಜುನಾಥ್ ಆಟೋ ಚಾಲಕ, ಬಿಳಿಕೆರೆ
ಮಂಜುನಾಥ್‌ಗೆ ಅನಾಥಶವಗಳ ಸಂಸ್ಕಾರ ಎನ್ನುವುದು ನಿತ್ಯದ ಕರ್ತವ್ಯ ಎನ್ನುವಂತಾಗಿದೆ. ಸತ್ತವರು ಯಾವ ಜಾತಿ, ಮತ, ಪಂಥ ಎನ್ನುವ ಲೆಕ್ಕಾಚಾರ ಇವರಿಗಿಲ್ಲ. ಮನುಷ್ಯ ಜಾತಿಯನ್ನು ಮಾತ್ರ ನಂಬುತ್ತಾರೆ. ಯಾವುದೇ ಪ್ರಚಾರ ಇಷ್ಟಪಡದ ಮಂಜುನಾಥ್ ಇಂದಿನ ಯುವಸಮಾಜಕ್ಕೆ ಮಾದರಿಯಾಗಿ ನಿಲ್ಲುತ್ತಾರೆ. ಹಣ, ಹೆಸರು ಸಂಪಾದಿಸುವುದು ತಮಗಾಗಿ ಮಾತ್ರ ಎನ್ನುವ ಜನರ ನಡುವೆ ಮಂಜುನಾಥ್ ಇತರರಿಗಾಗಿ ಬದುಕುತ್ತಿದ್ದಾರೆ. ಸರ್ಕಾರ ಮಂಜುನಾಥ್ ಅವರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು.
ನಿಂಗರಾಜ ಮಲ್ಲಾಡಿ ಜಿಲ್ಲಾ ಸಂಚಾಲಕ ದಸಂಸ, ಹುಣಸೂರು