ಸ್ವತಂತ್ರ ಧರ್ಮ ನಿಲುವಿಗೆ ಬದ್ಧ

ಕೂಡಲಸಂಗಮ:ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗಬೇಕು ಎನ್ನುವ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ಧರ್ಮದ ಹೋರಾಟಕ್ಕಾಗಿ ನನ್ನ ಖಾತೆಯ ಪ್ರಭಾವ ಬಳಸಲಾರೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಭಾನುವಾರ ಕೂಡಲಸಂಗಮದಲ್ಲಿ 32ನೇ ಶರಣ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೈನ, ಸಿಖ್, ಬೌದ್ಧ ಧರ್ಮಗಳಂತೆ ಲಿಂಗಾಯತ ಧರ್ಮವೂ ಮುಕ್ತವಾದ ಧರ್ಮವಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ನಡೆದಿದೆ. ಲಿಂಗಾಯತ ಧರ್ಮದ ಎಲ್ಲ ದಾಖಲೆಗಳು ನನ್ನ ಬಳಿ ಇವೆ. ಬಸವ ನಾಡಿನಲ್ಲಿ ಜನಿಸಿದ ನಾವುಗಳೇ ಬಸವಣ್ಣನವರ ಪರ ನಿಲ್ಲದಿದ್ದರೆ ಯಾರು ನಿಲ್ಲಬೇಕು ? ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರಿಗೆ ಬಸವಣ್ಣನವರ ಕುರಿತು ಮಾಹಿತಿ ಇರಲಿಲ್ಲ. ಅವರಿಗೆ ಈ ಮಾಹಿತಿ ಇದ್ದಿದ್ದರೆ ಭಾರತದ ಸ್ಥಿತಿಯೇ ಬೇರೆ ಇರುತ್ತಿತ್ತು ಎಂದರು.

ವಚನ ಸಾಹಿತ್ಯ ಕೊಡುಗೆಯಾಗಿ ನೀಡಿದ ವಿಶ್ವಗುರು ಬಸವಣ್ಣ ಹಾಗೂ ಅವರ ವಿಚಾರಧಾರೆಗಳನ್ನು ಜಾಗತೀಕರಣಗೊಳಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ವಚನ ಪಿತಮಾಹ ಫ.ಗು. ಹಳಕಟ್ಟಿ ಅವರು ಸ್ಥಾಪಿಸಿದ ವಿಜಯಪುರ ಬಿಎಲ್​ಡಿ ಶಿಕ್ಷಣ ಸಂಸ್ಥೆ ಅಧ್ಯಕ್ಷನಾಗಿರುವ ನಾನು ಅವರ ಮಾರ್ಗದಲ್ಲಿ ನಡೆಯಬೇಕಿದೆ. ಫ.ಗು. ಹಳಕಟ್ಟಿ ಅವರು ಸ್ಥಾಪಿಸಿರುವ ಸಂಸ್ಥೆ ಮೂಲಕವೇ ಬಸವಣ್ಣ ಮತ್ತು ಅವರ ವಚನಗಳನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸುವ ಕಾರ್ಯ ಮಾಡುವ ಸಂಕಲ್ಪ ಹೊಂದಿರುವುದಾಗಿ ತಿಳಿಸಿದರು.

ಬಸವ ತತ್ತ್ವದಲ್ಲಿ ನಂಬಿಕೆ ಇಟ್ಟ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆಗೆ ಶಿಫಾರಸು ಮಾಡಿದ್ದಕ್ಕೆ ಎಲ್ಲರೂ ಅಭಿನಂದನೆ ಸಲ್ಲಿಸಬೇಕಿದೆ. ಕೇಂದ್ರ ಸರ್ಕಾರ ಮಾನ್ಯತೆ ನೀಡಲಿ, ಬಿಡಲಿ ಲಿಂಗಾಯತ ಸ್ವತಂತ್ರ ಧರ್ಮ ಎಂದು ಎಲ್ಲರೂ ಹೇಳಿಕೊಳ್ಳೊಣ ಎಂದು ಹೇಳಿದರು.

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ಮಾತನಾಡಿ, ಲಿಂಗಾಯತ ಧರ್ಮದ ಹೋರಾಟಕ್ಕೆ ಯಶಸ್ಸು ದೊರೆಯುವವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ. ಕಾನೂನಾತ್ಮಕ ಹೋರಾಟದಲ್ಲಿ ನಿಶ್ಚಿತವಾಗಿ ಯಶಸ್ಸು ಗಳಿಸುತ್ತೇವೆ. ಟೀಕೆ, ಅವಹೇಳನ ಹೇಳಿಕೆ ಬರುತ್ತವೆ. ಅದಕ್ಕೆ ಗಮನ ಕೊಡುವುದು ಬೇಡ. ನಮ್ಮ ಗುರಿ ಸಾಧನೆ ಕಡೆ ಗಮನ ಹರಿಸೋಣ ಎಂದರು.

ಪ್ರವಚನಕಾರ ಈಶ್ವರ ಮಂಟೂರ, ಧಾರವಾಡ ಅಕ್ಕಮಹಾದೇವಿ ಅನುಭಾವ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ, ಬಸವ ಧರ್ಮ ಪೀಠದ ಕಾರ್ಯದರ್ಶಿ ಮಾಹಾದೇಶ್ವರ ಸ್ವಾಮೀಜಿ, ದೆಹಲಿ ಬಸವ ಮಂಟಪದ ಚನ್ನಬಸನವಾನಂದ ಶ್ರೀಗಳು, ಬಸವ ಕಲ್ಯಾಣದ ಬಸವಪ್ರಭು ಸ್ವಾಮೀಜಿ, ಸುಧೀರ ವಾಲಿ, ಪುಟ್ಟು ಹಿರೇಮಠ, ಶೇಖರಗೌಡ ಗೌಡರ, ದಿಲೀಪ್ ಭತಮುರ್ಗೆ, ಮಂಜು ಬಂಡಿ, ಚಂದ್ರಮೌಳಿ ಲಿಂಗಾಯತ ಇತರರಿದ್ದರು.

ಲಿಂಗಾಯತರಿಗೆ ಎಂ.ಬಿ. ಪಾಟೀಲರೇ ರಾಜಕೀಯ ಮುಖಂಡ:ಲಿಂಗಾಯತ ಸಮಾಜದ ಜನರ ರಾಜಕೀಯ ಮುಖಂಡತ್ವ ವಹಿಸಿಕೊಳ್ಳಲು ಸಚಿವ ಎಂ.ಬಿ. ಪಾಟೀಲರು ಸಮರ್ಥರಾಗಿದ್ದು, ಇನ್ನು ಮುಂದೆ ಅವರೇ ಲಿಂಗಾಯತ ಸಮಾಜದ ರಾಜಕೀಯ ಮುಖಂಡ ಎಂದು ಕೂಡಲಸಂಗಮ ಬಸವ ಧರ್ಮ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಮಹದೇವಿ ಹೇಳಿದರು. ಶರಣ ಮೇಳದ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇಂದಿನಿಂದ ಲಿಂಗಾಯತ ಸಮಾಜದ ಆಗು ಹೋಗುಗಳ ನಿರ್ಧಾರಗಳನ್ನು ನೀವೇ ಕೈಗೊಳ್ಳಬೇಕು. ನೀವು ಕೈಗೊಳ್ಳುವ ಎಲ್ಲ ನಿರ್ಧಾರಕ್ಕೂ ಲಿಂಗಾಯತ ಸಮಾಜ ಬದ್ಧವಾಗಿದೆ. ರಾಜ್ಯದ ಮುಂದಿನ ಮುಖ್ಯಮಂತ್ರಿ ನೀವಾಗಬೇಕೆಂಬುದು ನಮ್ಮ ಅಭಿಲಾಷೆ ಎಂದರು.

ಬಸವ ತತ್ತ್ವದ ಕುರಿತು ಹೆಚ್ಚು ಜ್ಞಾನ ಹೊಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೇವೆ ರಾಷ್ಟ್ರಮಟ್ಟಕ್ಕೆ ಅಗತ್ಯವಾಗಿದೆ. ಅವರು ರಾಷ್ಟ್ರ ರಾಜಕಾರಣದಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು. ಲಿಂಗಾಯತ ಜಾತಿ ಅಲ್ಲ, ಅದು ಸ್ವತಂತ್ರ ಧರ್ಮ. ಈ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವುದರಿಂದ ಅದರಡಿಯಲ್ಲಿನ 99 ಉಪ ಪಂಗಡಗಳ ಜನರಿಗೆ ವಿವಿಧ ಸೌಲಭ್ಯಗಳು ದೊರೆಯಲಿವೆ. ಧರ್ಮದ ಹೋರಾಟಕ್ಕಾಗಿ ನಾಗಮೋಹನ ದಾಸ್ ವರದಿ ನಮ್ಮ ಕೈಯಲ್ಲಿರುವ ಪ್ರಬಲ ಅಸ್ತ್ರ. ತಡವಾದರೂ ಯಶಸ್ಸು ನಿಶ್ಚಿತ ಎಂದರು.

ಅನಾರೋಗ್ಯದ ಮಧ್ಯೆಯೂ ಪಾಲ್ಗೊಂಡ ಮಾತೆ:ಅನಾರೋಗ್ಯದ ಮಧ್ಯೆಯೂ ಕೂಡಲಸಂಗಮ ಬಸವ ಧರ್ಮದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಶರಣ ಮೇಳದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶನಿವಾರ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಿಂದ ವಿಶೇಷ ಅಂಬುಲೆನ್ಸ್ ಮೂಲಕ ಬೆಳಗ್ಗೆ 10.30ಕ್ಕೆ ಹೊರಟು ಕೂಡಲಸಂಗಮಕ್ಕೆ ರಾತ್ರಿ 8.30ಕ್ಕೆ ತಲುಪಿದರು. ರಾತ್ರಿ, ಬೆಳಗ್ಗೆ ವಿಶ್ರಾಂತಿ ಪಡೆದು 1 ಗಂಟೆಗೆ ವಿಶೇಷ ಅಂಬುಲೆನ್ಸ್ ಮೂಲಕ ಅಕ್ಕನಾಗಲಾಂಬಿಕಾ ಮಹಾದ್ವಾರ ಉದ್ಘಾಟಿಸಿ ವೇದಿಕೆಗೆ ಬಂದಾಗ ಭಕ್ತರು ಜಯಘೊಷದಿಂದ ಸ್ವಾಗತಿಸಿದರು. ವೇದಿಕೆ ಮೇಲೆ ಆಕ್ಸಿಜನ್ ಇರುವ ಗಾಜಿನ ರಕ್ಷಾ ಕವಚದಲ್ಲಿ ಕುಳಿತು ಮಾತನಾಡಿದರು.