ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಉಪ್ಪಿನ ಸತ್ಯಾಗ್ರಹ, ಪಾನ ವಿರೋಧಿ, ಚಲೇಜಾವ್ ಚಳವಳಿಯಲ್ಲಿ ಪಾಲ್ಗೊಂಡಿದ್ದ ಸ್ವಾತಂತ್ರೃ ಸೇನಾನಿಯ ಕುಟುಂಬ ಪ್ರಸ್ತುತ ಐದು ಸೆಂಟ್ಸ್ ಜಾಗದಲ್ಲಿ ಕಷ್ಟದಲ್ಲಿ ವಾಸ ಮಾಡುತ್ತಿದೆ.
ಬೈಂದೂರು ತಾಲೂಕು ಉಪ್ಪುಂದ ಅಮ್ಮನವರ ತೊಪ್ಲು ಗೋವಿಂದ ಖಾರ್ವಿ ಸ್ವಾತಂತ್ರೃ ಹೋರಾಟಗಾರ. ಶಿಕ್ಷಣಕ್ಕೆ ವಿದಾಯ ಹೇಳಿ, ಗಾಂಧಿ ತತ್ವದಿಂದ ಪ್ರೇರಿತರಾಗಿ ಸ್ವಾತಂತ್ರೃ ಹೋರಾಟಕ್ಕೆ ಧುಮುಕಿದವರು. ಕೊಡೇರಿ ಸುಬ್ಬ ಖಾರ್ವಿ ಒಡನಾಡಿಯಾಗಿದ್ದ ಖಾರ್ವಿ ಸಮಾಜದ ಮುಖಂಡರಾಗಿದ್ದು, ಸ್ವದೇಶಿ ಚಳವಳಿಯ ಮುಂಚೂಣಿಯಲ್ಲಿದ್ದರು. 1932, 1947ರ ಅವಧಿಯಲ್ಲಿ ಗಾಂಧೀಜಿ ನೇತೃತ್ವದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿದ್ದರು.
ಗೋವಿಂದ ಖಾರ್ವಿ -ಕೃಷ್ಣೆ ದಂಪತಿಗೆ 10 ಮಂದಿ ಮಕ್ಕಳು. ಗೋವಿಂದ ಖಾರ್ವಿ ಸ್ವಾತಂತ್ರೃ ಸಂಗ್ರಾಮದಲ್ಲಿ ಸಕ್ರಿಯರಾದರೆ, ಮನೆ ಜವಾಬ್ದಾರಿ, ಮಕ್ಕಳನ್ನು ಸಾಕಿ ಸಲಹಿದ ಪತ್ನಿ ಕೃಷ್ಣೆ ಕ್ಯಾನ್ಸರ್ ಕಾಯಿಲೆಗೆ ತುತ್ತಾದರು. 1980ರಲ್ಲಿ ಗೋವಿಂದ ಖಾರ್ವಿ ನಿಧನರಾದರು.
ಪ್ರಾಮಾಣಿಕ ಸಮಾಜಸೇವಕ :
ಕಂಬದಕೋಣೆ ಆರ್.ಕೆ.ಸಂಜೀವ ರಾಯರು, ವಕೀಲ ಕೊಳ್ಕೆಬೈಲು ದಿ.ಸಂಜೀವ ಶೆಟ್ಟಿ, ಮಾಜಿ ಎಂಎಲ್‌ಸಿ ತಿಂಗಳಾಯ ಒಡನಾಡಿಯಾಗಿದ್ದ ಗೋವಿಂದ ಖಾರ್ವಿ ಸಮುದ್ರ ದೋಣಿ ವಹಿವಾಟು ನಡೆಸುತ್ತಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಶಿಕ್ಷಣ ಮತ್ತು ಸಹಕಾರಿ ಕ್ಷೇತ್ರದಲ್ಲಿ ಶ್ರಮಿಸಿದ ರಾಷ್ಟ್ರೀಯ ಶಾಲೆ ಮುಖ್ಯಶಿಕ್ಷಕ ಉಪ್ಪುಂದ ಯು.ಲಕ್ಷ್ಮಣ ಹೊಳ್ಳ, ಉಪ್ಪುಂದ ಸಹಕಾರಿ ಸಂಘ ಸ್ಥಾಪಕ ಕಾರ್ಯದರ್ಶಿ ಯು.ಸೂರ್ಯನಾರಾಯಣ ಹೊಳ್ಳ ಒಡನಾಟ ಹೊಂದಿದ್ದ ಖಾರ್ವಿ ಪ್ರಾಮಾಣಿಕ ಸಮಾಜ ಸೇವಕರಾಗಿದ್ದವರು.
ದೇಶಕ್ಕೇನೋ ಸ್ವಾತಂತ್ರೃ ಬಂತು. ಆದರೆ ಸ್ವಾತಂತ್ರೃಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ ಖಾರ್ವಿಯವರ ಕುಟುಂಬ ಇನ್ನೂ ಕತ್ತಲೆಯಿಂದ ಹೊರಬಂದಿಲ್ಲ. ಖಾರ್ವಿಯವರ 10 ಮಕ್ಕಳ ಪೈಕಿ ಈಗ ಮೂವರು ಬದುಕಿದ್ದಾರೆ. ಅವರಲ್ಲಿ ಒಬ್ಬರ ಕುಟುಂಬ ಐದು ಸೆಂಟ್ಸ್‌ನಲ್ಲಿ ವಾಸವಿದೆ. ಇನ್ನಿಬ್ಬರು ಮೂಲ ಮನೆಯಲ್ಲಿದ್ದಾರೆ. ಇತರರ ಕುಟುಂಬಗಳು ಬೇರೆ ಬೇರೆ ಕಡೆ ಇವೆ. ಕುಟುಂಬದ ಯುವಕರು ಆಧುನಿಕ ವಿದ್ಯೆ ಪಡೆದರೂ ಉದ್ಯೋಗವಿಲ್ಲದೆ ಮೀನುಗಾರಿಕೆ ನಡೆಸುತ್ತಿದ್ದಾರೆ.
ದೇಶ 75ನೇ ಸ್ವಾತಂತ್ರೊೃೀತ್ಸವ ಸಂಭ್ರಮದಲ್ಲಿ ಹರ್ ಘರ್ ತಿರಂಗಾ ಅಭಿಯಾನ ನಡೆಸುತ್ತಿದ್ದರೂ, ರಾಜಕೀಯ ನಾಯಕರು ಈ ಕುಟುಂಬವನ್ನು ಗುರುತಿಸಿಲ್ಲ. ಅಮ್ಮನವರ ತೊಪ್ಲು ಮಾರ್ಗಕ್ಕೆ ಸ್ವಾತಂತ್ರ್ಯ ಹೋರಾಟಗಾರ ಗೋವಿಂದ ಖಾರ್ವಿ ಹೆಸರಿಡುವುದಕ್ಕೂ ಆಗಿಲ್ಲ.
ತಂದೆ ಸ್ವಾತಂತ್ರೃಕ್ಕಾಗಿ ಹೋರಾಡುವ ಸಂದರ್ಭ ಜೈಲಿಗೂ ಹೋಗಿ ಬಂದಿದ್ದರು. ಗಾಂಧೀಜಿ ಜತೆ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಈ ಕುರಿತ ತಾಮ್ರದ ಪತ್ರ ಕಳೆದುಕೊಂಡಿದ್ದರಿಂದ ಅವರಿಗೆ ಪಿಂಚಣಿಯೂ ಸಿಗುತ್ತಿರಲಿಲ್ಲ. ಸರ್ಕಾರ 10 ಎಕರೆ ಭೂಮಿ ನೀಡಿದ್ದು, ನಮಗದು ದೂರವಾಗಿದ್ದರಿಂದ ಸರ್ಕಾರಕ್ಕೇ ಹಿಂದಿರುಗಿಸಿದ್ದೇವೆ. ಬಿಜೂರು ಪರಿಸರದಲ್ಲಿ ಜಾಗ ನೀಡುವಂತೆ ಸೂಚಿಸಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಡೀಮ್ಡ್ ಫಾರೆಸ್ಟ್ ನೆಪ ಹೇಳುತ್ತಿದ್ದಾರೆ. ತಂದೆಯ ತ್ಯಾಗಕ್ಕೆ ಬೆಲೆ ಕೊಟ್ಟು ಸರ್ಕಾರ ಭೂಮಿ ನೀಡಿದರೆ ಕೃಷಿ ಮಾಡಿ ಬದುಕು ಕಟ್ಟಿಕೊಳ್ಳುತ್ತೇವೆ.
– ಹೋವಯ್ಯ ಖಾರ್ವಿ, ಗೋವಿಂದ ಖಾರ್ವಿ ಕಿರಿಯ ಪುತ್ರ, ಉಪ್ಪುಂದ
—