ದೆಹಲಿ ಮಹಿಳೆಯರಿಗೆ ಬಂಪರ್: ಮೆಟ್ರೋ, ನಗರ ಸಾರಿಗೆ ಬಸ್​ನಲ್ಲಿ ಉಚಿತ ಪ್ರಯಾಣ

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿನ ಬಳಿಕ ವಿಧಾನಸಭೆಯತ್ತ ಚಿತ್ತ ಹರಿಸಿರುವ ದೆಹಲಿ ಎಎಪಿ ಸರ್ಕಾರ, ಮೆಟ್ರೋ ಮತ್ತು ಸಾರ್ವಜನಿಕ ನಗರ ಸಾರಿಗೆ ಬಸ್​ಗಳಲ್ಲಿ ಸಂಚರಿಸುವ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಘೋಷಿಸಿದೆ.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ಉಚಿತ ಪ್ರಯಾಣದ ಬಗ್ಗೆ ಅಧಿಕೃತ ಘೋಷಣೆ ನೀಡಿದ್ದಾರೆ. ಯೋಜನೆಯಿಂದಾಗಿ ದೆಹಲಿ ಸರ್ಕಾರಕ್ಕೆ ಸುಮಾರು 800 ಕೋಟಿ ರೂ. ಹೊರೆಯಾಗಲಿದೆ. ಆದರೆ ಮಹಿಳೆಯರ ಸುರಕ್ಷತೆ ಮತ್ತು ಸಾರ್ವಜನಿಕ ಸಾರಿಗೆ ಬಳಸಲು ಉತ್ತೇಜಿಸುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ. ಸರ್ಕಾರದ ಉಚಿತ ಪ್ರಯಾಣ ಸೌಲಭ್ಯ ಪಡೆಯಲು ನಿರಾಕರಿಸುವ ಮಹಿಳೆಯರಿಗೆ ಮುಕ್ತ ಅವಕಾಶವಿದೆ. ಅಂತವರು ಟಿಕೆಟ್ ಪಡೆಯುವ ಮೂಲಕ ಮತ್ತೊಬ್ಬರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಬಹುದು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ. ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೊಟ್ ದೆಹಲಿ ಮೆಟ್ರೋ ಕಾರ್ಪೆರೇಷನ್ ಮತ್ತು ಸಾರಿಗೆ ಅಧಿಕಾರಿಗಳ ಜತೆ ಈಗಾಗಲೇ ಚರ್ಚೆ ನಡೆಸಿದ್ದು, ಆರ್ಥಿಕ ಹೊರೆ ಬಗ್ಗೆ ವಿಸõತ ವರದಿ ನೀಡುವಂತೆ ಕೇಳಿದ್ದಾರೆ.

ಮೂರು ತಿಂಗಳೊಳಗೆ ಆರಂಭ

ದೆಹಲಿ ಮೆಟ್ರೋ ಯೋಜನೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ 50:50 ಪಾಲುದಾರಿಕೆ ಹೊಂದಿವೆ. ಹೀಗಾಗಿ ಯೋಜನೆಯ ಮೊತ್ತವನ್ನು ಅದೇ ರೀತಿ ಭರಿಸುವ ಬಗ್ಗೆ ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸಿದ್ದೆವು. ಆದರೆ ಕೇಂದ್ರ ಸರ್ಕಾರ ಅದಕ್ಕೆ ಸಮ್ಮತಿಸಿಲ್ಲ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ಹೀಗಾಗಿ ಯೋಜನೆಯ ಸಂಪೂರ್ಣ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ. ಸದ್ಯ ಕೇಂದ್ರದಿಂದ ಯೋಜನೆಗೆ ಅನುಮತಿ ದೊರೆಯಬೇಕು ಅಷ್ಟೆ. ಬಳಿಕ ಮೂರು ತಿಂಗಳ ಒಳಗಾಗಿ ಉಚಿತ ಪ್ರಯಾಣ ಸೌಲಭ್ಯ ಪ್ರಾರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.

ಮಹಿಳೆಯರ ಸುರಕ್ಷತೆ

ದೆಹಲಿಯಲ್ಲಿ ಹೆಣ್ಣು ಮಕ್ಕಳು ಕಾಲೇಜಿಗೆ ಹೋದರೆ, ಮಹಿಳೆಯರು ಕೆಲಸಕ್ಕೆ ಹೋದರೆ ಅವರು ಹಿಂದಿರುಗುವವರೆಗೂ ಮನೆಯವರಲ್ಲಿ ಆತಂಕ ಇದ್ದೇ ಇರುತ್ತದೆ. ಈ ಹಿನ್ನೆಲೆ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ ಎಂದು ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿಯ ಸಾರಿಗೆ ಬಸ್​ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಕೆಲಸವೂ ನಡೆಯುತ್ತಿದ್ದು ನವೆಂಬರ್ ವೇಳೆಗೆ ಪೂರ್ಣವಾಗಲಿದೆ. ಜತೆಗೆ ಪ್ರತಿ ಬಸ್​ನಲ್ಲಿ ಒಬ್ಬ ಹೋಮ್ ಗಾರ್ಡ್ ನೇಮಿಸಲಾಗಿದೆ. ಬಸ್​ಗಳಲ್ಲಿ ಹೋಮ್ಾರ್ಡ್​ಗಳು ಇರುವುದನ್ನು ತಿಳಿಸಲು ಇನ್ನು ಮುಂದೆ ಪೋಸ್ಟ್ ರ್​ಗಳನ್ನು ಅಂಟಿಸಲಾಗುತ್ತದೆ. ಹೋಮ್ಾರ್ಡ್ ಇರುವ ಧೈರ್ಯದಲ್ಲಿ ಮಹಿಳೆಯರು ನಿರ್ಭಯದಿಂದ ಪ್ರಯಾಣಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಆಪ್ ಚುನಾವಣಾ ತಂತ್ರ

ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಏಳೂ ಕ್ಷೇತ್ರಗಳಲ್ಲಿ ಹೀನಾಯ ಸೋಲು ಅನುಭವಿಸಿದ ಕೇಜ್ರಿವಾಲ್​ಗೆ ಮುಂಬರುವ ವಿಧಾನಸಭೆ ಚುನಾವಣೆ ಭಯ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮತದಾರರನ್ನು ಒಲಿಸಿಕೊಳ್ಳಲು ಸಾಲು ಸಾಲು ಯೋಜನೆ ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ದೆಹಲಿಯಲ್ಲಿ 1.43 ಕೋಟಿ ಮತದಾರರಿದ್ದು, ಇದರಲ್ಲಿ 64 ಲಕ್ಷ ಮಹಿಳಾ ಮತದಾರರಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರ ವೋಟುಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಹೀಗಾಗಿ ಮಹಿಳೆಯರನ್ನೇ ಮುಖ್ಯ ಗುರಿಯಾಗಿಸಿಕೊಂಡು ಕೇಜ್ರಿವಾಲ್ ಉಚಿತ ಪ್ರಯಾಣ ಯೋಜನೆ ಘೋಷಿಸಿದ್ದಾರೆ ಎನ್ನಲಾಗಿದೆ. ದೆಹಲಿ ಸರ್ಕಾರ ಸಾಮಾನ್ಯವರ್ಗದ ಬಡವರಿಗೆ ಸರ್ಕಾರಿ ಕೆಲಸಗಳಲ್ಲಿ 10% ಮೀಸಲಾತಿ ಘೋಷಿಸಿದೆ.

ಸಮ ಬೆಸ ಪ್ರಯೋಗ

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಈ ಹಿಂದೆಯೂ ಕೂಡ ಜನಪ್ರಿಯ ಹಾಗೂ ವಿಚಿತ್ರ ಯೋಜನೆಗಳನ್ನ ಜಾರಿಗೊಳಿಸಿದ್ದಾರೆ. 2016ರಲ್ಲಿ ದೆಹಲಿಯಲ್ಲಿ ಹೆಚ್ಚಾಗಿದ್ದ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಸಮ-ಬೆಸ ಸಂಖ್ಯೆಯ ವಾಹನ ಸಂಖ್ಯೆ ಯೋಜನೆ ಕೈಗೊಂಡಿದ್ದರು. ಇದನ್ನು ಉಲ್ಲಂಘಿಸಿದರೆ 2 ಸಾವಿರ ರೂ. ದಂಡ ವಿಧಿಸಲಾಗುತ್ತಿತ್ತು.

ಉಚಿತ ಯೋಜನೆ ತೊಡಕುಗಳೇನು?

# ಸರ್ಕಾರದ ಬೊಕ್ಕಸಕ್ಕೆ ಭಾರಿ ಪ್ರಮಾಣದ ಹೊರೆ

# ಮೆಟ್ರೋದಲ್ಲಿ ಪ್ರತಿ ದಿನ 7.8 ಲಕ್ಷ ಮಹಿಳೆಯರ ಪ್ರಯಾಣ

# ಉಚಿತ ಪ್ರಯಾಣದಿಂದ ಏರುವ ಪ್ರಯಾಣಿಕರ ಸಂಖ್ಯೆ

#ಶ್ರೀಮಂತ, ಸ್ಥಿತಿವಂತರೂ ಉಚಿತವಾಗಿ ಪ್ರಯಾಣಿಸುವುದು

# ಸಂಪೂರ್ಣ ವೆಚ್ಚ ರಾಜ್ಯ ಸರ್ಕಾರಕ್ಕೆ ಬೀಳುವುದು

# ಪುರುಷರು ದರ ಇಳಿಕೆಗೆ ಆಗ್ರಹಿಸಬಹುದು

Leave a Reply

Your email address will not be published. Required fields are marked *