ಸಚಿವ-ಶಾಸಕ, ಸಂಸದರ ನಡುವೆ ಸವಾಲು
ವಸತಿರಹಿತರಿಗೆ ಕಾಯುವ ಸ್ಥಿತಿ
ಚಿಕ್ಕಬಳ್ಳಾಪುರ: ನಿರಂತರ ರಾಜಕೀಯ ಗಲಾಟೆಯಿಂದಾಗಿ ವಸತಿ ಯೋಜನೆಯಡಿ ಜಿಲ್ಲಾ ಕೇಂದ್ರದಲ್ಲಿನ ನಿವಾಸಿಗಳಿಗೆ ಉಚಿತ ನಿವೇಶನ ವಿತರಣೆ ಪ್ರಕ್ರಿಯೆಗೆ ತೊಡಕಾಗಿದೆ.
ಹೌದು! ಬಡಜನರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಹಕ್ಕುಪತ್ರ ಪಡೆದವರಿಗೆ ನಿವೇಶನಗಳನ್ನು ಬಹುಬೇಗ ವಿತರಿಸಿ ಎಂಬುದಾಗಿ ಸಂಸದ ಡಾ. ಕೆ.ಸುಧಾಕರ್ ಮನವಿ ಮಾಡುತ್ತಿದ್ದಾರೆ. ಇದಕ್ಕೆ ಶಾಸಕ ಪ್ರದೀಪ್ ಈಶ್ವರ್ ಈಗಾಗಲೇ ಚುನಾವಣಾ ದೃಷ್ಟಿಯಲ್ಲಿ ವಿತರಣೆಯ ಹಕ್ಕುಪತ್ರಗಳು ನಕಲಿ ಎನ್ನುತ್ತಿದ್ದರೆ, ಆತುರಾತುರವಾಗಿ ನಿವೇಶನಗಳ ಹಂಚಿಕೆಗೆ ಗುರುತಿಸಿದ ಜಾಗ ಯೋಗ್ಯವಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಹೇಳುತ್ತಿದ್ದಾರೆ. ಹೀಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಪರಸ್ಪರ ಸವಾಲುಗಳು, ಮಾತಿನ ಚಕಮಕಿ ಜೋರಾಗಿ ನಡೆಯುತ್ತಿದೆ. ಮತ್ತೊಂದಡೆ ವಸತಿರಹಿತರು ಸೌಲಭ್ಯಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಸಂಸದರಿಗೆ ಸಚಿವರ ಸವಾಲು: ಹಕ್ಕುಪತ್ರಗಳ ವಿತರಣೆ, ಗುರುತಿಸಿದ ಜಾಗ ಯೋಗ್ಯವಾಗಿರುವುದು, ಜನರಿಗೆ ಅನುಕೂಲ ವಿಚಾರವಾಗಿ ಖುದ್ದು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸುವ ಪ್ರವಾಸ ಕೈಗೊಳ್ಳುವ ಬಗ್ಗೆ ಸಂಸದ ಡಾ. ಕೆ.ಸುಧಾಕರ್ ಅವರಿಗೆ ಸಚಿವ ಡಾ. ಎಂ.ಸಿ. ಸುಧಾಕರ್ ಸವಾಲು ಹಾಕಿದ್ದಾರೆ. ಒಳ್ಳೆಯ ಕೆಲಸಕ್ಕೆ ಅಭ್ಯಂತರವಿಲ್ಲ. ಆದರೆ, ಅವೈಜ್ಞಾನಿಕ ನಿರ್ಧಾರಗಳಿಗೆ ಸಮ್ಮತಿಸಲು ಆಗುವುದಿಲ್ಲ. ಸಂಸದರು ಒಪ್ಪಿದರೆ ಬಸ್‌ನಲ್ಲಿ ಜನರು ಮತ್ತು ಮಾಧ್ಯಮದವರೊಂದಿಗೆ ಸ್ಥಳಕ್ಕೆ ಕರೆದುಕೊಂಡು ಹೋಗಲಾಗುವುದು. ಅಲ್ಲಿ ಜಾಗ ಯೋಗ್ಯವಾಗಿರುವ ಬಗ್ಗೆ ಹೆಚ್ಚಿನ ಅಭಿಪ್ರಾಯ ವ್ಯಕ್ತವಾದರೆ ಒಪ್ಪಿಕೊಳ್ಳಲಾಗುವುದು. ಸಂಸದರು ಬರುತ್ತಾರಾ? ಎಂದು ಪ್ರಶ್ನಿಸಿದ್ದಾರೆ.
ಫಲಾನುಭವಿಗಳ ನಿರೀಕ್ಷೆ
ಹಕ್ಕುಪತ್ರ ಪಡೆದಿದ್ದ ಫಲಾನುಭವಿಗಳು ಸ್ವಂತ ಸೂರಿನ ಸೌಲಭ್ಯ ಸಿಕ್ಕಿತೆಂದು ಸಂತಸಗೊಂಡಿದ್ದರು. ಆದರೆ, ಈಗ ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎನ್ನುವ ಆತಂಕದಲ್ಲಿದ್ದಾರೆ. ಆಡಳಿತ ಪಕ್ಷದವರು ಫಲಾನುಭವಿಗಳ ಆಯ್ಕೆ ಬಗ್ಗೆ ಹಲವು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅನರ್ಹರ ಆಯ್ಕೆ, ಪ್ರಭಾವಿಗಳ ಪಾತ್ರ, ಬಡವರನ್ನು ಕೈಬಿಟ್ಟಿರುವುದು ಸೇರಿ ವಿವಿಧ ಆರೋಪ ಕೇಳಿ ಬಂದಿವೆ. ಇದರಿಂದ ಮತ್ತೆ ಹೊಸದಾಗಿ ಫಲಾನುಭವಿಗಳ ಆಯ್ಕೆ ಪಟ್ಟಿ ತಯಾರಿಸುವ ಲಕ್ಷಣಗಳು ಗೋಚರವಾಗುತ್ತಿವೆ. ಇದರಿಂದ ನಿವೇಶನ ಹಂಚಿಕೆಯ ಪ್ರಕ್ರಿಯೆ ಕೆಲಸ ಮತ್ತಷ್ಟು ವಿಳಂಬವಾಗಿ, ಫಲಾನುಭವಿಗಳು ಕಾಯಲೇಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.
ನಕಲಿಯೋ? ಅಸಲಿಯೋ?
ಈ ಹಿಂದೆ ಜಿಲ್ಲೆಯಲ್ಲಿ 22 ಸಾವಿರ ನಿವೇಶನಗಳನ್ನು ವಿತರಿಸುವುದಾಗಿ ಘೋಷಿಸಿದ್ದು, ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಕರೆಗಟ್ಟಲೇ ಜಾಗವನ್ನು ಗುರುತಿಸಲಾಗಿದೆ. ಅದರಲ್ಲೂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 10 ಸಾವಿರ ನಿವೇಶನ ಹಂಚಿಕೆಯ ಪ್ರಚಾರ ದೊಡ್ಡ ಸದ್ದು ಮಾಡಿದ್ದು, ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂಲಕ ಡಾ. ಕೆ.ಸುಧಾಕರ್ ಫಲಾನುಭವಿಗಳಿಗೆ ನಿವೇಶನ ಮಂಜೂರಾತಿ ಹಕ್ಕುಪತ್ರ ಕೊಡಿಸಿದ್ದರು. ಆದರೆ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಬೆಳವಣಿಗೆ ಬಳಿಕ ಪ್ರಮಾಣಪತ್ರಗಳು ನಕಲಿ ಎಂಬುದಾಗಿ ಹೇಳುತ್ತಿದ್ದು, ಸ್ಥಳೀಯ ಜನಪ್ರತಿನಿಧಿಗಳ ಗಲಾಟೆ, ಒತ್ತಡದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಸಲಿತನದ ಬಗ್ಗೆ ಸ್ಪಷ್ಟನೆ ನೀಡುತ್ತಿಲ್ಲ. ಇತ್ತ ಸಂಸದರು, ಅತ್ತ ಉಸ್ತುವಾರಿ ಸಚಿವರು ಮತ್ತು ಶಾಸಕರ ಮಾತಿಗೆ ತಕ್ಕಂತೆ ತಲೆಯಾಡಿಸುತ್ತಿದ್ದಾರೆ. ಇದರ ವಿಚಾರವಾಗಿ ಸಭೆಗಳಲ್ಲಿ ಆಕ್ಷೇಪದ ಮಾತುಗಳು ಕೇಳಿ ಬಂದು ಇಕ್ಕಟ್ಟಿಗೆ ಸಿಲುಕುವಂತಾಗಿದೆ.
ನಿವೇಶನ ರಹಿತರ ಹೆಚ್ಚಳ
ಚಿಕ್ಕಬಳ್ಳಾಪುರವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವುದರಿಂದ ಈ ಭಾಗದಲ್ಲಿ ಭೂಮಿಯ ಬೆಲೆಯು ದುಬಾರಿಯಾಗಿದೆ. ಒಂದು ನಿವೇಶನದ ದರವು (30*40) ಮಾರುಕಟ್ಟೆಯಲ್ಲಿ ಕನಿಷ್ಠ 20 ಲಕ್ಷ ರೂ.ಗಳಿಂದ ಗರಿಷ್ಠ 45 ಲಕ್ಷ ರೂ.ವರೆಗೂ ಇದೆ. ಹೊಸ ಬಡಾವಣೆ ನಿರ್ಮಾಣ ಜೋರಾಗಿದೆ. ಇದರ ನಡುವೆ ವಸತಿರಹಿತರ ಸಂಖ್ಯೆಯೂ ಹೆಚ್ಚಾಗುತ್ತಿದ್ದು ವಿವಿಧ ವಸತಿ ಯೋಜನೆಗಳಡಿ ಸ್ವಂತ ಮನೆ ಹೊಂದುವ ಆಸೆಯಲ್ಲಿ ಎದುರು ನೋಡುತ್ತಿದ್ದಾರೆ. ಆದರೆ, ಸ್ಥಳೀಯ ಜನಪ್ರತಿನಿಧಿಗಳ ರಾಜಕೀಯ ಲೆಕ್ಕಾಚಾರ ಮತ್ತು ಅಧಿಕಾರಿಗಳ ಅಸಡ್ಡೆ ಧೋರಣೆಯಿಂದ ಅರ್ಹರು ಸೌಲಭ್ಯದಿಂದ ವಂಚಿತರಾಗುವಂತಾಗಿದೆ.
ಸಮಸ್ಯೆ ಬಗೆಹರಿಸಲು ಒತ್ತು
ಸರ್ಕಾರಿ ಯೋಜನೆಯ ಅನುಷ್ಠಾನದಲ್ಲಿ ತ್ವರಿತ ಪ್ರಗತಿ ಕಾಣಬೇಕು. ಇದರ ನಡುವೆ ಉದ್ಭವವಾಗುವ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ. ರಾಜಕೀಯ ಹಸ್ತಕ್ಷೇಪ ಮತ್ತು ಭ್ರಷ್ಟಾಚಾರದಿಂದ ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳಲ್ಲಿ ನಿರೀಕ್ಷೆಗೆ ಅನುಗುಣವಾಗಿ ತೃಪ್ತಿದಾಯಕ ಸಾಧನೆ ಕಾಣುವುದಿಲ್ಲ. ಅಂಕಿ-ಅಂಶಗಳಲ್ಲಿ, ಬೆರಳೆಣಿಕೆಯ ಫಲಾನುಭವಿಗಳನ್ನು ತಲುಪುವಲ್ಲಿ ಸೀಮಿತವಾಗಬೇಕಾಗಿದೆ. ಇದಕ್ಕೆ ವಸತಿ ಸೌಲಭ್ಯದ ರಾಜಕೀಯವು ಒಂದು ನಿರ್ದಶನ. ಈಗಾಲಾದರೂ ಸಂಬಂಧಪಟ್ಟವರು ಅರ್ಹ ಫಲಾನುಭವಿಗಳ ಹಿತದೃಷ್ಟಿಯಿಂದ ಸಕಾರಾತ್ಮಕ ನಿರ್ಧಾರ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
“ಒಳ್ಳೆಯ ಕೆಲಸಕ್ಕೆ ರಾಜಕೀಯ ಬಿಟ್ಟು ಎಲ್ಲರೂ ಸಹಕರಿಸಬೇಕು. ಜನರಿಗೆ ವಸತಿ ಯೋಜನೆ ಕಲ್ಪಿಸಿಕೊಟ್ಟರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಹೆಸರು ಬರುತ್ತದೆ. ಜಿಲ್ಲೆಯಲ್ಲಿ ವಸತಿ ಯೋಜನೆಗೆ ಜಮೀನನ್ನು ಮಂಜೂರು ಮಾಡಿಸಿಕೊಂಡು ಬಂದಿರುವುದರ ಹಿಂದೆ ದೊಡ್ಡ ಪರಿಶ್ರಮ ಇದೆ.”
– ಡಾ. ಕೆ.ಸುಧಾಕರ್ ಸಂಸದ“ಹಿಂದೆ ಅನೇಕ ಕಡೆ ಗುರುತಿಸಿರುವ ಕಲ್ಲು ಬಂಡೆಗಳ ಜಾಗವು ವಸತಿಗೆ ಯೋಗ್ಯವಾಗಿಲ್ಲ. ನಗರ, ಪಟ್ಟಣ ಪ್ರದೇಶಗಳ ಭಾಗದವರಿಗೆ ದೂರದ ಹಳ್ಳಿಗಳಲ್ಲಿ ನಿವೇಶನ ಕೊಟ್ಟರೆ ಒಪ್ಪಲಾಗುತ್ತದೆಯೇ?”
-ಡಾ. ಎಂ.ಸಿ.ಸುಧಾಕರ್ಜಿಲ್ಲಾ ಉಸ್ತುವಾರಿ ಸಚಿವ
“ಚುನಾವಣೆಯ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಜನರನ್ನು ಯಾಮಾರಿಸಿ, ನಕಲಿ ಹಕ್ಕುಪತ್ರ ನೀಡಲಾಗಿದೆ. ಅರ್ಹರಿಗೆ ಕಾಂಗ್ರೆಸ್ ಸರ್ಕಾರವು ವಸತಿ ಸೌಲಭ್ಯ ಕಲ್ಪಿಸಲು ಬದ್ಧತೆ ಹೊಂದಿದೆ.”
– ಪ್ರದೀಪ್ ಈಶ್ವರ್ ಅಯ್ಯರ್ ಚಿಕ್ಕಬಳ್ಳಾಪುರ ಶಾಸಕ