More

  ಉಚಿತ ವಿದ್ಯುತ್ ಪೂರೈಕೆ ಮರೀಚಿಕೆ

  ಮಡಿಕೇರಿ:

  ೧೦ ಹೆಚ್‌ಪಿ ಒಳಗಿನ ವಿದ್ಯುತ್ ಪಂಪ್‌ಸೆಟ್ ಬಳಸುವ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ಪೂರೈಕೆಯ ಬೇಡಿಕೆ ಮರೀಚಿಕೆಯಾಗಿ ಉಳಿಯುವ ಸಾಧ್ಯತೆಯೇ ದಟ್ಟವಾಗಿದೆ. ಕಾಫಿ ಬೆಳೆಗಾರರು ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ ಪಾವತಿಸುವಂತೆ ಇತ್ತೀಚೆಗೆ ಸೆಸ್ಕ್ ಸೂಚನೆ ನೀಡಿದ್ದ ಬೆನ್ನಲ್ಲೇ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡಲು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ತಾತ್ವಿಕ ಒಪ್ಪಿಗೆ ನೀಡಿರುವುದು ಬೆಳೆಗಾರರಲ್ಲಿ ನಿರಾಸೆ ಮೂಡಿಸಿದೆ. ಸರ್ಕಾರದ ನಿರ್ಧಾರ ವಿರೋಧಿಸಿ ಹೋರಾಟಕ್ಕೂ ಸಿದ್ಧತೆ ನಡೆದಿದೆ.

  ೧೦ ಹೆಚ್‌ಪಿ ತನಕದ ವಿದ್ಯುಚ್ಚಕ್ತಿ ಪಂಪ್‌ಸೆಟ್ ಹೊಂದಿರುವ ಕಾಫಿ ಬೆಳೆಗಾರರನ್ನು ಎಲ್‌ಟಿ ೪ ಸಿ ನಿಂದ ಎಲ್‌ಟಿ ೪ ಎ ಗೆ ಸೇರ್ಪಡೆಗೊಳಿಸಿ ಉಚಿತ ವಿದ್ಯುತ್ ಸೌಲಭ್ಯ ಕೊಡಬೇಕು. ೧೦ ಹೆಚ್.ಪಿ.ವರೆಗಿನ ವಿದ್ಯುಚ್ಚಕ್ತಿ ಪಂಪ್‌ಸೆಟ್ ಬಳಕೆದಾರರ ಬಾಕಿ ಹಣ ಸಂಪೂರ್ಣವಾಗಿ ಮನ್ನಾ ಮಾಡಬೇಕು. ೧೦ ಹೆಚ್.ಪಿ.ಗೂ ಹೆಚ್ಚಿನ ವಿದ್ಯುಚ್ಚಕ್ತಿ ಪಂಪ್‌ಸೆಟ್ ಹೊಂದಿರುವ ಬೆಳೆಗಾರರಿಗೆ ಬಾಕಿಯನ್ನು ಬಡ್ಡಿ ರಹಿತವಾಗಿ ಕಂತುಗಳ ರೂಪದಲ್ಲಿ ಪಾವತಿಸಲು ಅನುಕೂಲ ಮಾಡಿಕೊಡಬೇಕು ಎನ್ನುವುದು ಕಾಫಿ ಬೆಳೆಗಾರರ ಬಹು ವರ್ಷಗಳ ಬೇಡಿಕೆ.

  ಸಾಮಾನ್ಯವಾಗಿ ಕಾಫಿ ಬೆಳೆಗಾರರು ತಮ್ಮ ತೋಟಗಳಿಗೆ ನೀರು ಹಾಯಿಸಲು ವರ್ಷದಲ್ಲಿ ಕೇವಲ ೨-೩ ತಿಂಗಳು ಮಾತ್ರ ವಿದ್ಯುತ್ ಚಾಲಿತ ಪಂಪ್‌ಸೆಟ್‌ಗಳನ್ನು ಬಳಸುತ್ತಾರೆ. ಆದರೆ ಬಳಸಿದ ವಿದ್ಯುತ್ ಶುಲ್ಕ ಜೊತಗೆ ಕನಿಷ್ಠ ಶುಲ್ಕವನ್ನು ವರ್ಷದ ಎಲ್ಲ ತಿಂಗಳು ಕಟ್ಟಲೇಬೇಕಿದೆ. ಕಾಫಿ ಬೆಳೆಯುವ ಪ್ರದೇಶದ ಜನಪ್ರತಿನಿಧಿಗಳು ಬೆಳೆಗಾರರ ಪರವಾಗಿ ಈ ವಿಷಯದಲ್ಲಿ ಆಗಾಗ್ಗೆ ಧ್ವನಿ ಎತ್ತುತ್ತಲೇ ಇದ್ದಾರೆ.

  ಬೆಳೆಗಾರ ಸಂಘಟನೆಗಳ ಪ್ರತಿನಿಧಿಗಳೂ ಸಾಕಷ್ಟು ಬಾರಿ ವಿಧಾನಸೌಧಕ್ಕೆ ತೆರಳಿ ಸಂಬAಧಿಸಿದವರಿಗೆ ಮನವರಿಕೆಯನ್ನೂ ಮಾಡಿದ್ದಾರೆ. ಇದರ ಪರಿಣಾಮ ಎಂಬAತೆ ‘ಸಣ್ಣ ಮತ್ತು ಮಧ್ಯಮ ಕಾಫಿ ಮತ್ತು ಟೀ ಬೆಳೆಗಾರರ ೧೦ ಹೆಚ್‌ಪಿ ವರೆಗಿನ ಪಂಪ್‌ಸೆಟ್‌ಗಳ ವಿದ್ಯುತ್ ಶುಲ್ಕ ಮರುಪಾವತಿಸಲು ಒಂದು ಯೋಜನೆ ರೂಪಿಸಲಾಗುವುದು,’ ಎಂದು ೨೦೨೦-೨೧ ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರ ಪ್ರಕಟಿಸಿತ್ತಾದರೂ ನಂತರ ಸಂಪನ್ಮೂಲ ಕೊರತೆ ಕಾರಣಕ್ಕೆ ಹಿಂತೆಗೆದುಕೊAಡಿತ್ತು.

  ಬೆಳೆಗಾರ ಸಂಘಟನೆಗಳು ಮತ್ತು ಕಾಫಿ ಬೆಳೆಗಾರರು ಹಲವು ಪದೇ ಪದೇ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಈ ಹಿಂದೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ಸಂದರ್ಭದಲ್ಲಿ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ಬಗ್ಗೆ ೨೦೨೨ ಮಾ. ೨೨ರಂದು ಸದನದಲ್ಲೇ ಭರವಸೆ ಕೊಟ್ಟಿದ್ದರು. ‘ಇಂಧನ ಸಚಿವರು, ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಲಾಗಿದೆ. ೧೦ ಹೆಚ್.ಪಿ. ತನಕ ಬೇರೆ ರೈತರಿಗೆ ಉಚಿತ ವಿದ್ಯುತ್ ಕೊಡುವಂತೆ ಕಾಫಿ ಬೆಳೆಗಾರರಿಗೂ ಕೊಡಲು ನಮ್ಮ ಸರ್ಕಾರ ಸಿದ್ಧವಿದೆ. ೧೦ ಹೆಚ್.ಪಿ. ತನಕ ಕಾಫಿ ಬೆಳೆಗಾರರಿಗೆ ಸಬ್ಸಿಡಿ ಕೊಡಲು ಸÀರ್ಕಾರ ತೀರ್ಮಾನ ಮಾಡಿದೆ’, ಎಂದಿದ್ದರು.

  ನಂತರ ಅಂದಿನ ಇಂಧನ ಸಚಿವ ಸುನಿಲ್ ಕುಮಾರ್ ಕೂಡ, ‘ಕಾಫಿ ಬೆಳೆಗಾರರ ೧೦ ಹೆಚ್.ಪಿ. ತನಕದ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಕೊಡಲು ಸÀರ್ಕಾರ ಅನುಮೋದನೆ ನೀಡಿದೆ,’ ಎಂದು ಪ್ರಕಟಿಸಿದ್ದರು. ಆದರೆ ಅದು ಕಾರ್ಯರೂಪಕ್ಕೆ ಬರಲೇ ಇಲ್ಲ. ಸರ್ಕಾರ ಮತ್ತು ಜನಪ್ರತಿನಿಧಿಗಳ ಮಾತನ್ನು ನಂಬಿ ಬಹುತೇಕ ಕಾಫಿ ಬೆಳೆಗಾರರು ಹಲವು ವರ್ಷಗಳಿಂದ ವಿದ್ಯುತ್ ಬಿಲ್ ಪಾವತಿಸುವುದನ್ನೇ ನಿಲ್ಲಿಸಿಬಿಟ್ಟಿದ್ದರು.

  ೨೦೨೩ರ ಸೆಪ್ಟೆಂಬರ್ ೩೦ ರವರೆಗಿನ ಮಾಹಿತಿ ಪ್ರಕಾರ ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಾಫಿ ಬೆಳೆಗಾರರ ೧೦ ಹೆಚ್.ಪಿ. ಮತ್ತು ಅದಕ್ಕಿಂತ ಕಡಿಮೆ ಸಾಮರ್ಥ್ಯದ ನೀರಾವರಿ ಪಂಪ್‌ಸೆಟ್‌ಗಳ ವಿದ್ಯುತ್ ಬಿಲ್ ಅಸಲು ೪೭.೭ ಕೋಟಿ ರೂ. ಹಾಗೂ ಬಡ್ಡಿ ೧೬.೪೭ ಕೋಟಿ ರೂ. ಸೇರಿ ಒಟ್ಟು ೬೪.೨೪ ಕೋಟಿ ರೂ. ಬಾಕಿ ಉಳಿದುಕೊಂಡಿದೆ. ಈ ಬಾಕಿಯನ್ನು ಕಾಫಿ ಬೆಳೆಗಾರರು ಪಾವತಿಸುವಂತೆ ಇತ್ತೀಚೆಗಷ್ಟೇ ಸೆಸ್ಕ್ ಸೂಚಿಸಿತ್ತು.
  ಇದೀಗ ಸರ್ಕಾರವೂ ಕಾಫಿ ಬೆಳೆಗಾರರ ಬಾಕಿ ಬಿಲ್ ವಸೂಲಿಗೆ ಮುಂದಾಗಿದೆ. ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಕಟ್ಟಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಾತ್ವಿಕ ಒಪ್ಪಿಗೆ ನೀಡಿರುವುದಾಗಿ ಇಂಧನ ಸಚಿವ ಕೆ.ಜೆ. ಜಾರ್ಜ್ ಮಂಗಳವಾರ (ನ.೨೨) ತಿಳಿಸಿದ್ದಾರೆ.

  ಇದು ಕಾಫಿ ಬೆಳೆಗಾರರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ರೈತರಿಗೆ ಸಿಗುವ ಉಚಿತ ವಿದ್ಯುತ್ ತಮಗೇಕೆ ಸಿಗುವುದಿಲ್ಲ? ನಾವೂ ಕೂಡ ರೈತರೇ ಎನ್ನುವುದು ಕಾಫಿ ಬೆಳೆಗಾರರ ವಾದ. ಸರ್ಕಾರ ಮತ್ತು ಜನಪ್ರತಿನಿಧಿಗಳು ಕಾಫಿ ಬೆಳೆಗಾರರ ಮೂಗಿಗೆ ತುಪ್ಪ ಸವರುವ ಬದಲು ಉಚಿತ ವಿದ್ಯುತ್ ಪೂರೈಕೆ ವಿಷಯದಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸುವಂತೆ ಒತ್ತಾಯ ಕೇಳಿಬಂದಿದ್ದು, ನಂತರ ಹೋರಾಟದ ಹಾದಿ ಹಿಡಿಯುವ ಬಗ್ಗೆ ಬೆಳೆಗಾರರು ಚಿಂತನೆ ನಡೆಸಿದ್ದಾರೆ.

  ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಾಫಿ ಬೆಳೆಗಾರರ ೧೦ ಹೆಚ್.ಪಿ ಮತ್ತು ಅದಕ್ಕಿಂತ ಕಡಿಮೆ ಸಾಮರ್ಥ್ಯದ ನೀರಾವರಿ ಪಂಪ್‌ಸೆಟ್‌ಗಳ ವಿದ್ಯುತ್ ಬಿಲ್ ಅಸಲು ಮೊತ್ತ ಪಾವತಿಸಿದ ನಂತರ ಸಂಚಿತ ಬಡ್ಡಿಯನ್ನು ಮನ್ನಾ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಾತ್ವಿಕವಾಗಿ ಒಪ್ಪಿಗೆ ನೀಡಿದ್ದಾರೆ.
  ಕೆ. ಜೆ. ಜಾರ್ಜ್, ಇಂಧನ ಸಚಿವ

  ೧೦ ಹೆಚ್‌ಪಿ ಒಳಗೆ ಪಂಪ್‌ಸೆಟ್ ಬಳಕೆ ಮಾಡುವ ರೈತರಿಗೆ ರಾಜ್ಯ ಸರ್ಕಾರ ಉಚಿತ ವಿದ್ಯುತ್ ಸಂಪರ್ಕ ಘೋಷಣೆ ಮಾಡಿದೆ. ಆದರೆ ಇದರಲ್ಲಿ ಕಾಫಿ ಬೆಳೆಗಾರರನ್ನು ಮಾತ್ರ ಹೊರಗಿಟ್ಟಿದೆ. ಈ ರೀತಿಯ ನೀತಿ ಅನುಸರಿದೆ ಅದನ್ನು ೧೦ ಹೆಚ್‌ಪಿ ಪಂಪ್‌ಸೆಟ್‌ವರೆಗೆ ಬಳಕೆ ಮಾಡುವ ಸಣ್ಣ ಮತ್ತು ಮಧ್ಯಮ ವರ್ಗದ ಕಾಫಿ ಬೆಳೆಗಾರರಿಗೆ ವಿಸ್ತರಣೆ ಮಾಡಬೇಕು. ಇವರಿಗೂ ಉಚಿತ ವಿದ್ಯುತ್ ಕೊಡಬೇಕು.
  ಸೂರಜ್, ರೈತ ಸಂಘದ ಪ್ರಮುಖರು, ಸಿದ್ದಾಪುರ

  ಕೊಡಗಿನಲ್ಲಿ ರೈತರೇ ಕಾಫಿ ಬೆಳೆಯುತ್ತಿರುವುದು. ಕಾಫಿ ಉದ್ದಿಮೆಯಿಂದ ಸಾವಿರಾರು ಕೋಟಿ ರೂ. ಆದಾಯ, ವಿದೇಶಿ ವಿನಿಮಯ, ಹಾಗೂ ತೆರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಬರುತ್ತಿದೆ. ಅಕಾಲಿಕ ಮಳೆ, ಬರಗಾಲದಿಂದ ಸಂಕಷ್ಟದಲ್ಲಿರುವ ಸಣ್ಣ ಕಾಫಿ ಬೆಳೆಗಾರರ ೧೦ ಹೆಚ್.ಪಿ. ಪಂಪ್‌ಸೆಟ್‌ಗಳಿಗೆ ಷರತ್ತಿಲ್ಲದೆ ಉಚಿತ ವಿದ್ಯುತ್ ಕೊಡಲೇಬೇಕು. ರೈತರ ವಿದ್ಯುತ್ ಬಿಲ್ ಬಾಕಿ ಮನ್ನಾ ಮಾಡಬೇಕು. ತಪ್ಪಿದಲ್ಲಿ ಸರ್ಕಾರದ ವಿರುದ್ಧ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ.
  ಕೆ.ಎಂ. ದಿನೇಶ್, ಅಧ್ಯಕ್ಷ, ರಾಜ್ಯ ರೈತ ಸಂಘ, ಸೋಮವಾರಪೇಟೆ ತಾಲೂಕು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts