ಕುಷ್ಟಗಿ: ವೈಯಕ್ತಿಕ ಕಾಳಜಿ ಜತೆ ಮನೆಯ ಹಿರಿಯ ಕಾಳಜಿ ಮಾಡಬೇಕು ಎಂದು ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಕೆ.ಎಸ್.ರಡ್ಡಿ ಹೇಳಿದರು.
ಪಟ್ಟಣದ ಬಸವ ಭವನದಲ್ಲಿ ನಿವೃತ್ತ ನೌಕರರ ಸಂಘ, ಕೊಪ್ಪಳದ ಡಾ.ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹಾಗೂ ವಿನಾಯಕ ನೇತ್ರ ಸೇವಾ ಸಂಸ್ಥೆಯ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಿವೃತ್ತ ನೌಕರರ ಕುಟುಂಬ ಸದಸ್ಯರಿಗೆ ಹಾಗೂ ಹಿರಿಯ ನಾಗರಿಕರಿಗೆ ಕಣ್ಣಿನ ತಪಾಸಣೆ ಉಚಿತ ಶಿಬಿರದಲ್ಲಿ ಮಾತನಾಡಿದರು. ವಯಸ್ಸಾದಂತೆ ಕಣ್ಣಿನ ಸಮಸ್ಯೆ ಗಾಢವಾಗಿ ಕಾಡುತ್ತದೆ. ಸಮಸ್ಯೆ ಹೆಚ್ಚಾದಂತೆ ಮತ್ತೊಬ್ಬರ ಮೇಲೆ ಅವಲಂಬಿತರಾಗುವುದು ಸಹಜ. ಇಂಥ ಸಮಯದಲ್ಲಿ ಕಿರಿಯರು ಹಿರಿಯರ ಕಾಳಜಿ ಮಾಡಬೇಕು ಎಂದು ಸಲಹೆ ನೀಡಿದರು.
ಬಸವ ಸಮಿತಿ ತಾಲೂಕು ಅಧ್ಯಕ್ಷ ಶಿವಸಂಗಪ್ಪ ಬಿಜಕಲ್, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಟಿ. ಬಸವರಾಜ, ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ಎಚ್. ಹಿರೇಮಠ, ಕಾರ್ಯದರ್ಶಿ ಜೆ.ಶರಣಪ್ಪ, ಖಜಾಂಚಿ ಕಳಕಪ್ಪ ರಡ್ಡೇರ್, ನಿರ್ದೇಶಕ ಜಿ.ಡಿ. ಪಾಟೀಲ್, ಜಿಲ್ಲಾ ಸಂಚಾಲಕಿ ಜೆ.ಡಿ.ಉಪ್ಪಿನ್, ನೌಕರರ ಸಂಘದ ನಿರ್ದೇಶಕ ಬಾಲಾಜಿ ಬಳಿಗಾರ, ಡಾ.ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಡಾ.ಶ್ರುತಿ, ಪ್ರಮುಖರಾದ ಅಹ್ಮದ್ ಹುಸೇನ್, ಬಸವರಾಜ ಪಲ್ಲೇದ್ ಇತರರಿದ್ದರು.