ಸಂತ್ರಸ್ತ ವಿದ್ತಾರ್ಥಿಗಳಿಗೆ ಉಚಿತ ಶಿಕ್ಷಣ

ಮಡಿಕೇರಿ: ಕೊಡಗಿನಲ್ಲಿ ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿದ 37 ವಿದ್ಯಾರ್ಥಿಗಳಿಗೆ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಕಾಲೇಜಿನಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ದ ದಕ್ಷಿಣ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.

ಪ್ರಕೃತಿ ವಿಕೋಪ ಸಂದರ್ಭ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದವರಿಗಾಗಿ ಸೇವಾ ಕೇಂದ್ರದ ಆಶ್ರಯದಲ್ಲಿ ಬಾಲಭವನದಲ್ಲಿ ಶನಿವಾರ ಆಯೋಜಿಸಿದ್ದ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ವರ್ಷವೂ 37 ವಿದ್ಯಾರ್ಥಿಗಳಿಗೆ ತಮ್ಮ ಕಾಲೇಜಿನಲ್ಲಿ ಉಚಿತವಾಗಿ ಶಿಕ್ಷಣ ಮುಂದುವರಿಸಲಾಗುತ್ತದೆ. ಮುಂದಿನ ವರ್ಷದ ಸ್ಥಿತಿಗತಿ ನೋಡಿಕೊಂಡು ತೀರ್ಮಾನ ಮಾಡಲಾಗುವುದು ಎಂದರು.

ಪ್ರತಿಕೂಲ ಪರಿಸ್ಥಿತಿ ನಡುವೆಯೂ ಸ್ವಯಂ ಸೇವಕರು ಪ್ರಕೃತಿ ವಿಕೋಪದ ವೇಳೆ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವು ನೀಡಿದ್ದಾರೆ. ಅವರ ಪರಿಶ್ರಮ ಶ್ಲಾಘನೀಯ. ಯಾವುದೇ ರೀತಿಯ ಪ್ರತಿಕೂಲ ಪರಿಸ್ಥಿತಿ ಎದುರಾದಾಗ ನೆರವಿಗೆ ಮೊದಲು ಧಾವಿಸುವವರು ಸ್ವಯಂಸೇವಕರು. ಆರ್‌ಎಸ್‌ಎಸ್ ಕಾರ್ಯವೈಖರಿ ಬಗ್ಗೆ ಕೇಂದ್ರ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಪ್ರಕೃತಿ ವಿಕೋಪದಿಂದ ದನಿ ಮತ್ತು ಕೂಲಿ ಒಂದೇ ಕೊಠಡಿಯಲ್ಲಿ ದಿನ ಕಳೆಯುವ ಪರಿಸ್ಥಿತಿ ಬಂದಿತ್ತು. ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸುವುದು ಬೇಡ ಎಂದು ದೇವರನ್ನು ಪ್ರಾರ್ಥಿಸುತ್ತೇನೆ. ಪ್ರಕೃತಿ ವಿಕೋಪದಿಂದ ಎದುರಾದ ನೋವುಗಳನ್ನು ಮರೆತು ಮುಂದಿನ ಜೀವನ ಸಾಗಿಸುವತ್ತ ಗಮನ ಹರಿಸಬೇಕೆಂದು ಸಲಹೆ ನೀಡಿದರು.

ಸಮಾಜಕ್ಕಾಗಿ ಬದುಕು ಎಂಬ ಆರ್‌ಎಸ್‌ಎಸ್ ಸಂದೇಶದನ್ವಯ ಸ್ವಯಂಸೇವಕರು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. 10 ಪರಿಹಾರ ಕೇಂದ್ರ ತೆರೆಯುವ ಮೂಲಕ ಸಂತ್ರಸ್ತರಿಗೆ ಮೂರು ವಾರ ಆಶ್ರಯ ನೀಡಲಾಗಿತ್ತು. 37 ವಿದ್ಯಾರ್ಥಿಗಳಿಗೆ ವಿವೇಕಾನಂದ ವಿದ್ಯಾವರ್ಧಕ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಲಾಯಿತು ಎಂದು ಸೇವಾ ಕೇಂದ್ರದ ಸಂಚಾಲಕ ಟಿ.ಸಿ.ಚಂದ್ರನ್ ಹೇಳಿದರು.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಕಾರ್ಯದರ್ಶಿ ಡಾ.ಕೃಷ್ಣಭಟ್ ಇದ್ದರು. ಆರ್‌ಎಸ್‌ಎಸ್ ಮಂಗಳೂರು ವಿಭಾಗೀಯ ಕಾರ್ಯವಾಹ ನಾ.ಸೀತಾರಾಮ್, ಪ್ರಾಂತ ಕಾರ್ಯಕಾರಿಣಿ ಸದಸ್ಯ ಗಣಪತಿ ಹೆಗಡೆ, ಮಂಗಳೂರು ವಿಭಾಗೀಯ ಪ್ರಚಾರಕ ಉಮೇಶ್ ಪಾಲ್ಗೊಂಡಿದ್ದರು.