ಕೊಡಗಿನ ಪ್ರಕೃತಿ ವಿಕೋಪ ಸಂತ್ರಸ್ತ ಕುಟುಂಬದ 37 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

ಮಡಿಕೇರಿ: ಕೊಡಗಿನಲ್ಲಿ ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿದ ಕುಟುಂಬದ 37 ವಿದ್ಯಾರ್ಥಿಗಳಿಗೆ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಕಾಲೇಜಿನಲ್ಲಿ ಉಚಿತವಾಗಿ ಶಿಕ್ಷಣ ನೀಡಲಾಗುತ್ತಿದೆ ಎಂದು ಆರ್ ಎಸ್ ಎಸ್ ದಕ್ಷಿಣ ಕ್ಷೇತ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಪ್ರಭಾಕರ ಭಟ್ ಹೇಳಿದ್ದಾರೆ.

ಮಡಿಕೇರಿ ಬಾಲಭವನದಲ್ಲಿ ಸೇವಾ ಕೇಂದ್ರದ ಆಶ್ರಯದಲ್ಲಿ ಸಂತ್ರಸ್ತರಿಗೆ ಸಹಾಯ ಮಾಡಿದ ಸ್ವಯಂ ಸೇವಕರಿಗೆ ಧನ್ಯವಾದ ಹೇಳುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಈ ವರ್ಷವು ನಮ್ಮ ಕಾಲೇಜಿನಲ್ಲಿ ಉಚಿತವಾಗಿ ಶಿಕ್ಷಣ ನೀಡಲಾಗುವುದು. ಮುಂದಿನ ವರ್ಷವೂ ಅಗತ್ಯ ಇದ್ದಲ್ಲಿ ಉಚಿತ ಶಿಕ್ಷಣ ಮುಂದುವರಿಸಲಾಗುವುದು ಎಂದರು.

ಪ್ರತಿಯೊಂದು ಸಂದರ್ಭದಲ್ಲಿಯೂ ಸಂಕಷ್ಟ ಎದುರಾದಾಗ ಅಲ್ಲಿಗೆ ಮೊದಲು ಸ್ವಯಂ ಸೇವಕರು ತಲುಪುತ್ತಾರೆ. ಇದನ್ನು ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಕೂಡ ಮೆಚ್ಚಿದ್ದಾರೆ ಎಂದು ಹೇಳಿದರು.