ಉಡುಪಿ ಶ್ರೀಕೃಷ್ಣ ಮಠದಲ್ಲಿ ಉಚಿತ ಚಿಕಿತ್ಸಾಲಯ

>

ಗೋಪಾಲಕೃಷ್ಣ ಪಾದೂರು ಉಡುಪಿ
ಶ್ರೀಕೃಷ್ಣ ಮಠದ ಆನೆ ಲಾಯ ಪ್ರದೇಶದಲ್ಲಿ ಚಿಕಿತ್ಸಾಲಯದ ನೂತನ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಭಕ್ತರಿಗೆ 24/7 ವೈದ್ಯಕೀಯ ಸೇವೆ ಲಭ್ಯವಾಗಲಿದೆ.
ಮಠದಲ್ಲಿ ಸದ್ಯ ಆನೆಗಳಿಲ್ಲ. ಹೀಗಾಗಿ ಆನೆ ಲಾಯವಿದ್ದ 700 ಚದರಡಿ ಜಾಗದಲ್ಲಿ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಆಶಯದಂತೆ ಮಠಕ್ಕೆ ಬರುವ ಭಕ್ತರ ಆರೋಗ್ಯ ತಪಾಸಣೆ ಮತ್ತು ಶುಶ್ರೂಷೆಗೆ ಸುಸಜ್ಜಿತ ಕ್ಲಿನಿಕ್ ಆರಂಭಿಸಲಾಗುತ್ತಿದೆ. 10 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ಕೊಠಡಿಗಳ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ರಾಮ ನವಮಿ ಸಂದರ್ಭ ಉದ್ಘಾಟನೆಗೆ ಸಿದ್ಧವಾಗುತ್ತಿದೆ. ಗಾರೆ ಕೆಲಸ ಪೂರ್ಣಗೊಂಡಿದ್ದು, ನೆಲಹಾಸು, ವೈರಿಂಗ್ ಮತ್ತು ಪೇಂಟಿಂಗ್ ಕೆಲಸ ಬಾಕಿ ಇದೆ.

ವೈದ್ಯರ ಸೇವೆ:  ಕ್ಲಿನಿಕ್‌ನಲ್ಲಿ ಮೆಡಿಕಲ್ ರೂಂ, ವೈದ್ಯರ ಕೊಠಡಿ, ಲ್ಯಾಬ್, ರೋಗಿಗಳ ನಿರೀಕ್ಷಣಾ ಕೊಠಡಿಗಳಿವೆ. ದಿನವಿಡೀ ವೈದ್ಯರೊಬ್ಬರು ಚಿಕಿತ್ಸೆಗೆ ಲಭ್ಯರಿರುತ್ತಾರೆ. ಉಡುಪಿ ಸುತ್ತಮುತ್ತಲಿನ ವೈದ್ಯರು ವಾರಕ್ಕೊಮ್ಮೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಉಚಿತ ತಪಾಸಣೆಗೆ ಯಾವ ದಿನ ಯಾರು ವೈದ್ಯರು ಲಭ್ಯರಿರುತ್ತಾರೆ ಎಂಬುದನ್ನು ನೋಟಿಸ್ ಬೋರ್ಡ್‌ನಲ್ಲಿ ಮುಂಚಿತವಾಗಿಯೇ ತಿಳಿಸುವ ವ್ಯವಸ್ಥೆ ಮಾಡಲಾಗುತ್ತದೆ. ಪ್ರಸ್ತುತ ರಥಬೀದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಕೃಷ್ಣ ಚಿಕಿತ್ಸಾಲಯ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ.

ಮಠದಲ್ಲಿ ಎರಡು ಆನೆ ಲಾಯ: ಮಠದ ಪಟ್ಟದಾನೆ ಸುಭದ್ರೆ ಅನಾರೋಗ್ಯದಿಂದ ಸಕ್ರೆಬೈಲು ಆನೆ ಬಿಡಾರ ಸೇರಿದ ಬಳಿಕ ಆನೆ ಲಾಯ ಖಾಲಿಯಾಗಿದ್ದು, ಪೇಜಾವರ ಮಠದ ಪರ್ಯಾಯ ಸಮಯದಲ್ಲಿ ದಾನಿಯೊಬ್ಬರು ಮಠಕ್ಕೆ ನೀಡಿದ ಕುದುರೆಯನ್ನು ಆ ಜಾಗದಲ್ಲಿ ಕಟ್ಟಿ ಹಾಕಲಾಗುತ್ತಿದೆ. ಪಲಿಮಾರು ಪರ್ಯಾಯಕ್ಕೆ ಸುಭದ್ರೆ ಮತ್ತೆ ಉಡುಪಿಗೆ ಬಂದರೂ ನಗರ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ ಚಡಪಡಿಸಿದ ಕಾರಣ ಗೀತಾ ಮಂದಿರದ ಹಿಂಭಾಗದಲ್ಲಿ ಸ್ವಲ್ಪ ಸ್ಥಳಾವಕಾಶವಿರುವಲ್ಲಿ ಆನೆ ಲಾಯ ನಿರ್ಮಿಸಲಾಗಿತ್ತು. ಆದರೆ ಅದಕ್ಕೂ ಹೊಂದಿಕೊಳ್ಳದ ಕಾರಣ ಮತ್ತೆ ಸಕ್ರೆಬೈಲು ಆನೆ ಬಿಡಾರಕ್ಕೆ ವಾಪಸ್ ಕಳುಹಿಸಲಾಗಿತ್ತು.