ಉಚಿತ ಬಸ್‌ಪಾಸ್‌ಗೆ ರಸ್ತೆಗಿಳಿದ ವಿದ್ಯಾರ್ಥಿಗಳು

ಬೆಳಗಾವಿ: ಎಲ್ಲ ವರ್ಗದವರಿಗೂ ಉಚಿತ ಬಸ್‌ಪಾಸ್ ನೀಡುವಂತೆ ಆಗ್ರಹಿಸಿ ಗುರುವಾರ ನಗರದ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜು ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನಾ ರ‌್ಯಾಲಿ ನಡೆಸಿದರು. ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬೆಂಬಲ ಸೂಚಿಸಿದರು.

ರಾಜ್ಯ ಸರ್ಕಾರ 2018-19ನೇ ಸಾಲಿನಿಂದ ಎಸ್‌ಸಿ, ಎಸ್‌ಟಿ ಸೇರಿ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ, ಈಗ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್‌ಪಾಸ್ ನೀಡಿ ಉಳಿದವರಿಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.

ಪ್ರಸ್ತುತ ರಾಜ್ಯದಲ್ಲಿ 22 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಬಸ್‌ಪಾಸ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡುವುದರಿಂದ ಅತಿಹೆಚ್ಚು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಹಾಗಾಗಿ ಸರ್ಕಾರ ಕೂಡಲೆ ಉಚಿತ ಬಸ್‌ಪಾಸ್ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

ಎಬಿವಿಪಿ ಮಹಾನಗರ ಕಾರ್ಯದರ್ಶಿ ರೋಹಿತ ಉಮನಾಬಾದಿಮಠ, ಸಚಿನ ಹಿರೇಮಠ, ಶಿವಾನಂದ ಸೈದಾಪುರ, ಭೀಮಸೇನ ಪಪ್ಪು, ಬಸವರಾಜ ಜಂಟಿ, ಶಿವಾನಂದ ಕಾಂಬಳೆ, ಸಚಿನ ಬೂದಿಗೊಪ್ಪ ಸೇರಿ ನೂರಾರು ವಿದ್ಯಾರ್ಥಿಗಳು ಇದ್ದರು.

ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡುವುದರಿಂದ ಕಲಿಕೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಆರ್ಥಿಕ ಸಮಸ್ಯೆಯಿಂದ ಶಾಲೆಗೆ ಬರಲು ಹಿಂದೇಟು ಹಾಕುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ಅವಶ್ಯಕವಿದೆ. ಸರ್ಕಾರ ಕೂಡಲೆ ಉಚಿತ ಪಾಸ್ ವಿತರಣೆಗೆ ಕ್ರಮ ಕೈಗೊಳ್ಳಬೇಕು.

| ಅಭಯ ಪಾಟೀಲ ಶಾಸಕ

ಶಾಲೆ-ಕಾಲೇಜುಗಳಲ್ಲಿ ಓದುತ್ತಿರುವ ಎಲ್ಲ ವರ್ಗದ ಮಕ್ಕಳಿಗೆ ಸರ್ಕಾರ ಸೌಲಭ್ಯ ಕಲ್ಪಿಸಬೇಕು. ಒಬ್ಬರಿಗೆ ನೀಡಿ ಇನ್ನೊಬ್ಬರಿಗೆ ನೀಡದಿರುವುದು ಸರಿಯಲ್ಲ. ರಾಜ್ಯ ಸರ್ಕಾರ ಕೂಡಲೆ ಉಚಿತ ಬಸ್‌ಪಾಸ್ ವಿತರಿಸಲಿ.

| ಅನಿಲ ಬೆನಕೆ ಶಾಸಕ

Leave a Reply

Your email address will not be published. Required fields are marked *