ಮುಗ್ಧರ ಹೆಸರಿನಲ್ಲಿ ಜಿಎಸ್​ಟಿ ಧೋಖಾ

|ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ಬೋಗಸ್ ಬಿಲ್ ಸೃಷ್ಟಿಸಿ ಸರ್ಕಾರಕ್ಕೆ ಜಿಎಸ್​ಟಿ ಧೋಖಾ ಮಾಡುತ್ತಿದ್ದ ವಂಚಕರೀಗ ತಮ್ಮ ದಂಧೆಗೆ ಅಮಾಯಕರನ್ನು ಬಳಸಿಕೊಳ್ಳುತ್ತಿದ್ದಾರೆ. ಕೂಲಿ ಕಾರ್ವಿುಕರು, ಬಾರ್ ಸಪ್ಲೈಯರ್​ಗಳು, ಲಾರಿ ಚಾಲಕರಂತಹ ಮುಗ್ಧರ ಕೈಗೆ ಚಿಲ್ಲರೆ ಕಾಸಿಟ್ಟು ಅವರ ವೈಯಕ್ತಿಕ ದಾಖಲೆ ಪಡೆದುಕೊಳ್ಳುವ ವಂಚಕರು ಆ ದಾಖಲೆಗಳಿಂದ ನಕಲಿ ನೋಂದಣಿ ಮಾಡಿಸಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿರುವುದನ್ನು ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ತನಿಖೆ ಬಯಲಿಗೆಳೆದಿದೆ.

ತೆರಿಗೆ ಪದ್ಧತಿಯಲ್ಲಿ ಮಹತ್ವದ ಸುಧಾರಣೆ ತರುವ ಉದ್ದೇಶದಿಂದ ದೇಶದಲ್ಲಿ ಜಿಎಸ್​ಟಿ ವ್ಯವಸ್ಥೆ ಜಾರಿಗೊಳಿಸಿದ ಬಳಿಕ ವ್ಯಾಟ್​ನಿಂದ 5,25,200 ಮಂದಿ ಜಿಎಸ್​ಟಿಗೆ ವರ್ಗಾವಣೆಗೊಂಡಿದ್ದಾರೆ. ಹೊಸದಾಗಿ 2,65,015 ಮಂದಿ ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ನಕಲಿ ಕಂಪನಿ, ನೋಂದಣಿಗಳೇ ಸಾವಿರಾರು ಸಂಖ್ಯೆ ಯಲ್ಲಿರುವುದು ತನಿಖೆಯಲ್ಲಿ ಸಾಬೀತಾಗಿದೆ.

ಅಮಾಯಕರ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ವಿದ್ಯುತ್ ಬಿಲ್, ಮನೆ ಅಗ್ರಿಮೆಂಟ್ ಇನ್ನಿತರ ದಾಖಲೆ ಪಡೆದು ನಕಲಿ ಜಿಎಸ್​ಟಿ ಖಾತೆ ತೆರೆದು ಸರಕು ಮತ್ತು ಸೇವೆ ನೀಡದೆಯೇ ನಕಲಿ ಬಿಲ್ ಸೃಷ್ಟಿಸಿ ಡೀಲರ್​ಗಳಿಗೆ ಕೊಟ್ಟು ಶೇ.5ರಿಂದ 7 ಕಮಿಷನ್ ಪಡೆಯುತ್ತಿದ್ದಾರೆ. ನಕಲಿ ಬಿಲ್ ಪಡೆದ ಡೀಲರ್​ಗಳು ಆದಾಯ ತೆರಿಗೆ ಪಾವತಿ ವೇಳೆ ಶೇ.18 ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಿನಾಯಿತಿ ಸಲ್ಲಿಸಿ ವಿನಾಯಿತಿ ಅಥವಾ ರೀಫಂಡ್ ಮಾಡಿಕೊಳ್ಳುತ್ತಿದ್ದಾರೆ. ಸತ್ಯಾಂಶ ಗೊತ್ತಾಗಿ ಜಿಎಸ್​ಟಿ ನೋಂದಣಿ ದಾಖಲೆಗಳ ಜಾಡು ಹಿಡಿದಾಗ ಅಮಾಯಕರು ಸೆರೆ ಸಿಕ್ಕುತ್ತಿದ್ದಾರೆ. ಇವರ ದಾಖಲೆ ಬಳಸಿ ನಕಲಿ ಜಿಎಸ್​ಟಿ ಖಾತೆ ತೆರೆದು ವಂಚಿಸಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಸೂಚನೆ ನೀಡಿದ್ದಾರೆ.

ಕೂಲಿಗಾರ ಕೋಟ್ಯಂತರ ವ್ಯವಹಾರ!

ಕೂಲಿ ಕಾರ್ವಿುಕನಿಗೆ 10 ಸಾವಿರ ರೂ. ಕೊಟ್ಟು ಆತನ ಪಾನ್, ಆಧಾರ್, ಮನೆ ಅಗ್ರಿಮೆಂಟ್, ಫೋಟೋ ಮತ್ತು ದಾಖಲೆಗೆ ಸಹಿ ಪಡೆದು ಆತನ ಹೆಸರಿನಲ್ಲಿ ಜಿಎಸ್​ಟಿ ನೋಂದಣಿ ಮಾಡಿದ ವಂಚಕರು ನೂರಾರು ಕೋಟಿ ರೂ. ವ್ಯವಹಾರ ನಡೆಸಿದ್ದಾರೆ. ಅಲ್ಲದೆ, ಕಾರ್ವಿುಕನ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು 150 ಖಾಲಿ ಚೆಕ್​ಗಳಿಗೆ ಸಹಿ ಪಡೆದು ಖಾತೆಗೆ ಬರುತ್ತಿದ್ದ ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ. ನೂರಾರು ಕೋಟಿ ರೂ. ವ್ಯವಹಾರ ನಡೆಸಿ ತೆರಿಗೆ ಪಾವತಿಸದೆ ಇದ್ದಾಗ ಅನುಮಾನ ಬಂದು ಬ್ಯಾಂಕ್ ಖಾತೆದಾರನ ಬೆನ್ನತ್ತಿದಾಗ ಕೂಲಿ ಕಾರ್ವಿುಕ ಎಂದು ಗೊತ್ತಾಗಿದೆ. ‘10 ಸಾವಿರ ರೂ. ಕೊಟ್ಟು ದಾಖಲೆ ಕೇಳಿದರು. ಕೊಟ್ಟೆ. ಆಗಾಗ 1 ಅಥವಾ 2 ಸಾವಿರ ಕೊಟ್ಟು ಖಾಲಿ ಚೆಕ್​ಗೆ ಸಹಿ ಮಾಡಿಸಿಕೊಳ್ಳುತ್ತಿದ್ದರು’ ಎಂದು ಆತ ವಿಚಾರಣೆಯಲ್ಲಿ ಹೇಳಿಕೆ ನೀಡಿದ್ದಾನೆ.

ಮೃತನ ಹೆಸರಲ್ಲಿ ಖಾತೆ

ಮೃತ ವ್ಯಾಪಾರಿಯ ಪಾನ್, ಐಡಿ ಕಾರ್ಡ್, ಬ್ಯಾಂಕ್ ಬುಕ್, ಫೋಟೋ ಇನ್ನಿತರ ದಾಖಲೆ ಬಳಸಿ ಜಿಎಸ್​ಟಿ ನೋಂದಣಿ ಮಾಡಿ ಕೋಟ್ಯಂತರ ರೂ. ವ್ಯವಹಾರ ನಡೆಸಿರುವ ಪ್ರಕರಣ ತನಿಖೆ ವೇಳೆ ಬಹಿರಂಗವಾಗಿದೆ. ಜಿಎಸ್​ಟಿ ಆಂಡ್ 3ಬಿ ಪಾವತಿಸದ ಖಾತೆಯ ಮೇಲೆ ಅನುಮಾನ ಬಂದು ಖಾತೆದಾರನ ವಿಳಾಸ ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ ಖಾತೆದಾರ ಸತ್ತು 4 ವರ್ಷ ಕಳೆದಿರುವುದು ಬೆಳಕಿಗೆ ಬಂದಿದೆ.

ಕ್ರಿಮಿನಲ್ ಕೇಸ್ ಬೀಳುತ್ತೆ ಹುಷಾರ್

ಹಣಕ್ಕಾಗಿ ಪಾನ್, ಆಧಾರ್, ಮನೆ ಅಗ್ರಿಮೆಂಟ್, ವಿದ್ಯುತ್ ಬಿಲ್ ಇನ್ನಿತರೆ ದಾಖಲೆಗಳನ್ನು ಜಿಎಸ್​ಟಿ ವಂಚಕರಿಗೆ ಮಾರಾಟ ಮಾಡಿದರೆ ಅಂತಹವರ ವಿರುದ್ಧವೂ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.