More

  ಅಧಿಕಾರ ಕೇಂದ್ರವನ್ನೇ ಸುತ್ತುವ ಯುಪಿಎಸ್​ಸಿ ಆಯ್ಕೆ; ಹಿಂದಿ ಸೇರಿ ಭಾರತೀಯ ಭಾಷೆಗಳಿಗೆ ವಂಚನೆ

  ಮೇಲ್ನೋಟಕ್ಕೆ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್​ಸಿ) ಪರೀಕ್ಷೆ ಪಾರದರ್ಶಕವಾಗಿ, ಸಮಾನವಾಗಿ ಕಂಡರೂ ಒಟ್ಟಾರೆ ಪರೀಕ್ಷಾ ವಿಧಾನ ಹಾಗೂ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ರೀತಿಯಲ್ಲೇ ಸ್ವಹಿತಾಸಕ್ತಿಗೆ ಅನುಗುಣವಾಗಿರುತ್ತವೆ ಎಂಬ ಬಲವಾದ ಆರೋಪಗಳಿವೆ.

  ಭಾರತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡನ್ನೂ ಪರಿಗಣಿಸಿದರೆ ಒಟ್ಟಾರೆ ಸರ್ಕಾರಿ ನೌಕರರ ಸಂಖ್ಯೆ ಕೇವಲ ಶೇ.3.5. ಭಾರತದಲ್ಲಿ ದೀರ್ಘಕಾಲಿಕವಾಗಿ ಉದ್ಯಮ ನಡೆಸಿಕೊಂಡು ಹೋಗುತ್ತಿರುವವರ ಸಂಖ್ಯೆ ಸುಮಾರು ಶೇ.5 ದಾಟುವುದಿಲ್ಲ. ಸರ್ಕಾರಿ ನೌಕರರು ಹಾಗೂ ಉದ್ಯಮಿಗಳೆರಡನ್ನೂ ಸೇರಿಸಿದರೆ ಶೇ.10ನ್ನೂ ದಾಟುವುದಿಲ್ಲ. ಆದರೆ 2011-14ರವರೆಗೆ ಯುಪಿಎಸ್​ಸಿ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪೈಕಿ ಶೇ.55 ಸರ್ಕಾರಿ ಅಧಿಕಾರಿಗಳ, ನೌಕರರ ಮಕ್ಕಳು. ಶೇ.35 ಉದ್ಯಮಿಗಳ ಮಕ್ಕಳು. ಶೇ.10 ಅಭ್ಯರ್ಥಿಗಳು ಮಾತ್ರ ಕೃಷಿ ಸೇರಿ ಇನ್ನಿತರ ಕಾಯಕ ನಿರ್ವಹಿಸುತ್ತಿರುವವರ ಮಕ್ಕಳು ಎಂಬುದು ಮೇಲಿನ ಆರೋಪಕ್ಕೆ ಪುಷ್ಠಿ ನೀಡುತ್ತದೆ.

  ಕೋಚಿಂಗ್ ಸೆಂಟರ್​ಗಳ ಕೈವಾಡ: ಉದ್ಯಮಿಗಳು ಹಾಗೂ ಕೇಂದ್ರ ಸರ್ಕಾರದ ಆಯಕಟ್ಟಿನ ಸ್ಥಳಗಳಲ್ಲಿರುವ ಅಧಿಕಾರಿಗಳು ತಮ್ಮ ಮಕ್ಕಳು ಯುಪಿಎಸ್​ಸಿಯಲ್ಲಿ ಉನ್ನತ ಮಟ್ಟದಲ್ಲಿ ತೇರ್ಗಡೆ ಹೊಂದಲು ವಿವಿಧ ಮಾರ್ಗ ಅನುಸರಿಸುತ್ತಾರೆ. ಈ ಅಭ್ಯರ್ಥಿಗಳು ಪ್ರಮುಖವಾಗಿ ನಗರ ಪ್ರದೇಶದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತು ಇಂಜಿನಿಯರಿಂಗ್, ಎಂಬಿಬಿಎಸ್​ನಂತಹ ಶಿಕ್ಷಣ ಪಡೆದಿರುತ್ತಾರೆ. ಐಎಎಸ್ ಕೋಚಿಂಗ್ ಸೆಂಟರ್​ಗಳಿಗೆ ಲಕ್ಷಾಂತರ ರೂ. ಶುಲ್ಕ ನೀಡಲು ಹಾಗೂ ದೆಹಲಿಯಲ್ಲೇ ವಾಸ್ತವ್ಯ ಹೂಡಲು ಶಕ್ತರಾಗಿರುತ್ತಾರೆ. ವಿವಿಧ ವಿಶ್ವವಿದ್ಯಾಲಯಗಳ ಪ್ರೊಫೆಸರ್ಸ್ ಜತೆ ಸೇರಿಕೊಂಡು ಪರೀಕ್ಷೆ ಪ್ರಶ್ನೆಪತ್ರಿಕೆ, ಸಿಲಬಸ್ ಸಿದ್ಧಪಡಿಸುತ್ತಾರೆ. ತಮ್ಮ ಮಕ್ಕಳು ವ್ಯಾಸಂಗ ಮಾಡುತ್ತಿರುವ ಕೋಚಿಂಗ್ ಸೆಂಟರ್​ಗಳಲ್ಲಿ ಮಾಕ್ ಟೆಸ್ಟ್ ಅಥವಾ ಅಭ್ಯಾಸದ ಹೆಸರಿನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿರುತ್ತಾರೆ. ಇತರ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಆಗá-ವುದನ್ನು ತಡೆಯಲು ಇಂಗ್ಲಿಷನ್ನು ಸಾಧನವನ್ನಾಗಿ ಬಳಸಲಾಗುತ್ತದೆ. ಕೋಚಿಂಗ್ ಸೆಂಟರ್​ಗಳಿಗೆ ಹಣ ನೀಡಲಾಗದ ಗ್ರಾಮೀಣ ಅಭ್ಯರ್ಥಿಗಳು ತಮಗೆ ಸಾಮರ್ಥ್ಯ ಇಲ್ಲವೆಂದು ಬೇಸರಪಟ್ಟುಕೊಳ್ಳುತ್ತಾರೆ.

  ಹಿಂದಿ ಭಾಷೆಗೂ ವಂಚನೆ: ಇಂಗ್ಲಿಷ್​ಗೆ ಮಾತ್ರ ಮಣೆ ಹಾಕುವ ಈ ಲಾಬಿಯಲ್ಲಿ ಹಿಂದಿ ಭಾಷೆಗೂ ತಾತ್ಸಾರ ತೋರಲಾಗುತ್ತದೆ. ಆದರೆ, ಅಧಿಕೃತ ಭಾಷೆಯ ಸ್ಥಾನ ಮಾನ ನೀಡಿರುವುದರಿಂದ ಆ ಭಾಷೆಯಲ್ಲೂ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಲೇಬೇಕಾದ ಅನಿವಾರ್ಯತೆ ಇದೆ. ಆದರೆ, ಅದರಲ್ಲೂ ಸಮಸ್ಯೆ ಉಂಟುಮಾಡುವ ಸಲುವಾಗಿ ಇಂಗ್ಲಿಷ್ ಪ್ರಶ್ನೆಪತ್ರಿಕೆಯನ್ನು ಹಿಂದಿಗೆ ತಪ್ಪಾಗಿ ಭಾಷಾಂತರ ಮಾಡಲಾಗುತ್ತದೆ. ಈ ಬಗ್ಗೆ ಅನೇಕ ಶಾಸಕರು, ಸಂಸದರು ಧ್ವನಿ ಎತ್ತಿದ ನಂತರದಲ್ಲಿ ಕೇಂದ್ರ ಸರ್ಕಾರ ಪುರುಷೋತ್ತಮ್ ಅಗರ್ವಾಲ್ ಸಮಿತಿಯನ್ನು ತನಿಖೆ ನಡೆಸಲು ರಚಿಸಿತ್ತು.

  ಪ್ರಧಾನಿ ಮಾತಿಗೂ ಬೆಲೆಯಿಲ್ಲ

  ಯುಪಿಎಸ್​ಸಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದನ್ನು 2014ರಲ್ಲಿ ಪ್ರಧಾನಿ ಗಮನಕ್ಕೆ ಮನುಕುಮಾರ್ ರಾಜೆ ಅರಸ್ ತಂದಿದ್ದರು. ಈ ಎಲ್ಲ ಸಮಸ್ಯೆಗಳು ಪರಿಹಾರ ಆಗುವವರೆಗೆ ಪ್ರಧಾನಿ ಕಾರ್ಯಾಲಯದ ಸಚಿವರ ಜತೆಗೆ ವ್ಯವಹಾರ ಮುಂದುವರಿಸುವಂತೆ ಪ್ರಧಾನಿ ಸೂಚಿಸಿದ್ದರು. ಆದರೆ, ಐದು ವರ್ಷ ಕಳೆದರೂ ಇಲ್ಲಿವರೆಗೆ ಪ್ರಧಾನಿ ಕಾರ್ಯಾಲಯ ಈ ಬಗ್ಗೆ ಆಸಕ್ತಿ ತೋರಿಲ್ಲ. ‘ನೀವು ಹೇಳುತ್ತಿರುವುದು ತಾಂತ್ರಿಕ ವಿಚಾರವಾಗಿದ್ದು, ಪ್ರಧಾನಿಗೆ ಇವು ಅರ್ಥವಾಗುವುದಿಲ್ಲ. ಅವರ ಬಳಿ ಮಾತನಾಡಿದರೆ ನಿಮ್ಮ ಹಾಗೂ ಅವರ ಇಬ್ಬರ ಸಮಯವೂ ವ್ಯರ್ಥ’ ಎನ್ನುತ್ತಾರೆ ಎಂದು ಮನುಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

  ಇಂಗ್ಲಿಷ್​ಗೆ ಮಣೆ ಏಕೆ?

  ವಿಶ್ವ ಸಂಸ್ಥೆ ಗುರುತಿಸಿರುವ 195 ದೇಶಗಳಲ್ಲಿ 10ರ ಮಾತೃಭಾಷೆ ಮಾತ್ರ ಇಂಗ್ಲಿಷ್. ಈ 10 ದೇಶ ಸೇರಿ ಕೇವಲ 35 ದೇಶಗಳಲ್ಲಿ ಇಂಗ್ಲಿಷ್ ಪ್ರಾಥಮಿಕ ಭಾಷೆ. ಇನ್ನುಳಿದ 160 ದೇಶಗಳಲ್ಲಿ ಇಂಗ್ಲಿಷನ್ನು ಶಿಕ್ಷಣದ ಮಾಧ್ಯಮವನ್ನಾಗಿ ಬಳಸುತ್ತಿಲ್ಲ. ಈ ಪೈಕಿ 130 ದೇಶಗಳಲ್ಲಿ ಇಂಗ್ಲಿಷ್ ಭಾಷೆಯನ್ನು ಆಡಳಿತಕ್ಕಾಗಿಯೂ ಬಳಕೆ ಮಾಡುತ್ತಿಲ್ಲ, ಉಳಿದ 30 ದೇಶಗಳು ಇಂಗ್ಲಿಷ್ ಭಾಷೆಯನ್ನು ದ್ವಿತೀಯ ಭಾಷೆಯನ್ನಾಗಿ ಆಡಳಿತಕ್ಕಾಗಿ ಬಳಕೆ ಮಾಡುತ್ತಿದ್ದರೂ ಭಾರತ ಹಾಗೂ ಪಾಕಿಸ್ತಾನ ಹೊರತುಪಡಿಸಿ ಎಲ್ಲಿಯೂ ಇಂಗ್ಲಿಷನ್ನು ಅಧಿಕೃತ ಭಾಷೆಯೆಂದು ಪರದೇಶದ ಭಾಷೆಗೆ ಸ್ಥಾನಮಾನ ನೀಡಿಲ್ಲ. ವಿಪರ್ಯಾಸವೆಂದರೆ, ಭಾರತದಲ್ಲಿ 6 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ಸ್ಥಳೀಯ ಭಾಷೆಯನ್ನು ಪರಿಗಣಿಸದೆ ಇಂಗ್ಲಿಷನ್ನು ಅಧಿಕೃತ ಭಾಷೆಯೆಂದು ಘೊಷಿಸಲಾಗಿದೆ. ಭಾರತದಲ್ಲಿನ ಶೇ.20 ಮೇಲ್ವರ್ಗದ ಜನರಿಗಾಗಿ, ಇಂಗ್ಲಿಷ್​ನಲ್ಲೇ ಆಡಳಿತ ಮಾಡಲಾಗುತ್ತಿದೆ. ಶೇ.80 ಜನರ ಮೇಲೆ ತಮಗೆ ಅರಿವಿರದ ಪರದೇಶದ ಭಾಷೆಯನ್ನು ಬಲವಂತವಾಗಿ ಹೇರಿಕೆ ಮಾಡುವುದು ಎಷ್ಟು ಸರಿ? ಎನ್ನುತ್ತಾರೆ ಯುಪಿಎಸ್​ಸಿ ಪರೀಕ್ಷೆಗಳಲ್ಲಿ ಐದು ವರ್ಷದಿಂದ ಹೋರಾಟ ನಡೆಸುತ್ತಿರುವ ಮನುಕುಮಾರ್ ರಾಜೆ ಅರಸ್.

  | ರಮೇಶ ದೊಡ್ಡಪುರ ಬೆಂಗಳೂರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts