ಯಲ್ದೂರು ಹೋಬಳಿಯ ಚನ್ನಹಳ್ಳಿ ರೈತ ಮಂಜುನಾಥನಿಗೆ ವ್ಯಾಪಾರಿಯಿಂದ ಬೆದರಿಕೆ
ಶ್ರೀನಿವಾಸಪುರ: ಮಾರುಕಟ್ಟೆಯಲ್ಲಿ ರೈತ ಬೆಳೆದ ಬೆಳೆಗೆ ಉತ್ತಮ ಬೆಲೆ ಇಲ್ಲದಿರುವುದು ಒಂದೆಡೆಯಾದರೆ, ಹವಮಾನ ವೈಪರೀತ್ಯದಿಂದ ಫಸಲು ನಾಶವಾಗುವುದು ಮತ್ತೊಂದು ಕಡೆ. ಇನ್ನು ಒಂದು ಹೆಜ್ಜೆ ಮುಂದೆ ಹೋದರೆ ರೈತರ ಮುಗ್ಧ ಮನಸನ್ನೇ ಬಂಡವಾಳ ಮಾಡಿಕೊಂಡ ವ್ಯಾಪಾರಿಗಳ ಮೋಸದಾಟ. ಹೀಗೆ ರೈತ ಒಂದಲ್ಲ ಒಂದು ರೀತಿಯ ಸಂಕಷ್ಟಗಳಿಗೆ ಸಿಲುಕುವುದು ಸಾಮಾನ್ಯವಾಗಿದೆ.
ತಾಲೂಕಿನ ಯಲ್ದೂರು ಹೋಬಳಿಚನ್ನಹಳ್ಳಿಯ ರೈತ ಮಂಜುನಾಥಗೌಡ ಅವರು ಒಂದು ಎಕರೆ ನಾಲ್ಕು ಗುಂಟೆಯಲ್ಲಿ ಬೆಳೆದಿದ್ದ ಸಿಹಿಜೋಳವನ್ನು ಇತ್ತಿಚೆಗೆ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿದ್ದು, ಕೆಜಿಗೆ 15ರೂ.ನಂತೆ ನೂರು ಕೆಜಿ ಜೋಳ ಕಟಾವು ಮಾಡಿಕೊಂಡು ಹೋದವನು ಹಣ ನೀಡದೆ ವಂಚಿಸಿರುವುದು ಬೆಳಕಿಗೆ ಬಂದಿದೆ.
ಮಾಲೀಕ ಮಂಜುನಾಥ್ಗೌಡ ಮಾತನಾಡಿ, ಕಳೆದ 8 ದಿನಗಳ ಹಿಂದೆ ಕೆಜಿಗೆ 15 ರೂ.ನಂತೆ ವ್ಯಾಪಾರ ಮಾಡಿಕೊಂಡು, ನೂರು ಕೆಜಿ ಸಿಹಿ ಜೋಳವನ್ನು ಕಟಾವು ಮಾಡಿಕೊಂಡು ಹೋದವರು ಈವರೆಗೂ ಹಣ ಕೊಡದೆ ವಂಚಿಸಿದ್ದಾರೆ ಎಂದು ತಿಳಿಸಿದರು.
ಬದಲಿ ವ್ಯಾಪಾರಿಗಳ ಬಗ್ಗೆ ಎಚ್ಚರವಿರಲಿ: ಬೇರೆ ಬೇರೆ ವ್ಯಾಪಾರಿಗಳು ಜಮೀನಿಗೆ ಬಂದು ಬಣ್ಣ ಬಣ್ಣದ ಮಾತುಗಳನ್ನಾಡಿ ವಂಚಿಸುತ್ತಿದ್ದಾರೆ. ಹೀಗೆ ಬಣ್ಣದ ಮಾತುಗಳನ್ನಾಡಿಕೊಂಡ ಬಂದ ಇವರು, ಐದು ದಿನಗಳ ಹಿಂದೆಯೇ ಕಟಾವು ಮಾಡಬೇಕಿತ್ತು, ಈಗಈ ಜೋಳ ಮಾರುಕಟ್ಟೆಯಲ್ಲಿ ಮಾರಾಟವಾಗುವುದಿಲ್ಲ ಎಂದು ವಾಪಸ್ ಹೋಗುತ್ತಾರೆ, ಆಗ ಮತ್ತೆ ಇವರನ್ನು ಕರೆದು ಕೆಜಿಗೆ 15 ರೂ. ನಿಗದಿಪಡಿಸಿ 100 ಕೆಜಿ ನೀಡಿದ್ದೇನೆ. ಈಗ ಹಣ ಕೊಡದೆ ಸತಾಯಿಸುತ್ತಿದ್ದು, 80 ಸಾವಿರ ರೂ.ನಷ್ಟವಾಗಿದೆ. ವ್ಯಾಪಾರಿಗಳು ಯಾರೇ ಆದರೂ ಸಲು ಮಾರಾಟ ಮಾಡಿದ ವೇಳೆ ಕಟಾವು ಮಾಡಿ ಹಣ ಕೊಟ್ಟು ಹೋಗುವಂತೆ ಕಡ್ಡಿ ಮುರಿದಂತೆ ಹೇಳಬೇಕು. ವ್ಯವಹರಿಸುವಾಗಎಚ್ಚರಿಕೆವಹಿಸಬೇಕು. ನನಗಾದ ಸ್ಥಿತಿ ಬೇರಾವ ರೈತರಿಗೂ ಆಗದಿರಲಿ ಎಂದು ಮಾಲೀಕರು ಕಣ್ಣೀರು ಹಾಕಿದರು.
ವಾರ ಕಳೆದರೂ ಬರದ ಹಣ: ಕರೆ ಮಾಡಿ ಹಣ ನೀಡುವಂತೆ ಕೇಳಿದರೆ ಇಂದು ಬರುತ್ತೇನೆ, ನಾಳೆ ಬರುತ್ತೇನೆ ಎಂದು ಸಬೂಬು ಹೇಳುತ್ತಾ ಒಂದು ವಾರ ದೂಡಿದ್ದಾನೆ. 8 ದಿನ ಕಳೆದ ನಂತರ ಖರೀದಿ ಮಾಡಿದ್ದ ದರಕ್ಕಿಂತ ಈಗ ಬೆಲೆ ಕಡಿಮೆಯಾಗಿದೆ, ನನಗೆ ನಿಮ್ಮ ಮಾಲು ಬೇಡ ಎಂದು ಹೇಳುತ್ತಿದ್ದಾನೆ. ಖರೀದಿ ಮಾಡಿ ಕಟಾವು ಮಾಡಿಕೊಂಡ ಮಾಲಿಗೂ ಹಣ ನೀಡದೆ ದಬಾಯಿಸುವುದರ ಜತೆಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ದೂರಿದರು.
ಒಂದಷ್ಟು ಕಾಸು ಸಂಪಾದನೆ ಉದ್ದೇಶದಿಂದ ಸಾಲ ಮಾಡಿ ಬೆಳೆ ಹಾಕಿದೆ. ನೆರೆಯ ಜಮೀನಿನವರಿಂದ ನೀರು ಪಡೆದು ಬೆಳೆ ಬೆಳೆದೆ. ಉತ್ತಮ ಸಲು ಬಂದಿದೆ. ಆದರೆ, ಬದಲಿ ವ್ಯಾಪಾರಿಯಿಂದ ಮೋಸವಾಗಿದೆ. ಎಲ್ಲರೂ ಎಚ್ಚೆತ್ತುಕೊಳ್ಳಬೇಕು.
ಮಂಜುನಾಥಗೌಡ ಚನ್ನಹಳ್ಳಿ ಯುವ ರೈತ.