ಫ್ರಾನ್ಸ್​ ಹಿಂಸಾಚಾರ ನಿಯಂತ್ರಣಕ್ಕೆ: 1700 ಜನರನ್ನು ಬಂಧಿಸಿದ ಪೊಲೀಸರು

ಪ್ಯಾರಿಸ್: ಫ್ರಾನ್ಸ್​ನಲ್ಲಿ ಇಂಧನ ಮೇಲೆ ತೆರಿಗೆ ಹೆಚ್ಚಳ ಮತ್ತು ಆರ್ಥಿಕ ನೀತಿಯನ್ನು ವಿರೋಧಿಸಿ ಅಲ್ಲಿನ ಜನರು ನಡೆಸುತ್ತಿದ್ದ ಯೆಲ್ಲೋ ವೆಸ್ಟ್​ (ಹಳದಿ ಕೋಟ್​) ಪ್ರತಿಭಟನೆಯಿಂದ ಉಂಟಾಗಿದ್ದ ಬಿಕ್ಕಟ್ಟಿನ ಪರಿಸ್ಥಿತಿ ಕ್ರಮೇಣ ತಹಬದಿಗೆ ಬರುತ್ತಿದೆ. ಹಳದಿ ಜಾಕೆಟ್​ಗಳನ್ನು ಧರಿಸಿ ಚಳವಳಿಗಳನ್ನು ನಡೆಸುತ್ತಿದ್ದ ಗುಂಪುಗಳನ್ನು ನಿಯಂತ್ರಿಸಲು ಪೊಲೀಸರು ಸತತ ಪ್ರಯತ್ನ ಪಡುತ್ತಿದ್ದಾರೆ ಎನ್ನಲಾಗಿದೆ.

ಫ್ರಾನ್ಸ್​ನಲ್ಲಿ ಇಂಧನದ ಮೇಲೆ ತೆರಿಗೆ ಹೆಚ್ಚಳ ಮಾಡಿದ್ದರಿಂದ ಆಕ್ರೋಶಗೊಂಡಿದ್ದ ಅಲ್ಲಿನ ಜನರು ಮೂರ್ನಾಲ್ಕು ವಾರಗಳಿಂದ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಅದು ಕ್ರಮೇಣ ಹಿಂಸಾಚಾರಕ್ಕೆ ತಿರುಗಿತ್ತು. ಮುಸುಕು ಹಾಕಿಕೊಂಡು ಪೆಟ್ರೋಲ್​ಬಾಂಬ್​, ಕಲ್ಲುಗಳನ್ನು ಎಸೆಯುತ್ತಿದ್ದ, ಕಬ್ಬಿಣದ ಸಲಾಕೆ, ಕೊಡಲಿಗಳಿಂದ ದಾಳಿ ನಡೆಸುತ್ತಿದ್ದ ಚಳವಳಿಕಾರರ ವಿರುದ್ಧ ಪೊಲೀಸರೂ ಟಿಯರ್​ ಗ್ಯಾಸ್​ ಮತ್ತು ನೀರಿನ ಫಿರಂಗಿಗಳನ್ನು ಹಾರಿಸಿದ್ದರು. ಈಗ ಅಲ್ಲಿನ ರಸ್ತೆಗಳು ನಿಧಾನವಾಗಿ ಶಾಂತಸ್ಥಿತಿಗೆ ಮರಳುತ್ತಿವೆ. ಪರಿಸ್ಥಿತಿ ನಿಯಂತ್ರಣಗೊಳ್ಳುತ್ತಿದೆ ಎಂದು ಗೃಹ ಸಚಿವ ಕ್ರಿಸ್ಟೋಫೆ ಕ್ಯಾಸ್ಟಾನರ್ತ ತಿಳಿಸಿದ್ದಾರೆ.

ದೇಶಾದ್ಯಂತ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಈಗಾಗಲೇ ಪೊಲೀಸರು ಸುಮಾರು 1700 ಜನರನ್ನು ಬಂಧಿಸಿದ್ದಾರೆ. ಅವರಲ್ಲಿ ಸುಮಾರು 1200 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಗಲಭೆಯಲ್ಲಿ 179ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಪ್ಯಾರಿಸ್​ನಲ್ಲಿ 920ರನ್ನು ಬಂಧಿಸಲಾಗಿತ್ತು. ಅವರಲ್ಲಿ 620 ಮಂದಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಚಾಂಪ್ಸ್ ಎಲಿಸೀಸ್​ನಲ್ಲಿರುವ ಮ್ಯೂಸಿಯಂ, ಅಂಗಡಿಗಳು ಭಾನುವಾರ ತೆರೆದಿವೆ ಎಂದು ಗೃಹಸಚಿವಾಲಯ ತಿಳಿಸಿದೆ.

ಕಳೆದ ಶನಿವಾರಕ್ಕೆ ಹೋಲಿಸಿದರೆ ಬಂಧಿತರ ಸಂಖ್ಯೆ ಈ ಭಾನುವಾರಕ್ಕೆ ಹೆಚ್ಚಾಗಿದೆ. ಕಳೆದ ವಾರ ನಡೆದ ಹಿಂಸಾಚಾರದಲ್ಲಿ ಹಲವು ರಾಷ್ಟ್ರೀಯ ಸ್ಮಾರಕಗಳು ನಾಶವಾಗಿವೆ. ಅನೇಕ ಕಾರುಗಳನ್ನೂ ಸುಡಲಾಗಿತ್ತು. ದೇಶಾದ್ಯಂತ ನಿಯೋಜಿಸಲಾಗಿದ್ದ 10ಸಾವಿರಕ್ಕೂ ಹೆಚ್ಚು ಪೊಲೀಸರು ಪ್ರತಿಭಟನೆ ನಡೆಯಬಹುದಾದ ಸ್ಥಳಕ್ಕೆ ತೆರಳಿ ಅಲ್ಲಿ ಗುಂಪಿನಲ್ಲಿದ್ದವರನ್ನು ಬಂಧಿಸುವ ಜತೆ ಹಿಂಸಾಚಾರವನ್ನು ತಡೆಗಟ್ಟಿದ್ದಾರೆ.

ಫ್ರಾನ್ಸ್​ ದೇಶಾದ್ಯಂತ 1,38,000 ಜನರು ಸರ್ಕಾರದ ವಿರುದ್ಧದ ಯೆಲ್ಲೋ ವೆಸ್ಟ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ರಾಜಧಾನಿ ಫ್ರಾನ್ಸ್​ನಲ್ಲಿ 10,000 ಜನ ಬೀದಿಗಿಳಿದಿದ್ದರು. ಮಾರ್ಸಿಲ್ಲೆ, ಬೋರ್ಡೆಕ್ಸ್, ಲಿಯಾನ್ ಮತ್ತು ಟೌಲೌಸ್ ಸೇರಿ ಹಲವು ಪ್ರದೇಶಗಳಲ್ಲಿ ರಸ್ತೆಗಳನ್ನು ಬಂದ್​ ಮಾಡಲಾಗಿತ್ತು. ಪೊಲೀಸರು ಮತ್ತು ಪ್ರತಿಭಟನಾಕಾರರ ವಿರುದ್ಧ ಘರ್ಷಣೆಗಳು ನಡೆದಿದ್ದವು ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ.