ಫುಟ್​ಬಾಲ್ ವಿಶ್ವಕಪ್​ಗೆ ಫ್ರೆಂಚ್ ಕಿಸ್

ಫ್ರಾನ್ಸ್ ವಿಶ್ವಸಾಮ್ರಾಟ

ಫ್ರಾನ್ಸ್ ತಂಡ 20 ವರ್ಷಗಳ ಬಳಿಕ 2ನೇ ಬಾರಿ ಫಿಫಾ ವಿಶ್ವಕಪ್​ಗೆ ಮುತ್ತಿಕ್ಕಿದೆ. ಮಾಸ್ಕೋದಲ್ಲಿ ಭಾನುವಾರ ನಡೆದ 21ನೇ ಆವೃತ್ತಿಯ ಟೂರ್ನಿಯ ಫೈನಲ್​ನಲ್ಲಿ ಫ್ರಾನ್ಸ್ ತಂಡ ಕ್ರೊವೇಷಿಯಾ ತಂಡವನ್ನು 4-2 ಗೋಲುಗಳಿಂದ ಸೋಲಿಸಿ ಮಿರುಗುವ ವಿಶ್ವಕಪ್ ವಶಪಡಿಸಿಕೊಂಡಿದೆ. 1998ರಲ್ಲಿ ತವರಲ್ಲೇ ನಡೆದ ವಿಶ್ವಕಪ್​ನಲ್ಲಿ ಫ್ರಾನ್ಸ್ ಮೊದಲ ಬಾರಿ ವಿಶ್ವ ಚಾಂಪಿಯನ್ ಪಟ್ಟವೇರಿತ್ತು.

# 2 ಬಾರಿ ಗೆದ್ದ 6ನೇ ತಂಡ

# 20 ವರ್ಷಗಳ ಬಳಿಕ ಪ್ರಶಸ್ತಿ ಜಯ

# ಡಿಡಿಯರ್ ಡೆಶಾಂಪ್ಸ್ ಆಟಗಾರ, ಕೋಚ್ ಆಗಿ ವಿಶ್ವಕಪ್ ಗೆದ್ದ 3ನೇ ಸಾಧಕ

ರಷ್ಯಾ ವಿಶ್ವಕಪ್ ಅಂಕಿ-ಅಂಶ

# ಪಂದ್ಯ: 64

# ಗೋಲು: 169

# ಗೋಲು ಸರಾಸರಿ: 3

# ಗರಿಷ್ಠ ಗೋಲು: ಬೆಲ್ಜಿಯಂ (16)

# ಗೋಲ್ಡನ್ ಬೂಟ್: ಹ್ಯಾರಿ ಕೇನ್ (6 ಗೋಲು, ಇಂಗ್ಲೆಂಡ್)

ಫ್ರಾನ್ಸ್ ಹಾದಿ

# ಸೆಮಿಫೈನಲ್: ಬೆಲ್ಜಿಯಂ ವಿರುದ್ಧ 1-0 ಜಯ

# 8ರ ಘಟ್ಟ: ಉರುಗ್ವೆ ವಿರುದ್ಧ 2-0 ಜಯ

# 16ರ ಘಟ್ಟ: ಅರ್ಜೆಂಟೀನಾ ವಿರುದ್ಧ 4-3 ಜಯ

# ಲೀಗ್: ಡೆನ್ಮಾರ್ಕ್ ವಿರುದ್ಧ 0-0 ಡ್ರಾ

# ಲೀಗ್: ಪೆರು ವಿರುದ್ಧ 1-0 ಗೆಲುವು

# ಲೀಗ್: ಆಸ್ಟ್ರೇಲಿಯಾ ವಿರುದ್ಧ 2-1 ಜಯ

ಮುಂದಿನ ಫಿಫಾ ವಿಶ್ವಕಪ್

# 2022 ನವೆಂಬರ್ 21-ಡಿಸೆಂಬರ್ 18

# ಆತಿಥೇಯ ದೇಶ: ಕತಾರ್ (8 ನಗರ)


ಫುಟ್​ಬಾಲ್ ವಿಶ್ವಕಪ್​ಗೆ ಫ್ರೆಂಚ್ ಕಿಸ್

ಮಾಸ್ಕೋ: ವಿಶ್ವಕಪ್ ಫುಟ್​ಬಾಲ್ ಟೂರ್ನಿಯಲ್ಲಿ 20 ವರ್ಷಗಳ ಬಳಿಕ ಫ್ರಾನ್ಸ್ ನಿರೀಕ್ಷೆ ಸಾಕಾರವಾಗಿದೆ. ಕ್ರೊವೇಷಿಯಾದ ಪ್ರಬಲ ಚಕ್ರವ್ಯೂಹವನ್ನು ಎಚ್ಚರಿಕೆಯಿಂದಲೇ ಭೇದಿಸಿದ ಫ್ರಾನ್ಸ್, ಕಾಲ್ಚೆಂಡು ಜಗತ್ತಿನ ನೂತನ ಸಾಮ್ರಾಟ ಎನಿಸಿದೆ. 1998ರಲ್ಲಿ ತನ್ನದೇ ನೆಲದಲ್ಲಿ ಮೊದಲ ಬಾರಿಗೆ ಚಿನ್ನದ ಟ್ರೋಫಿಯನ್ನು ಎತ್ತಿ ಹಿಡಿದಿದ್ದ ಫ್ರಾನ್ಸ್ ತಂಡವನ್ನು ಅಂದು ಮುನ್ನಡೆಸಿದ್ದ ಡಿಡಿಯರ್ ಡೆಶಾಂಪ್ಸ್ ತರಬೇತಿಯಲ್ಲಿ ಈ ಬಾರಿ ಟ್ರೋಫಿ ಗೆದ್ದುಕೊಂಡಿದೆ. ಅದರೊಂದಿಗೆ 2 ಹಾಗೂ ಅದಕ್ಕಿಂತ ಹೆಚ್ಚಿನ ಬಾರಿ ವಿಶ್ವಕಪ್ ಟ್ರೋಫಿ ಜಯಿಸಿದ 6ನೇ ತಂಡ ಎನ್ನುವ ಸಾಧನೆ ಮಾಡಿತು. ಆಟಗಾರ ಹಾಗೂ ಕೋಚ್ ಆಗಿ ವಿಶ್ವಕಪ್ ಗೆದ್ದ 3ನೇ ಸಾಧಕ ಎನ್ನುವ ಗೌರವ ಡಿಡಿಯರ್ ಡೆಶಾಂಪ್ಸ್ ಪಾಲಾಯಿತು.

ಲಜ್ನಿಕಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಲೆಸ್ ಬ್ಲ್ಯೂಸ್ ಖ್ಯಾತಿಯ ಫ್ರಾನ್ಸ್ 4-2 ಗೋಲುಗಳಿಂದ ಕ್ರೊವೇಷಿಯಾ ತಂಡವನ್ನು ಸೋಲಿಸಿತು. ಮೊದಲ ಅವಧಿಯಲ್ಲಿ ಫ್ರಾನ್ಸ್ ಬಾರಿಸಿದ ಎರಡೂ ಗೋಲುಗಳು ಕ್ರೊವೇಷಿಯಾದ ಪ್ರಮಾದದಿಂದ ಬಂದರೆ, 2ನೇ ಅವಧಿಯಲ್ಲಿ ಪೌಲ್ ಪೋಗ್ಬಾ ಹಾಗೂ ಕೈಲಿಯನ್ ಬಾಪೆ ಬಾರಿಸಿದ ಗೋಲು ಫ್ರೆಂಚರ ವಿಶ್ವಕಪ್ ವಿಜಯವನ್ನು ಖಚಿತಪಡಿಸಿತು. ಪಂದ್ಯ ಆರಂಭವಾದ ಕ್ಷಣದಿಂದಲೂ ಫ್ರಾನ್ಸ್​ನ ಪ್ರಬಲ ರಕ್ಷಣಾ ವಿಭಾಗದ ಮೇಲೆ ಬೆನ್ನುಬೆನ್ನಿಗೆ ದಾಳಿ ನಡೆಸುತ್ತಿದ್ದ ಕ್ರೊವೇಷಿಯಾ, 18ನೇ ನಿಮಿಷದಲ್ಲಿ ಹಿನ್ನಡೆ ಕಂಡಿತು. ಪೆನಾಲ್ಟಿ ಆವರಣದ ಮುಂದೆ ಬ್ರೊಜೋವಿಕ್, ಗ್ರಿಜ್​ವುನ್ ಮೇಲೆ ಫೌಲ್ ಎಸಗಿದ್ದರಿಂದ ರೆಫ್ರಿ ಫ್ರೀ ಕಿಕ್ ನೀಡಿದರು. ಈ ಅವಕಾಶದಲ್ಲಿ ಗ್ರಿಜ್​ವುನ್ ಬಾರಿಸಿದ ಚೆಂಡನ್ನು ಕ್ಲಿಯರ್ ಮಾಡುವ ಯತ್ನದಲ್ಲಿ ಎಡವಿದ ಕ್ರೊವೇಷಿಯಾದ ಸ್ಟ್ರೈಕರ್ ಮಾರಿಯೋ ಮಾಂಡ್ಜುಕಿಕ್ ತಮ್ಮದೇ ಗೋಲುಪೆಟ್ಟಿಗೆಗೆ ಚೆಂಡನ್ನು ಸೇರಿಸಿದರು. ಹಿಂದಿನ ಮೂರೂ ನಾಕೌಟ್ ಪಂದ್ಯಗಳಲ್ಲಿ ಮೊದಲು ಹಿನ್ನಡೆ ಕಂಡಿದ್ದ ಕ್ರೊವೇಷಿಯಾ ಆ ಬಳಿಕ ಗೋಲು ಬಾರಿಸಿತ್ತು. ಈ ಬಾರಿಯೂ ಅದೇ ಸ್ಥಿತಿ ಮರುಕಳಿಸಿತು. 28 ನಿಮಿಷದಲ್ಲಿ ಫ್ರಾನ್ಸ್ ಗೋಲು ಪೆಟ್ಟಿಗೆಯ ಆವರಣದಲ್ಲಿ ಮುನ್ಪಡೆ ಆಟಗಾರರ ಸಂಘಟಿತ ಪ್ರಯತ್ನದ ನೆರವಿನಿಂದ ಇವಾನ್ ಪೆರಿಸಿಕ್ ಗೋಲು ಸಿಡಿಸಿದರು. ಫ್ರೀ ಕಿಕ್ ಅವಕಾಶದಲ್ಲಿ ಮಾಂಡ್ಜುಕಿಕ್ ಮಾಡಿದ ಪ್ರಯತ್ನವನ್ನು ಕ್ಲಿಯರ್ ಮಾಡುವಲ್ಲಿ ಫ್ರಾನ್ಸ್ ವಿಫಲವಾಯಿತು. ವಿಡಾ ಚೆಂಡನ್ನು ಪೆರಿಸಿಕ್​ಗೆ ನೀಡಿದರು. ಸ್ವಲ್ಪ ಹೊತ್ತು ಯೋಚನೆ ಮಾಡಿ ಚೆಂಡನ್ನು ಡ್ರಿಬಲ್ ಮಾಡಿದ ಪೆರಿಸಿಕ್, ಎಡಗಾಲಿನಿಂದ ಚೆಂಡನ್ನು ಒದ್ದು ಗುರಿ ಸೇರಿಸಿದರು.

ಪೆರಿಸಿಕ್ ಪ್ರಮಾದ

ಸಮಬಲದ ಗೋಲಿಗೆ ನೆರವಾಗಿದ್ದ ಪೆರಿಸಿಕ್​ರಿಂದಲೇ ಫ್ರಾನ್ಸ್ 2ನೇ ಬಾರಿ ಮುನ್ನಡೆ ಕಂಡಿತು. 38ನೇ ನಿಮಿಷದಲ್ಲಿ ಫ್ರಾನ್ಸ್​ಗೆ ಸಿಕ್ಕ ಫ್ರೀ ಕಿಕ್​ನಲ್ಲಿ ಪೆರಿಸಿಕ್ ಹ್ಯಾಂಡ್​ಬಾಲ್ ಪ್ರಮಾದ ಮಾಡಿದರು. ವಿಎಆರ್ ಪರಿಶೀಲನೆ ಮೂಲಕ ರೆಫ್ರಿ ಪೆನಾಲ್ಟಿ ತೀರ್ಪು ನೀಡಿದರು. ಅಂಟೋಯಿನ್ ಗ್ರಿಜ್​ವುನ್ ಯಾವುದೇ ತಪು್ಪ ಮಾಡದೆ ಚೆಂಡನ್ನು ಗುರಿ ಮುಟ್ಟಿಸಿದರು.

ವಿಶ್ವಕಪ್ ಫೈನಲ್​ನಲ್ಲಿ ಜಂಟಿ 2ನೇ ಗರಿಷ್ಠ ಗೋಲು ದಾಖಲಾದವು. 1930ರಲ್ಲಿ ಉರುಗ್ವೆ-ಅರ್ಜೆಂಟೀನಾ (4-2), 1938ರಲ್ಲಿ ಇಟಲಿ-ಹಂಗೆರಿ (4-2) ಹಾಗೂ 1966ರಲ್ಲಿ ಇಂಗ್ಲೆಂಡ್-ಜರ್ಮನಿ (4-2) ನಡುವಿನ ವಿಶ್ವಕಪ್ ಫೈನಲ್​ನಲ್ಲಿಯೂ 6 ಗೋಲು ಸಿಡಿದಿದ್ದವು. 1958ರಲ್ಲಿ ಬ್ರೆಜಿಲ್ ಹಾಗೂ ಸ್ವೀಡನ್ (5-2) ನಡುವಿನ ಫೈನಲ್​ನಲ್ಲಿ 7 ಗೋಲು ಸಿಡಿದಿರುವುದು ವಿಶ್ವಕಪ್ ದಾಖಲೆ.

ಕೈಲಿಯನ್ ಬಾಪೆ ದಾಖಲೆ

ವಿಶ್ವಕಪ್ ಫೈನಲ್​ನಲ್ಲಿ ಗೋಲು ಬಾರಿಸಿದ 2ನೇ ಕಿರಿಯ ಆಟಗಾರ ಕೈಲಿಯನ್ ಬಾಪೆ. 1958ರಲ್ಲಿ ಸ್ವೀಡನ್ ವಿರುದ್ಧ ಪೀಲೆ 17 ವರ್ಷ 249ನೇ ದಿನದಲ್ಲಿ ಗೋಲು ಬಾರಿಸಿದ್ದು ಸಾಧನೆಯಾಗಿದ್ದರೆ, ಬಾಪೆ 19 ವರ್ಷ 207ನೇ ದಿನದಲ್ಲಿ ಗೋಲು ಬಾರಿಸಿದರು. ಅದಲ್ಲದೆ, ವಿಶ್ವಕಪ್ ಫೈನಲ್ ಆಡಿದ 3ನೇ ಕಿರಿಯ ಆಟಗಾರ ಬಾಪೆ.

ಆಟಗಾರ ಹಾಗೂ ಕೋಚ್ ಆಗಿ ವಿಶ್ವಕಪ್ ಗೆದ್ದ 3ನೇ ವ್ಯಕ್ತಿ ಡಿಡಿಯರ್ ಡೆಶಾಂಪ್ಸ್. ಬ್ರೆಜಿಲ್​ನ ಮಾರಿಯೋ ಜಾಗಲ್ಲೋ ಹಾಗೂ ಜರ್ಮನಿಯ ಫ್ರಾಂಜ್ ಬೆಕನ್​ಬುರ್ ಈ ಸಾಧನೆ ಮಾಡಿದ ಉಳಿದ ಇಬ್ಬರು. ವಿಶ್ವಕಪ್ ಫೈನಲ್​ನಲ್ಲಿ ಸ್ವಗೋಲಿನ ಪ್ರಮಾದ ಮಾಡಿದ ಮೊದಲ ಆಟಗಾರ ಮಾರಿಯೋ ಮಾಂಡ್ಜುಕಿಕ್.

ಗೆದ್ದವರಿಗೆ ಸಿಗುವುದು ಟ್ರೋಫಿಯ ನಕಲು

ವಿಶ್ವ ಚಾಂಪಿಯನ್ ತಂಡಕ್ಕೆ ಸಿಗುವುದು ನೈಜ ಟ್ರೋಫಿಯ ನಕಲು ಮಾತ್ರ. 1974ರಿಂದ ಹೊಸ ಟ್ರೋಫಿಯನ್ನು ಬಳಸಲಾಗುತ್ತಿದೆ. ಫೈನಲ್ ಪಂದ್ಯದ ದಿನ ಗೆದ್ದ ಚಾಂಪಿಯನ್ ತಂಡಕ್ಕೆ ಹಸ್ತಾಂತರ ಮಾಡುವುದು ನೈಜ ಟ್ರೋಫಿಯಾದರೂ, ಬಳಿಕ ತಂಡಕ್ಕೆ ಅಷ್ಟೇ ಮೌಲ್ಯದ ವಿಶ್ವಕಪ್​ನ ಪ್ರತಿಕೃತಿ ನೀಡಲಾಗುತ್ತದೆ. ನೈಜ ಟ್ರೋಫಿ ಫಿಫಾದ ಮ್ಯೂಸಿಯಂಗೆ ಸೇರಲಿದೆ. ವಿಶ್ವಕಪ್ ಟ್ರೋಫಿಯ ಮೌಲ್ಯ ಅಂದಾಜು 137 ಕೋಟಿ ರೂಪಾಯಿ (20 ಮಿಲಿಯನ್ ಯುಎಸ್ ಡಾಲರ್).

ಮುಂಬರುವ ಏಷ್ಯನ್ ಗೇಮ್ಸ್​ನ ಕ್ರೀಡಾಜ್ಯೋತಿ ರಿಲೇ ಭಾನುವಾರ ನವದೆಹಲಿ ಯಲ್ಲಿ ಆರಂಭಗೊಂಡಿತು.  1951ರಲ್ಲಿ ಏಷ್ಯಾಡ್ ಜನ್ಮತಳೆದ ದೆಹಲಿಯ ರಾಷ್ಟ್ರೀಯ ಕ್ರೀಡಾಂಗಣ ದಲ್ಲಿ ಭಾರತದ ಅಗ್ರ ಕ್ರೀಡಾಪಟುಗಳ ಉಪಸ್ಥಿತಿ ಯಲ್ಲಿ ಟಾರ್ಚ್ ರಿಲೇಯ 18,000 ಕಿಮೀ. ಪ್ರಯಾಣಕ್ಕೆ ಚಾಲನೆ ನೀಡಲಾಯಿತು. ಆಗಸ್ಟ್ 18ರಿಂದ 18ನೇ ಆವೃತ್ತಿಯ ಏಷ್ಯಾಡ್ ಆತಿಥ್ಯ ವಹಿಸಿಕೊಳ್ಳಲಿರುವ ಇಂಡೋನೇಷ್ಯಾಗೆ ಕ್ರೀಡಾ ಜ್ಯೋತಿ ತೆರಳಲಿದ್ದು, ಅಲ್ಲಿ ಪ್ರಂಬನನ್ ಹಿಂದು ದೇವಾಲಯದ ಪವಿತ್ರ ಜ್ಯೋತಿಯೊಂದಿಗೆ ವಿಲೀನವಾಗಲಿದೆ. ಬಳಿಕ ದ್ವೀಪರಾಷ್ಟ್ರದ 54 ನಗರಗಳಲ್ಲಿ ಟಾರ್ಚ್ ರಿಲೇ ಸಾಗಲಿದೆ.