ಸಾವಿಗೆ ಕೊರಳೊಡ್ಡಿದ 243 ಅನ್ನದಾತರು..!


ಕೆ.ಎನ್. ರಾಘವೇಂದ್ರ ಮಂಡ್ಯ
ಹಸಿರಿನಿಂದಲೇ ಕಂಗೊಳಿಸುತ್ತಿದ್ದ ಮಂಡ್ಯ ಜಿಲ್ಲೆಯ ಪರಿಸ್ಥಿತಿ ಬದಲಾಗಿದೆ. ಈಗ ಎಲ್ಲಿ ನೋಡಿದರೂ ಬರದ ಛಾಯೆ. ಸಾಲ ಮಾಡಿ ಬೆಳೆ ಬೆಳೆದ ರೈತರು, ಹಾಕಿದ ಬಂಡವಾಳವೂ ಸಿಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ರೀತಿ ನಾಲ್ಕು ವರ್ಷದಲ್ಲಿ ಬರೋಬ್ಬರಿ 243 ಅನ್ನದಾತರೂ ಸಾವಿಗೆ ಶರಣಾಗಿದ್ದಾರೆನ್ನುವ ವರದಿ ಆತಂಕ ಮೂಡಿಸುತ್ತಿದೆ.
ಹೌದು, ಬೇರೆ ಜಿಲ್ಲೆಗೆ ಹೋಲಿಸಿದರೆ ಮಂಡ್ಯದಲ್ಲಿಯೇ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಯಾವುದೇ ಸರ್ಕಾರ ಬಂದರೂ ಮೃತಪಟ್ಟವರ ಕುಟುಂಬಕ್ಕೆ ಇಂತಿಷ್ಟು ಪರಿಹಾರ ಕೊಟ್ಟು ಸುಮ್ಮನಾಗುತ್ತಿದೆಯೇ ಹೊರತು, ವಾಸ್ತವ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿರುವುದು ದುರಂತ. ಪರಿಣಾಮ 2016-17ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 75, 17-18ರಲ್ಲಿ 110, 18-19ರಲ್ಲಿ 57 ಮತ್ತು 19-20ನೇ ಸಾಲಿನಲ್ಲಿ 1 ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.
ಒಂದೆಡೆ ಬ್ಯಾಂಕ್‌ಗಳು ಜಾರಿಗೊಳಿಸುವ ಸಾಲದ ನೋಟಿಸ್‌ಗೆ ಹೆದರಬೇಡಿ ಎಂದು ಸಿಎಂ ಕುಮಾರಸ್ವಾಮಿ ಹೇಳುತ್ತಿದ್ದರೆ, ಬ್ಯಾಂಕುಗಳು ಸಾಲ ತೀರಿಸದ ರೈತರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸುತ್ತಿವೆ. ಇತ್ತ ಸಾಲ ಮನ್ನಾ ಇನ್ನೂ ಗೊಂದಲದಲ್ಲಿಯೇ ಇದೆ. ಜಿಲ್ಲೆಯ ಸಹಕಾರ ಬ್ಯಾಂಕುಗಳಲ್ಲಿನ 513 ಕೋಟಿ ರೂ. ರೈತರ ಸಾಲದ ಹಣದಲ್ಲಿ 331.01 ಕೋಟಿ ರೂ. ಮಾತ್ರ ಮನ್ನಾ ಆಗಿದೆ.
ಇನ್ನು ಬ್ಯಾಂಕ್‌ಗಿಂತ ಖಾಸಗಿ ಸಾಲಕ್ಕೆ ಹೆದರಿ ರೈತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಖಾಸಗಿ ಸಾಲಕ್ಕೆ ಕಡಿವಾಣ ಹಾಕಲು ಕೇರಳ ಮಾದರಿಯ ಕಾನೂನು ಜಾರಿಗೆ ತರುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಆದರೆ, ಇದಕ್ಕೂ ಮುನ್ನ ರೈತರಿಗೆ ಅಗತ್ಯವಿರುವ ನೀರು ಕೊಡಲು ಮುಂದಾಗಬೇಕಿದೆ. ಇದನ್ನೇ ಹೋರಾಟಗಾರರು ಕೂಡ ಹೇಳುತ್ತಿದ್ದು, ಸತ್ತ ಮೇಲೆ ಪರಿಹಾರ ನೀಡುವುದಕ್ಕಿಂತ ಸಮಸ್ಯೆಯೇ ಬಾರದಂತೆ ಗಮನಹರಿಸಬೇಕೆಂದು ಸಲಹೆ ನೀಡುತ್ತಿದ್ದಾರೆ.
ಇದಲ್ಲದೆ, ಕೆರೆ-ಕಟ್ಟೆಗಳ ಪುನಶ್ಚೇತನ, ಅಂತರ್ಜಲ ವೃದ್ಧಿ, ಮಳೆ ನೀರು ಸಂಗ್ರಹ ಹೆಚ್ಚಳ ಮಾಡುವ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಕೆರೆಯಿಂದ ಕೆರೆಗೆ ನೀರು ಹರಿಸುವ ಯೋಜನೆ ಘೋಷಣೆ ಮಾಡಿ ವರ್ಷವಾದರೂ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಜಿಲ್ಲೆಯಲ್ಲಿ 686 ಕೆರೆಗಳಿದ್ದರೂ, ಅವುಗಳನ್ನು ಸುಸ್ಥಿತಿಯಲ್ಲಿ ಕಾಪಾಡುವ, ಒತ್ತುವರಿ ತೆರವುಗೊಳಿಸುವ, ಹೂಳು ತೆಗೆಸಿ ನೀರಿನ ಸಂಗ್ರಹ ಪ್ರಮಾಣ ಹೆಚ್ಚಿಸುವ ಯೋಜನೆ ಮಾಡುತ್ತಿಲ್ಲ.
ಇತ್ತೀಚಿನ ವರ್ಷದಲ್ಲಿ ಮಳೆ ಬಂದರಷ್ಟೇ ಬೇಸಾಯ. ಇಲ್ಲದಿದ್ದರೆ ರೈತನ ಬದುಕು ಅತಂತ್ರ ಎನ್ನುವಂತಾಗಿದೆ. ಇನ್ನು ರೈತರ ಜೀವನಾಡಿ ಕೆಆರ್‌ಎಸ್ ಡ್ಯಾಂನ ನಿರ್ವಹಣೆಯೂ ಪ್ರಾಧಿಕಾರದ ಬಳಿ ಸೇರಿಕೊಂಡಿರುವುದು ಮುಂದೇನೂ ಎನ್ನುವಂತಹ ಆತಂಕ ರೈತರಿಗಿದೆ.

ರೈತರ ಆತ್ಮಹತ್ಯೆ ಪ್ರಕರಣ(2016-17)
ತಾಲೂಕು ಪ್ರಕರಣ ಪರಿಹಾರ ವಿತರಣೆ
ಮಂಡ್ಯ 15 15
ಮದ್ದೂರು 28 27
ಕೆ.ಆರ್.ಪೇಟೆ 12 12
ಮಳವಳ್ಳಿ 9 8
ಪಾಂಡವಪುರ 6 5
ನಾಗಮಂಗಲ 5 5
(ಶ್ರೀರಂಗಪಟ್ಟಣ ತಾಲೂಕಿನಲ್ಲಿ ಯಾವುದೇ ಪ್ರಕರಣವಿಲ್ಲ)

(2017-18)
ತಾಲೂಕು ಪ್ರಕರಣ ಪರಿಹಾರ ವಿತರಣೆ
ಮದ್ದೂರು 50 39
ಪಾಂಡವಪುರ 14 13
ಕೆ.ಆರ್.ಪೇಟೆ 14 11
ಮಳವಳ್ಳಿ 14 7
ಮಂಡ್ಯ 13 9
ಶ್ರೀರಂಗಪಟ್ಟಣ 2 2
ನಾಗಮಂಗಲ 3 3

(2018-19)
ತಾಲೂಕು ಪ್ರಕರಣ ಪರಿಹಾರ ವಿತರಣೆ
ಮದ್ದೂರು 19 15
ಪಾಂಡವಪುರ 11 7
ಮಳವಳ್ಳಿ 10 6
ಮಂಡ್ಯ 7 7
ನಾಗಮಂಗಲ 5 5
ಕೆ.ಆರ್.ಪೇಟೆ 3 3
ಶ್ರೀರಂಗಪಟ್ಟಣ 2 2

ರಾಜ್ಯದ ಬೇರೆ ಜಿಲ್ಲೆಗಳಿಗಿಂತ ಮಂಡ್ಯದಲ್ಲಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಿಂದೆ ನಾನು ಗೃಹ ಸಚಿವರಾಗಿದ್ದ ಮಾಹಿತಿ ಬರುತ್ತಿತ್ತು. ಕಬ್ಬು ಬೆಳೆ ಮತ್ತು ಬೆಳೆಗೆ ಸರಿಯಾದ ಬೆಲೆ ಸಿಗದಿರುವುದು ಅದಕ್ಕೆ ಕಾರಣ. ರಾಹುಲ್ಗಾಂಧಿ ಅವರು ಕೂಡ ಇಲ್ಲಿಗೆ ಬಂದಿದ್ದರು. ರೈತ ಆತ್ಮಹತ್ಯೆಯಂತಹ ಘಟನೆ ಮತ್ತೆ ಮರುಕಳಿಸಬಾರದು.
ಡಾ.ಜಿ.ಪರಮೇಶ್ವರ್
ಉಪಮುಖ್ಯಮಂತ್ರಿ

ರೈತರು ಆತ್ಮಹತ್ಯೆ ಮಾಡಿಕೊಂಡ ಬಳಿಕ ಅವರ ಕುಟುಂಬದವರಿಗೆ ಹೋಗಿ ಪರಿಹಾರ ವಿತರಿಸುವುದನ್ನೇ ದೊಡ್ಡದು ಎನ್ನುವಂತೆ ಬಿಂಬಿಸಲಾಗುತ್ತಿದೆ. ಇದರ ಬದಲು ಕೃಷಿಯಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರವಾದರೂ ಸ್ವಾಮಿನಾಥನ್ ವರದಿ ಜಾರಿಗೊಳಿಸುವ ಮೂಲಕ ರೈತರಿಗೆ ಅನುಕೂಲ ಮಾಡಬೇಕಿದೆ.
ಶಂಭೂನಹಳ್ಳಿ ಸುರೇಶ್
ಜಿಲ್ಲಾಧ್ಯಕ್ಷ ರಾಜ್ಯ ರೈತ ಸಂಘ

ಅಂಕಿ ಅಂಶದ ವ್ಯತ್ಯಾಸ
ಸಾಲಬಾಧೆ ತಾಳಲಾರದೇ ನಿರಂತರ ಆತ್ಮಹತ್ಯೆ ನಡೆಯುತ್ತಿದೆ. ಕಳೆದ ವಾರದಲ್ಲಿಯೇ ಮೂವರು ಅನ್ನದಾತರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ, ಕೃಷಿ ಇಲಾಖೆ ಮಾಹಿತಿ ಪ್ರಕಾರ 2019-20ನೇ ಸಾಲಿನಲ್ಲಿ ಒಂದೇ ಪ್ರಕರಣ ಅಂದರೆ ದಾಖಲಾಗಿದೆ. ಇದರಿಂದಾಗಿ ವರದಿಯಾಗುತ್ತಿರುವ ಸಂಖ್ಯೆಗೂ ಮತ್ತು ವಾಸ್ತವ ಸಂಖ್ಯೆಗೂ ಹೋಲಿಕೆಯೇ ಆಗುತ್ತಿಲ್ಲ. ಜತೆಗೆ ಗೊಂದಲ ಸೃಷ್ಠಿಸುತ್ತಿದೆ.

Leave a Reply

Your email address will not be published. Required fields are marked *