ವಿಆರ್​ಎಲ್ ಮೀಡಿಯಾದ ನಾಲ್ವರಿಗೆ ಮಾಧ್ಯಮ ಪ್ರಶಸ್ತಿ

ಬೆಂಗಳೂರು: ‘ವಿಜಯವಾಣಿ’ ಸಂಪಾದಕ ಕೆ.ಎನ್. ಚನ್ನೇಗೌಡ, ಹುಬ್ಬಳ್ಳಿ ಆವೃತ್ತಿ ಸ್ಥಾನಿಕ ಸಂಪಾದಕ ಮೋಹನ ಹೆಗಡೆ, ಹಿರಿಯ ವರದಿಗಾರ ಪಾ.ಶ್ರೀ. ಅನಂತರಾಮ್ ಸೇರಿ 49 ಹಿರಿಯ ಪತ್ರಕರ್ತರಿಗೆ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ‘ದಿಗ್ವಿಜಯ 24×7 ನ್ಯೂಸ್’ ಸಹಾಯಕ ಸುದ್ದಿ ಸಂಪಾದಕ ಪರಮೇಶ್ವರ ಭಟ್ ಅವರ ‘ಬದಲಾದ ಕೆರೆಗಳಿಂದ ಬದಲಾಯ್ತು ಬದುಕು’ ಲೇಖನಕ್ಕೆ ಅಭಿಮಾನಿ ಪ್ರಶಸ್ತಿ ನೀಡಲಾಯಿತು. ಜತೆಗೆ ಜೀವಮಾನ ಸಾಧನೆಗೆ ಹಿರಿಯ ಪತ್ರಕರ್ತ ಧರ್ವವರಪು ಬಾಲಾಜಿ ಅವರಿಗೆ ವಿಶೇಷ ಪ್ರಶಸ್ತಿ ಕೊಡಲಾಯಿತು.

ಅಂಕಣಕಾರ ಡಾ.ಸಿ.ಎಸ್. ದ್ವಾರಕಾನಾಥ್ ಅವರಿಗೆ ಡಾ.ಬಿ.ಆರ್. ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿ, ಕೋಲಾರವಾಣಿ ಪತ್ರಿಕೆಗೆ ಆಂದೋಲನ ಪ್ರಶಸ್ತಿ, ದೇಶಾದ್ರಿ ಹೊಸ್ಮನೆ ಅವರಿಗೆ ಅರಗಿಣಿ ಪ್ರಶಸ್ತಿ, ಜಿ.ಎನ್. ನಾಗರಾಜ್ ಅವರಿಗೆ ಮೈಸೂರು ದಿಗಂತ ಪ್ರಶಸ್ತಿ ನೀಡಲಾಯಿತು.

ಡಿಸಿಎಂ ಡಾ. ಜಿ. ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್ ಸಾಧಕರಿಗೆ ಪ್ರಶಸ್ತಿ ವಿತರಿಸಿ ಗೌರವಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎಂ.ರವಿಕುಮಾರ್, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್. ಕಾಂತರಾಜು, ಸಿಎಂ ಮಾಧ್ಯಮ ಕಾರ್ಯದರ್ಶಿ ದಿನೇಶ್, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸಿದ್ದರಾಜು ಇದ್ದರು.

ಮಾಧ್ಯಮಗಳು ಸಮಾಜದ ಪ್ರತಿಬಿಂಬವಾಗಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತವೆ. ಮಾಧ್ಯಮದಲ್ಲಿ ಈಗಲೂ ಇರುವುದಕ್ಕೆ ಮನೆಯಿಲ್ಲದೆ, ಊಟಕ್ಕೆ ಹಣವಿಲ್ಲದೆ ವೃತ್ತಿ ಜೀವನ ನಡೆಸುವವರಿದ್ದಾರೆ. ಹಿರಿಯರು ತೋರಿದ ಹಾದಿಯಲ್ಲಿ ಅನೇಕರು ಸಾಗುತ್ತಿದ್ದಾರೆ. ಅದರ ನಡುವೆಯೂ ಕೆಲವರು ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡು, ಮಾಧ್ಯಮ ಕ್ಷೇತ್ರವನ್ನು ಕಲುಷಿತಗೊಳಿಸುತ್ತಿದ್ದಾರೆ.

| ಡಾ. ಜಿ. ಪರಮೇಶ್ವರ್, ಉಪಮುಖ್ಯಮಂತ್ರಿ

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಸಮತೋಲನದಿಂದ ಕೆಲಸ ಮಾಡುತ್ತಿವೆ. ಅದು ಮಾಧ್ಯಮಗಳಿಗೂ ಅನ್ವಯವಾಗಬೇಕು. ಮಾಧ್ಯಮಗಳಲ್ಲಿ ಬಿತ್ತರವಾಗುವ ಬಹುತೇಕ ಸುದ್ದಿಗಳು ವಿಜೃಂಭಣೆಯಿಂದ ಕೂಡಿರುತ್ತವೆ. ಅದು ಸಮಾಜದ ಮೇಲೆ ಪರಿಣಾಮ ಬೀರುವಂತಾಗಿದೆ.

| ಡಿ.ಕೆ.ಶಿವಕುಮಾರ್, ಸಚಿವ